ಶರಣರು ಈ ಜಗತ್ತಿನ ಎಲ್ಲಾ ಜಾತಿ ಮತಗಳಿಂದ ಹೊರತಾದವರು

KannadaprabhaNewsNetwork | Published : Mar 3, 2025 1:46 AM

ಸಾರಾಂಶ

ಬಸವಣ್ಣನವರು ಎಲ್ಲರನ್ನೂ ಶರಣರು ಎಂದು ಕರೆದರೂ ಅಂಬಿಗರ ಚೌಡಯ್ಯನವರಿಗೆ ಮಾತ್ರ ನಿಜ ಶರಣ ಎಂದಿದ್ದರು.

ಕನ್ನಡಪ್ರಭ ವಾರ್ತೆ ಮೈಸೂರು

ಶರಣರು ಈ ಜಗತ್ತಿನ ಎಲ್ಲಾ ಜಾತಿ ಮತಗಳಿಂದ ಹೊರತಾದವರು. ಆದರೆ, ನಾವು ಅವರನ್ನು ಜಾತಿ ಮತದ ಅಡಿಯಲ್ಲಿ ಚಿಕ್ಕವರಾಗಿ ಮಾಡಿದ್ದೇವೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದರು.ನಗರದ ಸುಣ್ಣದಕೇರಿ ಗಂಗಾಮಾತಸ್ಥರ ಭವನದಲ್ಲಿ ಸುವರ್ಣ ಬೆಳಕು ಫೌಂಡೇಶನ್ ಶನಿವಾರ ಆಯೋಜಿಸಿದ್ದ ನಿಜ ಶರಣ ಅಂಬಿಗರ ಚೌಡಯ್ಯ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಂಬಿಗರ ಚೌಡಯ್ಯ ನೇರ ನಿಷ್ಠುರವಾದಿಗಳಾಗಿ ಯಾರಿಗೂ ಹೆದರದೇ ಮಾತನಾಡುತ್ತಿದ್ದರು. ಬಸವಣ್ಣನವರು ಎಲ್ಲರನ್ನೂ ಶರಣರು ಎಂದು ಕರೆದರೂ ಅಂಬಿಗರ ಚೌಡಯ್ಯನವರಿಗೆ ಮಾತ್ರ ನಿಜ ಶರಣ ಎಂದಿದ್ದರು. ಅದರಿಂದಲೇ ಅವರು ಇತರರಿಗಿಂತ ಹೇಗೆ ಭಿನ್ನ ಎಂಬುದು ತಿಳಿಯುತ್ತದೆ ಎಂದು ಹೇಳಿದರು.ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಂಸ್ಕೃತಿಕ ನಾಯಕರು ಬೇಕು. ಅವರನ್ನು ಸಾಂಕೇತಿಕವಾಗಿ ಇಟ್ಟುಕೊಂಡು ಹಿಂದುಳಿದ ಸಮಾಜಗಳು ಒಗ್ಗೂಡಬೇಕು ಮತ್ತು ಸಂಘಟಿತರಾಗಬೇಕು. ಆಗ ಮಾತ್ರ ಹಿಂದುಳಿದ ಸಮಾಜಗಳು ಹಕ್ಕುಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದರು.ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಮತ್ತು ಸಮಾಜವನ್ನು ಒಗ್ಗೂಡಿಸಿಕೊಳ್ಳಲು ಇಂತಹ ಮಹನೀಯರನ್ನು ಸದಾ ನೆನೆಯಬೇಕು. ಆಗ ಮಾತ್ರ ಇಂತಹ ಮಹನೀಯರ ಜಯಂತಿಗಳಿಗೆ ನಿಜವಾದ ಅರ್ಥ ಬರುತ್ತದೆ ಎಂದು ಅವರು ತಿಳಿಸಿದರು.ಇದೇ ವೇಳ ಸಮಾಜದ ವಿವಿಧ ಕ್ಷೇತ್ರದ ಸಾಧಕರಾದ ಅಂತಾರಾಷ್ಟ್ರೀಯ ಖೋ ಖೋ ಆಟಗಾರ್ತಿ ಚೈತ್ರಾ, ಪತ್ರಕರ್ತ ಮೋಹನ್ ಕಾಯಕ, ಯೋಗ ಪೋಷಕ ಅನಂತ್, ಸಮಾಜ ಸೇವಕ ಹೇಮಂತ್ ಕುಮಾರ್ ಮತ್ತು ಯೋಗಾಚಾರ್ಯ ಕೆ.ಜಿ. ದೇವರಾಜು ಅವರಿಗೆ ಅಂಬಿಗರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಸಾಹಿತಿ ಡಾ. ಕಿರಣ್ ಸಿಡ್ಲಹಳ್ಳಿ ಅವರು ಅಂಬಿಗರ ಚೌಡಯ್ಯ ಕುರಿತು ಉಪನ್ಯಾಸ ನೀಡಿದರು. ಸಮಾಜ ಸೇವಕ ಕೆ. ರಘುರಾಂ ವಾಜಪೇಯಿ, ಫೌಂಡೇಶನ್ ಅಧ್ಯಕ್ಷ ಮಹೇಶ್ ಮೊದಲಾದವರು ಇದ್ದರು.

Share this article