ಇಂದಿನಿಂದ ರಾಜ್ಯ ವಿಧಾನಮಂಡಲದ ಅಧಿವೇಶನ : ಬೆಳಗ್ಗೆ 11ಕ್ಕೆ ಗೌರ್ನರ್‌ ಗೆಹಲೋತ್‌ ಭಾಷಣ

KannadaprabhaNewsNetwork | Updated : Mar 03 2025, 07:49 AM IST

ಸಾರಾಂಶ

ರಾಜ್ಯ ವಿಧಾನಮಂಡಲದ ಅಧಿವೇಶನ ಸೋಮವಾರದಿಂದ ಆರಂಭಗೊಳ್ಳಲಿದ್ದು, ಬೆಳಗ್ಗೆ 11 ಗಂಟೆಗೆ ಸಮಾವೇಶಗೊಳ್ಳಲಿರುವ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಭಾಷಣ ಮಾಡಲಿದ್ದಾರೆ.

 ಬೆಂಗಳೂರುರಾಜ್ಯ ವಿಧಾನಮಂಡಲದ ಅಧಿವೇಶನ ಸೋಮವಾರದಿಂದ ಆರಂಭಗೊಳ್ಳಲಿದ್ದು, ಬೆಳಗ್ಗೆ 11 ಗಂಟೆಗೆ ಸಮಾವೇಶಗೊಳ್ಳಲಿರುವ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಭಾಷಣ ಮಾಡಲಿದ್ದಾರೆ.

ಗ್ಯಾರಂಟಿ ಯೋಜನೆಗಳ ಅನುಷ್ಠಾನ, ಇನ್ನಿತರೆ ವಿವಿಧ ಜನಪರ ಕಾರ್ಯಕ್ರಮ ಹಾಗೂ ಅಭಿವೃದ್ಧಿ ಯೋಜನೆಗಳು ಸೇರಿದಂತೆ ಕಳೆದ ಒಂದು ವರ್ಷ ಒಂಬತ್ತು ತಿಂಗಳ ಆಡಳಿತದ ಬಗ್ಗೆ ರಾಜ್ಯಪಾಲರ ಭಾಷಣದಲ್ಲಿ ಮೆಚ್ಚುಗೆಯ ಮಾತುಗಳನ್ನು ಪ್ರಸ್ತಾಪಿಸುವುದು, ಜೊತೆಗೆ ಗ್ಯಾರಂಟಿಗಳನ್ನು ವಿರೋಧಿಸಿದರೆ ಬೇರೆ ರಾಜ್ಯಗಳ ಚುನಾವಣೆಯಲ್ಲಿ ಅವುಗಳನ್ನು ಅನುಸರಿಸಿದ ಕ್ರಮವನ್ನು ಪ್ರಸ್ತಾಪಿಸಿ ಪ್ರತಿಪಕ್ಷ ಬಿಜೆಪಿಗೆ ತಿರುಗೇಟು ನೀಡಲು ಸರ್ಕಾರ ಸಜ್ಜಾಗಿದೆ.

ಇದಕ್ಕೆ ಪ್ರತಿಯಾಗಿ ಪ್ರತಿಪಕ್ಷ ಬಿಜೆಪಿ ಕೂಡ ಸದನದಲ್ಲಿ ಸರ್ಕಾರದ ಆಡಳಿತ ವೈಫಲ್ಯಗಳ ಬಿಸಿ ಬಿಸಿ ಚರ್ಚೆಗೂ ಮೊದಲೇ ಸರ್ಕಾರ ರಾಜ್ಯಪಾಲರಿಗೆ ಒಂದೆಡೆ ನಿರಂತರ ಅಪಮಾನ ಮಾಡುತ್ತಿದೆ. ಮತ್ತೊಂದೆಡೆ ಸರ್ಕಾರದ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿಸುವ ಕೆಲಸ ಮಾಡುತ್ತಿರುವುದನ್ನು ವಿರೋಧಿಸಿ ಮೊದಲ ದಿನವೇ ಪ್ರತಿಭಟನೆಯ ಬಿಸಿ ಮುಟ್ಟಿಸಲು ಮುಂದಾಗಿದೆ. ಸೋಮವಾರ ಬೆಳಗ್ಗೆ ಶಾಸಕರ ಭವನದಿಂದ ವಿಧಾನಸೌಧಕ್ಕೆ ಬಿಜೆಪಿ ಶಾಸಕರು ಪಾದಯಾತ್ರೆ ನಡೆಸಿ, ಪ್ರತಿಭಟನೆ ನಡೆಸುವುದಾಗಿ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಘೋಷಿಸಿದ್ದಾರೆ.

ಈ ಮಧ್ಯೆ ಮುಡಾ ಪ್ರಕರಣದ ತನಿಖೆಗೆ ಪ್ರಾಸಿಕ್ಯೂಷನ್‌ ಸೇರಿದಂತೆ ವಿವಿಧ ವಿಚಾರಗಳಲ್ಲಿ ಸರ್ಕಾರದೊಂದಿಗಿನ ಸಂಘರ್ಷ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ವಿಶ್ವವಿದ್ಯಾಲಯದ ತಿದ್ದುಪಡಿ ವಿಧೇಯಕದ ವಿಚಾರದಲ್ಲಿ ಸರ್ಕಾರದ ಧೋರಣೆ ಖಂಡಿಸಿ ಸರ್ಕಾರಕ್ಕೆ ಕಾರವಾಗಿ ಪತ್ರ ಬರೆದಿರುವ ರಾಜ್ಯಪಾಲರು ಅಧಿವೇಶನದಲ್ಲಿ ಸರ್ಕಾರದ ಬಗ್ಗೆ ಯಾವ ರೀತಿ ಮಾತನಾಡಲಿದ್ದಾರೆ ಎಂಬುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದ ಬಳಿಕ ಕೆಲ ಕಾಲ ಸದನವನ್ನು ಸ್ಪೀಕರ್‌ ಮುಂದೂಡಲಿದ್ದು, ಬಳಿಕ ವಿಧಾನಸಭೆ ಮತ್ತು ವಿಧಾನ ಪರಿಷತ್‌ನಲ್ಲಿ ಪ್ರತ್ಯೇಕವಾಗಿ ಅಗಲಿದ ಗಣ್ಯರಿಗೆ ಸಂತಾಪ ಸೂಚನೆ ಕಲಾಪಗಳು ನಡೆಯಲಿವೆ. ಸೋಮವಾರದ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಅವಕಾಶ ನೀಡಲಿದ್ದು ಮಾ.6ರಂದು ಮುಖ್ಯಮಂತ್ರಿಗಳು ಉತ್ತರ ನೀಡಲಿದ್ದಾರೆ. ಮಾ.7ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾಖಲೆಯ 16ನೇ ಬಜೆಟ್‌ ಹಾಗೂ ಮುಖ್ಯಮಂತ್ರಿ ಆಗಿ 9ನೇ ಬಜೆಟ್‌ ಮಂಡನೆ ಮಾಡಲಿದ್ದಾರೆ.

ಬಿಜೆಪಿ ಬಳಿ ಹಲವು ಅಸ್ತ್ರ, ಸರ್ಕಾರದಲ್ಲಿ ಪ್ರತ್ಯಸ್ತ್ರ:

ಮಾ. 21ರವರೆಗೆ ನಡೆಯುವ ಅಧಿವೇಶನದಲ್ಲಿ ಗ್ಯಾರಂಟಿ ಹಣ ಬಿಡುಗಡೆ ವಿಳಂಬ, ಒಂಬತ್ತು ವಿಶ್ವವಿದ್ಯಾಲಯಗಳನ್ನು ಮುಚ್ಚುವ ನಿರ್ಧಾರ, ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಕೊರತೆ, ಕೆಪಿಎಸ್ಸಿ ಪರೀಕ್ಷೆಯಲ್ಲಿ ಕನ್ನಡಿಗರಿಗೆ ಅನ್ಯಾಯ, ಬಸ್‌, ಮೆಟ್ರೋ ದರ ಏರಿಕೆ, ಕೇಂದ್ರದ ತೆರಿಗೆ ಹಂಚಿಕೆಯಲ್ಲಿ ಆಗಿರುವ ಅನ್ಯಾಯ, ವಿವಿಧ ಯೋಜನೆಗಳಿಗೆ ಕೇಂದ್ರ ಅಂಗೀಕಾರ ನೀಡದೇ ಇರುವುದು ಸೇರಿದಂತೆ ಹಲವು ಅಸ್ತ್ರಗಳನ್ನು ತನ್ನ ಬತ್ತಳಿಕೆಯಲ್ಲಿಟ್ಟುಕೊಂಡು ಸರ್ಕಾರವನ್ನು ಕಟ್ಟಿಹಾಕಲು ಪ್ರತಿಪಕ್ಷ ಬಿಜೆಪಿ ಸನ್ನದ್ಧವಾಗಿದೆ. ಹತ್ತು ಹಲವಾರು ವಿಷಯಗಳು ಉಭಯ ಸದನಗಳಲ್ಲಿ ತೀವ್ರ ಚರ್ಚೆ, ವಾಗ್ವಾದಕ್ಕೆ ಕಾರಣವಾಗುವ ಸಾಧ್ಯತೆ ಇದೆ.

ಇಂದು ವಿಧಾನಸೌಧಜ್ಕೆ ಬಿಜೆಪಿ ಕಾಲ್ನಡಿಗೆ ಜಾಥಾ

ಸರ್ಕಾರದ ನಡೆಗಳನ್ನು ವಿರೋಧಿಸಿ ಸೋಮವಾರ ಬೆಳಗ್ಗೆ 10.30ಕ್ಕೆ ಬಿಜೆಪಿ ಶಾಸಕರು ಶಾಸಕರ ಭ‍ವನದಿಂದ ವಿಧಾನಸೌಧಕ್ಕೆ ಕಾಲ್ನಡಿಗೆ ಮೂಲಕ ಆಗಮಿಸಿ ಪ್ರತಿಭಟಿಸಲಿದ್ದಾರೆ.

- ಸರ್ಕಾರದ ಮೇಲೆ ಮುಗಿಬೀಳಲು ವಿಪಕ್ಷ ಸಜ್ಜು- ಭರ್ಜರಿ ತಿರುಗೇಟು ಕೊಡಲು ಸರ್ಕಾರವೂ ರೆಡಿ

---ಸದನ-ಕದನ- ಮುಡಾ ಹಗರಣದ ಬಗ್ಗೆ ಪ್ರಸ್ತಾಪ ಭಾರಿ ಗದ್ದಲ ಎಬ್ಬಿಸುವ ಸಂಭವ- ಗ್ಯಾರಂಟಿ ಹಣ ಬಿಡುಗಡೆ ವಿಳಂಬ ವಿರುದ್ಧ ವಿಪಕ್ಷ ಕಿಡಿ ಸಂಭವ

- 9 ವಿವಿಗಳಗಳನ್ನು ಮುಚ್ಚುವ ನಿರ್ಧಾರದ ಬಗ್ಗೆ ಬಿಸಿಬಿಸಿ ಚರ್ಚೆ

- ಅಭಿವೃದ್ಧಿ ಕಾರ್ಯಕ್ಕೆ ಅನುದಾನ ಕೊರತೆ ಬಗ್ಗೆ ಪ್ರಮುಖ ಪ್ರಸ್ತಾಪ

- ಮೆಟ್ರೋ, ಬಸ್‌ ದರ ಏರಿಕೆ ಬಗ್ಗೆ ಭಾರಿ ಕಫಲಾಹಲ ಸಾಧ್ಯತೆ

Share this article