ರಾಜ್ಯ ವೈಜ್ಞಾನಿಕ ಪರಿಷತ್ತನಿಂದ ರಾಷ್ಟ್ರೀಯ ವಿಜ್ಞಾನ ದಿನ । ಮಕ್ಕಳೊಂದಿಗೆ ಸಂವಾದ
ಕನ್ನಡಪ್ರಭ ವಾರ್ತೆ ಕೊಪ್ಪರಾಷ್ಟ್ರೀಯ ವಿಜ್ಞಾನ ದಿನ ಆಚರಣೆ ಭವಿಷ್ಯದ ಪೀಳಿಗೆಯ ವಿಜ್ಞಾನಿಗಳಿಗೆ ಸ್ಫೂರ್ತಿಯಾಗಿ ಯುವ ಮನಸ್ಸುಗಳಲ್ಲಿ ವಿಜ್ಞಾನ ಮತ್ತು ಪರಿಶೋಧನೆ ಬಗ್ಗೆ ಉತ್ಸಾಹ ತುಂಬುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ನ್ಯಾಯವಾದಿ ಸುಧೀರ್ ಕುಮಾರ್ ಮುರೊಳ್ಳಿ ಹೇಳಿದರು.
ಪಟ್ಟಣದ ಹೊರವಲಯದ ಕೌರಿಯಲ್ಲಿರುವ ಸರ್ಕಾರಿ ಕೈಗಾರಿಕ ಕೇಂದ್ರದಲ್ಲಿ ರಾಜ್ಯ ವೈಜ್ಞಾನಿಕ ಪರಿಷತ್ ಚಿಕ್ಕಮಗಳೂರು ಹಾಗೂ ಕೊಪ್ಪ ತಾಲೂಕು ಘಟಕದಿಂದ ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿ, ಫೆ.೨೮ ಸಿ.ವಿ.ರಾಮನ್ ಜನ್ಮ ದಿನವಲ್ಲ. ಅವರ ರಾಮನ್ ಎಫೆಕ್ಟ್ ಎನ್ನುವ ಆವಿಷ್ಕಾರವನ್ನು ವಿಶ್ವವೇ ಒಪ್ಪಿಕೊಂಡ ದಿನವನ್ನು ರಾಷ್ಟ್ರೀಯ ವಿಜ್ಙಾನ ದಿನವನ್ನಾಗಿ ಆಚರಿಸಿ ಅವರಿಗೆ ಗೌರವ ನೀಡಲಾಗುತ್ತಿದೆ. ಅವರಂತೆ ವೈಜ್ಞಾನಿಕ ಚಿಂತನೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರುನಮ್ಮ ಪ್ರತಿ ಅಲೋಚನೆಗಳಿಗೂ ತಳಹದಿ ಇರಬೇಕೆಂದ ಅವರು, ನಂಬಿಕೆ ಮತ್ತು ಮೂಢನಂಬಿಕೆಗಳ ಬಗ್ಗೆ ಸತ್ಯಾನ್ವೇಷಣೆ ನಡೆಸಲು ಮುಂದಾಗಬೇಕೆಂದರು. ಸಿ.ವಿ. ರಾಮನ್‌ರವರ ಜೀವನ, ವೈಜ್ಞಾನಿಕ ಲೋಕಕ್ಕೆ ಅವರ ಕೊಡುಗೆ ಮತ್ತು ಅವರ ಅವಿಷ್ಕಾರಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದ ಅವರು, ನೋಬೆಲ್ ಪ್ರಶಸ್ತಿ ಪಡೆದ ರಾಮನ್ ಪರಿಣಾಮವನ್ನು (ರಾಮನ್ ಎಫೆಕ್ಟ್) ಮೂಲವಾಗಿರಿಸಿಕೊಂಡೆ ಎಕ್ಸ್‌ರೆ, ಕಂಪ್ಯೂಟರ್, ಟಿ.ವಿ, ಮೊಬೈಲ್‌ಗಳು ತಯಾರಾಗುತ್ತಿವೆ ಎಂದು ಹೇಳಿದರು.
ಶಿಕ್ಷಕ ಆರ್.ಡಿ ರವೀಂದ್ರ ಮಾತನಾಡಿ, ಎಲ್ಲಿಯವರೆಗೂ ನಮ್ಮಲ್ಲಿ ಪ್ರಶ್ನೆ ಮೂಡುವುದಿಲ್ಲವೋ ಅಲ್ಲಿಯವರೆಗೂ ಕಂಡದ್ದನ್ನು, ಕೇಳಿದೆಲ್ಲವನ್ನು ಒಪ್ಪುತ್ತಾ ಹೋಗುತ್ತೇವೆ. ಇದು ಆಪಾಯಕಾರಿ. ಜೀವನದಲ್ಲಿ ನಂಬಿಕೆ ಮುಖ್ಯ ನಂಬಿಕೆ ಮತ್ತು ಮೂಢನಂಬಿಕೆಗಳ ನಡುವಿನ ವ್ಯತ್ಯಾಸ ತಿಳಿಯಲು ನಮ್ಮಲ್ಲಿ ಏನು? ಮತ್ತು ಹೇಗೆ ಎನ್ನುವ ಪ್ರಶ್ನೆಗಳು ಮೂಡಬೇಕು. ಇದು ಜೀವನ ಮತ್ತು ಕಲಿಕೆ ಎರಡಕ್ಕೂ ಅನ್ವಯಿಸುತ್ತದೆ ಎಂದರು.ರಾಜ್ಯ ವೈಜ್ಞಾನಿಕ ಪರಿಷತ್ತಿನ ಜಿಲ್ಲಾಧ್ಯಕ್ಷ ಎಚ್.ಕೆ ಸುರೇಶ್ ಮಾತನಾಡಿ ಪ್ರಾರ್ಥನೆಯಿಂದ ಎಲ್ಲವೂ ಸಾಧ್ಯ ಎಂದು ಪ್ರಯತ್ನ ಕೈಬಿಡಬಾರದು. ಸತತ ಪ್ರಯತ್ನವಿದ್ದಾಗ ಮಾತ್ರ ಗುರಿಮುಟ್ಟಲು ಸಾಧ್ಯ ಎಂದರು.
ಕೈಗಾರಿಕ ಕೇಂದ್ರದ ಪ್ರಾಂಶುಪಾಲ ಸಿದ್ದೇಶ್ ಕಾರ್ಯಕ್ರಮ ಉದ್ಘಾಟಿಸಿ ವಿಶ್ವ ಪ್ರತಿಜ್ಞಾ ವಿಧಿ ಭೋಧಿಸಿದರು. ವೈಜ್ಞಾನಿಕ ಪರಿಷತ್ ಕೊಪ್ಪ ತಾಲೂಕು ಘಟಕದ ಸಂಚಾಲಕರಾದ ಎಚ್.ಎಸ್ ಜಗದೀಶ್, ಜಿನೇಶ್ ಇರ್ವತ್ತೂರು, ಸಿರಿಗನ್ನಡ ವೇದಿಕೆ ಸುರೇಶ್ ನಾಯ್ಕ್ ಮಾತನಾಡಿದರು.ಕೈಗಾರಿಕ ಕೇಂದ್ರದ ಸಿಬ್ಬಂದಿ, ತರಬೇತಿದಾರರು, ವಿದ್ಯಾರ್ಥಿಗಳು ಇದ್ದರು.