ಕೊಪ್ಪಳ: ಕೊಪ್ಪಳ ಬಳಿ ಕಾರ್ಖಾನೆ ಸ್ಥಾಪಿಸದಂತೆ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳ ನೇತೃತ್ವದಲ್ಲಿ ಸರ್ವಧರ್ಮದವರು, ಸರ್ವಪಕ್ಷದವರು ಹಾಗೂ ಅನೇಕ ಸಂಘಟನೆಗಳು ಹತ್ತಾರು ಸಾವಿರ ಜನರೊಂದಿಗೆ ಬೃಹತ್ ಹೋರಾಟದ ಮಾಡಿದ ಬಳಿಕವೂ ಬಿಎಸ್‌ಪಿಎಲ್ ಕಾರ್ಖಾನೆ ಸ್ಥಾಪಿಸುವ ಸಿದ್ಧತೆ ಭರದಿಂದ ನಡೆದಿದೆ. ಅಷ್ಟೇ ಅಲ್ಲ, ನಿಗದಿತ ಜಾಗದಲ್ಲಿಯೇ ಈಗಾಗಲೇ ಭೂಮಿ ಸಮತಟ್ಟು ಮಾಡಿ, ಹೋಮ-ಹವನ ಮಾಡುವ ಸಿದ್ಧತೆ ನಡೆಸಿದ್ದಾರೆ.
ಜಿಲ್ಲೆಯ ಶಾಸಕರು, ಸಚಿವರು ಸೇರಿದಂತೆ ಜನಪ್ರತಿನಿಧಿಗಳು, ಎಲ್ಲ ಧರ್ಮಗುರುಗಳು ಹೋರಾಟದಲ್ಲಿ ಪಾಲ್ಗೊಂಡು, ನಾವು ಯಾವುದೇ ಕಾರಣಕ್ಕೂ ಕಾರ್ಖಾನೆ ಸ್ಥಾಪಿಸಲು ಬಿಡುವುದಿಲ್ಲ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ ಬಳಿಕವೂ ಕಾರ್ಖಾನೆ ಸ್ಥಾಪಿಸುವ ಕಾಮಗಾರಿ ಭರದಿಂದ ಸಾಗಿದೆ.ಜಿಲ್ಲಾ ಕೇಂದ್ರ ಕೊಪ್ಪಳಕ್ಕೆ ಹೊಂದಿಕೊಂಡೇ ಈಗಾಗಲೇ 1080 ಎಕರೆ ಭೂಮಿ ಸ್ವಾಧೀನ ಮಾಡಿಕೊಂಡು, ಅದಕ್ಕೆ ಸುತ್ತಲೂ ಕಾಂಪೌಂಡ್ ಹಾಕಿರುವ ಬಿಎಸ್‌ಪಿಎಲ್, ಹೋರಾಟದ ಬಳಿಕ ಕಾಮಗಾರಿಯನ್ನು ತೀವ್ರಗೊಳಿಸಿದೆ. ಹಗಲು-ರಾತ್ರಿಯೂ ಕಾಮಗಾರಿ ನಡೆಯುತ್ತಿದ್ದು, ಜಿಲ್ಲೆಯ ಜನರನ್ನು ಆತಂಕಕ್ಕೆ ದೂಡಿದೆ.
ಕಾರ್ಖಾನೆ ವಿರುದ್ಧ ಹೋರಾಟ ನಡೆದಿರುವುದಕ್ಕೆ ಇದುವರೆಗೂ ಒಂದೇ ಒಂದು ಪ್ರತಿಕ್ರಿಯೆ ಬಿಎಸ್‌ಪಿಎಲ್ ಕಾರ್ಖಾನೆ ನೀಡಲ್ಲ. ಆದರೆ, ಹೋರಾಟದ ಮುನ್ನಾ ದಿನ ಬಿಎಸ್‌ಪಿಎಲ್ ಕಾರ್ಖಾನೆ ವಾಟ್ಸ್‌ಆ್ಯಪ್ ಗ್ರೂಪ್ ರಚನೆ ಮಾಡಿ, ಅದರ ಮೂಲಕ ಹೇಳಿಕೆಯೊಂದನ್ನು ನೀಡಿದೆ. ಬಿಎಸ್‌ಪಿಎಲ್ ಕಾರ್ಖಾನೆಯನ್ನು ಸ್ಥಾಪಿಸುವಂತೆ ಅನೇಕ ಸಂಘಟನೆಗಳು ಬೆಂಬಲಿಸಿವೆ ಎನ್ನುವ ಒಕ್ಕಣಿಕೆ ಇರುವ ಪತ್ರಿಕಾ ಪ್ರಕಟಣೆಯಲ್ಲಿ ಕೆಲವೊಂದು ಸಂಘಟನೆಗಳ ಮನವಿ ಪತ್ರಗಳು ಇವೆ. ಅಲ್ಲದೆ ಕಾರ್ಖಾನೆಯ ಸ್ಥಾಪನೆಯಿಂದ ಸ್ಥಳೀಯವಾಗಿ ಉದ್ಯೋಗ ದೊರೆಯುತ್ತವೆ ಎನ್ನುವ ಮಾಹಿತಿಯನ್ನು ನೀಡಿದೆ.ಸರ್ಕಾರದ ಹಂತದಲ್ಲಿ ಕಸರತ್ತು: ಈ ನಡುವೆ ಕಾರ್ಖಾನೆ ಸ್ಥಾಪಿಸಲು ಮಾ. 16ರಂದು ಭೂಮಿಪೂಜೆ ನಡೆಸಲಾಗುತ್ತದೆ ಎನ್ನಲಾಗುತ್ತಿದ್ದು, ಇದಕ್ಕಾಗಿ ಮುಖ್ಯಮಂತ್ರಿ, ಸಚಿವರು ಸೇರಿದಂತೆ ಗಣ್ಯರನ್ನು ಆಹ್ವಾನಿಸಲಾಗುತ್ತಿದೆ. ಸ್ಥಳೀಯವಾಗಿಯೂ ಕೆಲವೊಂದು ನಾಯಕರನ್ನು ಭೇಟಿಯಾಗಿ ಕಾರ್ಖಾನೆಯ ಪ್ರತಿನಿಧಿಗಳು ಆಹ್ವಾನ ನೀಡಿದ್ದಾರೆ.
ಹಣ ಪಡೆಯದ ರೈತರು: ಇದಲ್ಲದೆ ಕಾರ್ಖಾನೆ ಸ್ಥಾಪನೆಗೆ ಭೂ ಸ್ವಾಧೀನ ಮಾಡಿಕೊಂಡಾಗ ವಿರೋಧಿಸಿದ ರೈತರು ಇದುವರೆಗೂ ತಮ್ಮ ಭೂಮಿಗೆ ಪರಿಹಾರದ ಹಣ ಪಡೆದುಕೊಂಡಿಲ್ಲ. 175 ಎಕರೆ ಭೂಮಿಗೆ ಸಂಬಂಧಿಸಿದಂತೆ ಅನೇಕ ರೈತರು ಈಗಲೂ ಕಾರ್ಖಾನೆ ವಿರುದ್ಧ ತಮ್ಮ ಹೋರಾಟ ಮುಂದುವರಿಸಿದ್ದಾರೆ.