ಕನ್ನಡಪ್ರಭ ವಾರ್ತೆ ಶನಿವಾರಸಂತೆ
ಎಲ್ಕೆಜಿ ಮತ್ತು ಯುಕೆಜಿ ತರಗತಿಗೆ ಆಗಮಿಸಿದ ಪುಟಾಣಿಗಳಿಗೆ ಶಾಲಾ ಶಿಕ್ಷಕರು, ಗ್ರಾ.ಪಂ.ಸದಸ್ಯರು, ಎಸ್ಡಿಎಂಸಿ ಸದಸ್ಯರು ಹೂವುಗುಚ್ಛ ನೀಡುವುದರ ಮೂಲಕ ಸ್ವಾಗತಿಸಿದರು.
ನಂತರ ನಡೆದ ಸರಳ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅಂಕನಹಳ್ಳಿ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಜಿ.ಎಂ.ಹೇಮಂತ್, ಸರ್ಕಾರ ಮತ್ತು ಶಿಕ್ಷಣ ಇಲಾಖೆ ಗ್ರಾಮೀಣ ಪ್ರದೇಶದ ಆಯ್ದ ಕೆಲವು ಸರ್ಕಾರಿ ಪ್ರಾಥಮಿಕ ಶಾಲೆಯನ್ನು ಆಂಗ್ಲ ಮಾಧ್ಯಮ ಶಾಲೆಯನ್ನಾಗಿ ಉನ್ನತ್ತೀಕರಣಗೊಳಿಸಲು ಮತ್ತು ಯುಕೆಜಿ ಮತ್ತು ಎಲ್‍ಕೆಜಿ ತರಗತಿ ನಡೆಸಲು ಅನುಮತಿ ನೀಡಿರುತ್ತದೆ. ಈ ಹಿನ್ನೆಲೆಯಲ್ಲಿ ಅಂಕನಹಳ್ಳಿ ಪ್ರಾಥಮಿಕ ಶಾಲೆಗೆ ಎಲ್‍ಕೆಜಿ ಮತ್ತು ಯುಕೆಜಿ ತರಗತಿಗೆ ಶಿಕ್ಷಣ ಇಲಾಖೆ ಈಗ ಅಧಿಕೃತವಾಗಿ ಅನುಮತಿ ನೀಡಿರುವ ಜೊತೆಯಲ್ಲಿ ಆಂಗ್ಲ ಮಾಧ್ಯಮ ಶಾಲೆಯನ್ನಾಗಿ ಉನ್ನತೀಕರಣಗೊಳಿಸಿದೆ ಎಂದರು.ಶಾಲೆಯಲ್ಲಿ ಎಲ್‍ಕೆಜಿ ಮತ್ತು ಯುಕೆಜಿ ತರಗತಿ ಪ್ರಾರಂಭವಾಗಿರುವುದರಿಂದ ಈ ಸುತ್ತಮುತ್ತಲಿನ ಜನರಿಗೆ ಅನುಕೂಲವಾಗಿದ್ದು ಈ ನಿಟ್ಟಿನಲ್ಲಿ ಪೋಷಕರು ತಮ್ಮ ಮಕ್ಕಳನ್ನು ಎಲ್‍ಕೆಜಿ ತರಗತಿಗೆ ಸೇರಿಸುವ ಮೂಲಕ ಸರ್ಕಾರದ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಆಲೂರುಸಿದ್ದಾಪುರ ಗ್ರಾ.ಪಂ. ಉಪಾಧ್ಯಕ್ಷ ಚಂದ್ರಮೋಹನ್, ಶಾಲಾ ಪಿಟಿಎ ಅಧ್ಯಕ್ಷ ಚಂದ್ರಶೇಖರ್, ಹಿರಿಯ ವಿದ್ಯಾರ್ಥಿ ಹೇಮಂತ್‍ಕುಮಾರ್ ಶಿಕ್ಷಕರಾದ ಎಲಿಯಮ್ಮ, ಯೋಗೇಶ್ವರಿ, ಅಭಿಲಾಷ ಮತ್ತು ಪೋಷಕರು ಗ್ರಾಮಸ್ಥರು ಹಾಜರಿದ್ದರು. ಸದರಿ ಶಾಲೆಯಲ್ಲಿ ಎಲ್‍ಕೆಜಿಗೆ 18 ಮಕ್ಕಳು ಮತ್ತು ಯುಕೆಜಿ ತರಗತಿಗೆ 16 ಮಕ್ಕಳು ದಾಖಲಾಗಿದ್ದಾರೆ.