ಗೋಕರ್ಣ: ಅನ್ನವನ್ನು ದೇವರೆಂದು ಪರಿಭಾವಿಸುವ ಪರಂಪರೆ ಸನಾತನ ಭಾರತದ್ದು. ಆಹಾರ ಇಹದಲ್ಲಿ ಮನುಷ್ಯನ ಸರ್ವಾಂಗ ಸಮೃದ್ಧಿಗೆ ಕಾರಣ ಮಾತ್ರವಲ್ಲದೇ, ಪರದಲ್ಲಿ ಉತ್ತಮ ಗತಿ ಪ್ರಾಪ್ತಿಗೂ ಕಾರಣ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.
ಪ್ರಾಣಿ, ಪಕ್ಷಿಗಳು ಹೆಚ್ಚಿನ ಸಮಯವನ್ನು ಆಹಾರ ಹೊಡುಕಿಕೊಂಡೇ ಜೀವನ ನಡೆಸುವುದನ್ನು ನೋಡುತ್ತೇವೆ. ಆದರೆ ಅವು ಸರಿಯಾದ ಆಹಾರವನ್ನು ಮಾತ್ರ ಸ್ವೀಕರಿಸುವುದನ್ನು ಕಾಣುತ್ತೇವೆ. ಆದರೆ ಮನುಷ್ಯ ಹಾಗಲ್ಲ. ಯೋಗ್ಯವಲ್ಲದ ಅಹಾರವನ್ನು ಹೇಗೆ ಹೇಗೋ ಸ್ವೀಕರಿಸುತ್ತಿರುವ ಪ್ರವೃತ್ತಿಯನ್ನು ನೋಡುತ್ತಿದ್ದೇವೆ. ಆಹಾರ ಜೀವನದ ಬಹುಮುಖ್ಯ ಅಂಗವಾಗಿದ್ದು, ಇಂದು ಆಹಾರದ ಹಿನ್ನೆಲೆ, ಆಹಾರದ ತಯಾರಿ, ಸೇವನೆಗೆ ಸಮರ್ಪಕ ಪ್ರಾಮುಖ್ಯತೆ ನೀಡದೇ ಇರುವುದು ವಿಷಾದಕರ ಎಂದರು.
ಈ ವೇಳೆ ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ್ ಹೆಗಡೆ, ವಿತ್ತಾಧ್ಯಕ್ಷ ಗಣೇಶ್ ಜೆ.ಎಲ್., ಹವ್ಯಕ ಮಹಾಮಂಡಲದ ಅಧ್ಯಕ್ಷ ಹರಿಪ್ರಸಾದ್ ಪೆರಿಯಾಪು, ಡಿ.ಡಿ. ಶರ್ಮಾ, ಪ್ರದೀಪ್ ನಾಯಕ್, ಮಹೇಶ್ ಶೆಟ್ಟಿ, ಆರ್.ಎಸ್. ಹೆಗಡೆ ಹರಗಿ, ಮಂಜುನಾಥ ಸುವರ್ಣಗದ್ದೆ, ಪ್ರವೀಣ್ ಭೀಮನಕೋಣೆ, ಚಾತುರ್ಮಾಸ್ಯದ ಪ್ರಧಾನ ಸಂಯೋಜಕ ಚಂದನ್ ಶಾಸ್ತ್ರಿ ಉಪಸ್ಥಿತರಿದ್ದರು.ಅನ್ನಬ್ರಹ್ಮ ಚಾತುರ್ಮಾಸ್ಯ ವಿಶೇಷ: ಗೋಕರ್ಣದ ಅಶೋಕೆಯ ಪರಿಸರದಲ್ಲಿ ಈ ವರ್ಷದ ಚಾತುರ್ಮಾಸ್ಯ ನಡೆಯುತ್ತಿದ್ದು, ಜು. ೨೯ರಿಂದ ಸೆ. ೨೬ರ ವರೆಗೆ ಆಹಾರದ ಕುರಿತಾದ ಜಾಗೃತಿಯ ''ಅನ್ನಬ್ರಹ್ಮ ಚಾತುರ್ಮಾಸ್ಯ'' ನಡೆಯಲಿದೆ. ಪ್ರತಿವರ್ಷ ಒಂದೊಂದು ವಿಷಯಾಧಾರಿತವಾಗಿ ಚಾತುರ್ಮಾಸ್ಯದಲ್ಲಿ ಸಮಾಜ ಜಾಗೃತಿ ಮೂಡಿಸುತ್ತಿರುವುದು ಶ್ರೀರಾಮಚಂದ್ರಾಪುರ ಮಠದ ವಿಶೇಷತೆಯಾಗಿದೆ. ಈ ಚಾತುರ್ಮಾಸ್ಯದ ಸಮಯದಲ್ಲಿ ಆಹಾರದ ಕುರಿತಾಗಿ ಜಾಗೃತಿ ಮೂಡಿಸುವ ಅನೇಕ ಕಾರ್ಯಕ್ರಮಗಳು ಇರಲಿದ್ದು, ಭೋಜನವೆಂಬ ತಪಸ್ಸು, ಆಹಾರ ಯಾವಾಗ ಸ್ವೀಕರಿಸಿದರೆ ಹಿತ? ಜಲಪಾನದ ನಿಯಮಗಳು, ಆಹಾರದ ಉದ್ದೇಶ, ಉಪವಾಸ, ಭೋಜನದ ಬಳಿಕ ಪಾಲಿಸಬೇಕಾದ ನಿಯಮಗಳು, ಭೋಜನ ಪಾತ್ರೆಗಳು ಸೇರಿದಂತೆ ಅನೇಕ ವಿಶಿಷ್ಟ ಪ್ರವಚನ ಮಾಲಿಕೆಗಳನ್ನು ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಅನುಗ್ರಹಿಸಲಿದ್ದಾರೆ. ಜ್ಞಾನೋದ್ದೀಪನದ ಜತೆಗೆ ಪ್ರಾಚೀನ ವಿಧಾನದ ಆಹಾರವೂ ಈ ಚಾತುರ್ಮಾಸ್ಯದಲ್ಲಿ ಇರಲಿದೆ.