ವಸತಿ ಶಾಲೆ ವಿದ್ಯಾರ್ಥಿ ಸಾವು, ನ್ಯಾಯಕ್ಕಾಗಿ ಸಿದ್ದಾಪುರದಲ್ಲಿ ಪ್ರತಿಭಟನೆ

KannadaprabhaNewsNetwork |  
Published : Jun 19, 2026, 02:30 AM IST
ಸಿದ್ದಾಪುರದಲ್ಲಿ ವಿದ್ಯಾರ್ಥಿ ಅಸಹಜ ಸಾವಿನ ತನಿಖೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು. | Kannada Prabha

ಸಾರಾಂಶ

ಸಿದ್ದಾಪುರ ತಾಲೂಕಿನ ಕಾನಸೂರು ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಮೃತಪಟ್ಟ ಗೋಕುಲ ಕೃಷ್ಣ ಗೌಡ ಹುತ್ಗಾರ ಅವರ ಕುಟುಂಬಕ್ಕೆ ನ್ಯಾಯ ಒದಗಿಸಬೇಕು, ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ತಾಲೂಕು ಒಕ್ಕಲಿಗರ ಸಮುದಾಯದವರಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು.

ಸಿದ್ದಾಪುರ: ತಾಲೂಕಿನ ಕಾನಸೂರು ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಮೃತಪಟ್ಟ ಗೋಕುಲ ಕೃಷ್ಣ ಗೌಡ ಹುತ್ಗಾರ ಅವರ ಕುಟುಂಬಕ್ಕೆ ನ್ಯಾಯ ಒದಗಿಸಬೇಕು, ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ತಾಲೂಕು ಒಕ್ಕಲಿಗರ ಸಮುದಾಯದವರಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು.

ಪಟ್ಟಣದ ತಿಮ್ಮಪ್ಪ ನಾಯಕ ವೃತ್ತದಿಂದ ಸಿದ್ದಾಪುರ, ಶಿರಸಿ, ಹೊನ್ನಾವರ, ಕುಮಟಾ, ಸೊರಬ, ಸಾಗರ ಮತ್ತಿತರ ತಾಲೂಕಿನಿಂದ ಆಗಮಿಸಿದ ಐದುನೂರಕ್ಕೂ ಹೆಚ್ಚು ಜನರು ಪ್ರತಿಭಟನಾ ಮೆರವಣಿಗೆ ಪ್ರಾರಂಭಿಸಿ, ಪಟ್ಟಣದ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ, ಆನಂತರ ತಹಸೀಲ್ದಾರ ಕಚೇರಿಯ ಎದುರಿನ ಸಾಗರ ರಸ್ತೆಯಲ್ಲಿ ಸುಮಾರು ಒಂದು ತಾಸು ರಸ್ತೆ ತಡೆ ನಡೆಸಿ, ಘೋಷಣೆ ಕೂಗಿದರು.

ವಿದ್ಯಾರ್ಥಿ ಗೋಕುಲ ಕೃಷ್ಣ ಗೌಡ ಈತನ ಸಾವು ಆತ್ಮಹತ್ಯೆ ಎಂದು ಬಿಂಬಿಸಲಾಗಿದೆ. ಇದು ಆತ್ಮಹತ್ಯೆ ಅಲ್ಲ. ಸಾವಿನಲ್ಲಿ ಅನುಮಾನ ಇದೆ ಎಂದು ಸ್ವತಃ ಅವರ ತಾಯಿ ಈಗಾಗಲೇ ಪೊಲೀಸ್ ಇಲಾಖೆಗೆ ತಿಳಿಸಿದ್ದರೂ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಯಾವ ರೀತಿಯಾಗಿ ಸಾವಾಗಿದೆ ಎನ್ನುವುದನ್ನು ಯಾಕೆ ಮುಚ್ಚಿಟ್ಟಿದ್ದೀರಿ? ನಮಗೆ ಸಾಧಾರಣ ತನಿಖೆ ಬೇಡ. ವಿಶೇಷ ತನಿಖಾ ತಂಡ ರಚಿಸಬೇಕು. ಶಿಕ್ಷಕರ ಮೇಲೆ ಯಾಕೆ ಕ್ರಮ ಕೈಗೊಂಡಿಲ್ಲ? ಕಾನಸೂರು ಇಂದಿರಾ ಗಾಂಧಿ ವಸತಿ ಶಾಲೆಯ ಎಲ್ಲ ಶಿಕ್ಷಕರ ಮೇಲೆ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು. ವಿದ್ಯಾರ್ಥಿ ಸಾವಿನ ಕುರಿತು ಸೂಕ್ತ ತನಿಖೆ ಆಗದಿದ್ದರೆ ತಾಲೂಕು ಆಡಳಿತವೇ ಕೊಲೆ ಮಾಡಿದಂತಾಗುತ್ತದೆ. ಬಂಡಲ ವಸತಿ ಶಾಲೆಯಲ್ಲಿ ನಡೆದ ಘಟನೆಗೆ ಸಂಬಂಧಪಟ್ಟು ಮೂವರನ್ನು ಅಮಾನತು ಮಾಡಲಾಗಿದೆ. ಆದರೆ ಕಾನಸೂರು ವಸತಿ ಶಾಲೆಯಲ್ಲಿ ವಿದ್ಯಾರ್ಥಿ ಅಸು ನೀಗಿದ್ದರೂ ಇಲ್ಲಿಯ ಸಿಬ್ಬಂದಿಯ ಮೇಲೆ ಯಾವುದೇ ಕ್ರಮ ಇಲ್ಲ. ರಾಜಕೀಯ ಒತ್ತಡ ಏನಾದರೂ ಇದೆಯೇ ಎಂದು ಪ್ರಶ್ನಿಸಲಾಯಿತು.

ಘಟನೆ ನಡೆದು ಹತ್ತು ದಿನವಾದರೂ ವಿದ್ಯಾರ್ಥಿ ಹೇಗೆ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿಲ್ಲ. ಹೀಗಾದರೆ ನಮಗೆ ಹೇಗೆ ನ್ಯಾಯ ದೊರಕಲು ಸಾಧ್ಯ? ತನಿಖೆ ಮಾಡುತ್ತಿದ್ದೇವೆ ಎಂದು ಪೊಲೀಸರು ಹೇಳುತ್ತಿದ್ದಾರೆ, ಯಾವಾಗ ತನಿಖೆ ಮುಗಿಯುತ್ತದೆ ಎನ್ನುವುದನ್ನು ತಿಳಿಸಲಿ. ಜಿಲ್ಲೆಯ ಎಲ್ಲ ವಸತಿ ಶಾಲೆಯಲ್ಲಿ ವ್ಯವಸ್ಥೆ ಹದಗೆಡುತ್ತಿದೆ. ವಿದ್ಯಾರ್ಥಿಗಳು ಅನೇಕ ಸಮಸ್ಯೆ ಎದುರಿಸುತ್ತಿದ್ದಾರೆ. ಇದು ಒಂದು ಸಮಾಜದವರಿಗೆ ಆದ ಅನ್ಯಾಯ ಅಲ್ಲ, ಈ ಹೋರಾಟಕ್ಕೆ ಎಲ್ಲರ ಹಾಗೂ ಎಲ್ಲ ಪಕ್ಷದವರ ಬೆಂಬಲವೂ ಇದೆ. ಮೃತ ವಿದ್ಯಾರ್ಥಿಯ ಪಾಲಕರಿಗೆ ನ್ಯಾಯ ಸಿಗಬೇಕು ಎನ್ನುವ ಕುರಿತು ನಮ್ಮ ಹೋರಾಟ. ತನಿಖೆ ಯಾವ ಹಂತದಲ್ಲಿದೆ? ಯಾರ, ಯಾರ ಮೇಲೆ ಕ್ರಮ ಕೈಗೊಂಡಿದ್ದೀರಿ? ತನಿಖೆ ಯಾಕಾಗಿ ವಿಳಂಬವಾಗುತ್ತಿದೆ ಎಂದು ಪ್ರಶ್ನಿಸಿ ಎಸ್ಪಿ ಸ್ಥಳಕ್ಕೆ ಬಂದು ಉತ್ತರ ನೀಡಬೇಕು ಎಂದು ಆಗ್ರಹಿಸಿದರು.

ಸ್ಥಳಕ್ಕೆ ಆಗಮಿಸಿದ ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ್ ಮಾತನಾಡಿ, ಈಗಾಗಲೇ ಎಲ್ಲ ರೀತಿಯ ತನಿಖೆ ಮಾಡುತ್ತಿದ್ದೇವೆ. ನಿಮಗೆ ಯಾರ ಮೇಲಾದರೂ ಸಂಶಯ ಇದ್ದರೆ ಹೇಳಿ ಎಂದು ಮೃತ ವಿದ್ಯಾರ್ಥಿಯ ತಾಯಿ ಜಯಶ್ರೀ ಗೌಡ ಅವರನ್ನು ಕೇಳಿದರು. ಅವರು ಎಲ್ಲ ಶಿಕ್ಷಕರ ಮೇಲೆ ಪ್ರಕರಣ ದಾಖಲಿಸುತ್ತೇನೆ ಎಂದು ಹೇಳಿದರು. ಡಿವೈಎಸ್ಪಿ ಗೀತಾ ಪಾಟೀಲ್ ಒಪ್ಪಿಗೆ ನೀಡಿದರು. ಇನ್ನು ಒಂದು ವಾರದೊಳಗೆ ತನಿಖೆ ಪೂರ್ಣಗೊಳಿಸುತ್ತೇವೆ ಎಂದು ಉತ್ತರಿಸಿದ ಆನಂತರ ಪ್ರತಿಭಟನೆ ಮುಕ್ತಾಯಗೊಳಿಸಲಾಯಿತು.

ಮೋಹನ ಗೌಡ, ಶ್ರೀಧರ ಗೌಡ, ಮಹೇಶ ಗೌಡ, ಮಹಾಬಲೇಶ್ವರ ಗೌಡ, ಸುಮಾ ಗೌಡ, ಪದ್ಮಾವತಿ ಗೌಡ, ಸೀತಾರಾಮ ಗೌಡ, ಅಣ್ಣಪ್ಪ ಗೌಡ, ವಿ.ಆರ್. ಗೌಡ, ಮಂಜುನಾಥ ಗೌಡ, ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ತಿಮ್ಮಪ್ಪ ಎಂ.ಕೆ., ತಾಲೂಕು ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ, ಜೆಡಿಎಸ್ ಮುಖಂಡ ಉಪೇಂದ್ರ ಪೈ, ಎನ್ಎಸ್‌ಯುಐನ ವಿಶ್ವ ಗೌಡ, ಭಾಸ್ಕರ ಪಟಗಾರ, ವಿನಾಯಕ ಪಟಗಾರ ಇತರರಿದ್ದರು.

ಸ್ಥಳದಲ್ಲಿ ಸಿದ್ದಾಪುರ ಸಿಪಿಐ ಜೆ.ಬಿ. ಸೀತಾರಾಮ, ಪಿಎಸ್ಐ ನಾಗಪ್ಪ, ಶಾಂತಿನಾಥ ಪಾಸನೆ ಹಾಗೂ ಸಿಬ್ಬಂದಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೋಣದಲ್ಲಿ ಶೇ. 40 ಜನರಿಗೆ ಬಯಲು ಶೌಚವೇ ಗತಿ!
ಅಲ್ಪಸಂಖ್ಯಾತರ ಸಮಗ್ರ ಅಭಿವೃದ್ಧಿಗೆ ಆಯೋಗ ಬದ್ಧ: ನಿಸಾರ್ ಅಹಮದ್