ನರೇಗಲ್ಲ: ನರೇಗಲ್ಲಗೆ ಸಮೀಪದ ಹಾಲಕೆರೆಯ ಅನ್ನದಾನೇಶ್ವರ ಮಠದಲ್ಲಿ ಹಿರಿಯ ಅನ್ನದಾನ ಸ್ವಾಮಿಗಳ ೧೭೩ನೇ ಹಾಗೂ ಅಭಿನವ ಅನ್ನದಾನ ಸ್ವಾಮಿಗಳ ೨ನೇ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಭಾನುವಾರ ಮಹಾರಥೋತ್ಸವ ಅತ್ಯಂತ ವಿಜೃಂಭಣೆಯಿಂದ ಜರುಗಿತು. ರಥೋತ್ಸವಕ್ಕೆ ಶ್ರೀಮಠದ ಪೀಠಾಧಿಪತಿ ಮುಪ್ಪಿನ ಬಸವಲಿಂಗ ಸ್ವಾಮಿಗಳನ್ನೊಳಗೊಂಡಂತೆ ಹರ ಗುರು ಚರ ಮೂರ್ತಿಗಳು ಚಾಲನೆ ನೀಡಿದರು. ರಥೋತ್ಸವದಲ್ಲಿ ಸಾಗಿದ ಬೊಂಬೆ ವೇಷಧಾರಿಗಳ, ಶಾಲಾ ವಿದ್ಯಾರ್ಥಿಗಳ ಕೋಲಾಟ, ನಂದಿಕೋಲು, ಡೊಳ್ಳು, ಲೆಜೀಮು ಹಾಗೂ ಸಕಲ ವಾದ್ಯ ವೈಭವಗಳು ಮೆರುಗು ನೀಡಿದವು. ರಾಜ್ಯದ ವಿವಿಧ ಮೂಲೆಗಳಿಂದ ಸಾಗರೋಪಾದಿಯಲ್ಲಿ ಭಕ್ತ ಸಮೂಹ ಹರಿದು ಬಂದಿತ್ತು. ರಥೋತ್ಸವಕ್ಕೆ ಚಾಲನೆ ದೊರೆಯುತ್ತಿದ್ದಂತೆ ಅನ್ನದಾನೇಶ್ವರ ಮಹಾರಾಜ ಕೀ ಜೈ, ಅಭಿನವ ಅನ್ನದಾನೇಶ್ವರ ಮಹಾರಾಜ ಕೀ ಜೈ ಮುಪ್ಪಿನ ಬಸವಲಿಂಗ ಮಹಾರಾಜಕೀ ಜೈ ಎಂಬ ಘೊಷವಾಕ್ಯಗಳು ಮುಗಿಲು ಮುಟ್ಟುವಂತಿತ್ತು.ವಿದ್ಯಾರ್ಥಿಗಳ ಪಾದಯಾತ್ರೆ: ಸ್ಥಳೀಯ ಅನ್ನದಾನ ವಿಜಯ ವಿದ್ಯಾಪ್ರಸಾರಕ ಸಮಿತಿಯ ವಿವಿಧ ಅಂಗಸಂಸ್ಥೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಲಕೆರೆ ಅನ್ನದಾನೇಶ್ವರನ ಜಾತ್ರಾ ನಿಮಿತ್ತ ಕೈಗೊಂಡ ಪಾದಯಾತ್ರೆಗೆ ಜ. ಶನಿವಾರ ಶಾಲಾ ಶ್ರೀಮಠದ ಆವರಣದಲ್ಲಿರುವ ಅನ್ನದಾನೇಶ್ವರರ ಗದ್ದುಗೆಗೆ ಎಸ್‌ಎವಿವಿಪಿ ಸಮಿತಿ ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ ದೊಡ್ಡಮೇಟಿ ಹಾಗೂ ಡಾ. ಜಿ.ಕೆ. ಕಾಳೆ ಅವರ ನೇತೃತ್ವದಲ್ಲಿ ಪೂಜೆ ಸಲ್ಲಿಸಿ ಚಾಲನೆ ನೀಡಲಾಯಿತು.ಈ ವೇಳೆ ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ ದೊಡ್ಡಮೇಟಿ ಮಾತನಾಡಿ, ಸತತ ಹತ್ತು ವರ್ಷಗಳಿಂದ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಪ್ರತಿವರ್ಷ ೧೨ ಕಿ.ಮೀ. ದೂರವಿರುವ ಹಾಲಕೆರೆ ಅನ್ನದಾನೇಶ್ವರರ ಜಾತ್ರಾ ಮಹೋತ್ಸವದ ಅಂಗವಾಗಿ ಹಾಗೂ ಮುಂಬರುವ ದಿನಗಳಲ್ಲಿ ಜರುಗುವ ಪರೀಕ್ಷೆಯಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉತ್ತಮ ಅಂಕ ಗಳಿಸಲಿ ಎಂಬ ಸದುದ್ದೇಶ ಹೊಂದಿ ಪಾದಯಾತ್ರೆ ಕೈಗೊಳ್ಳುತ್ತಿದ್ದು, ಪ್ರತಿವರ್ಷ ಸಮಿತಿಯ ವಿವಿಧ ಶಾಲಾ ಕಾಲೇಜುಗಳ ಫಲಿತಾಂಶ ಉನ್ನತೀಕರಣಗೊಳ್ಳುತ್ತಿದೆ. ಇದಕ್ಕೆ ಅನ್ನದಾನೇಶನ ಕೃಪಾಶಿರ್ವಾದವೇ ಕಾರಣ ಈ ನಿಟ್ಟಿನಲ್ಲಿ ಪ್ರಸಕ್ತ ವರ್ಷ ಸಾವಿರಾರು ವಿದ್ಯಾರ್ಥಿಗಳು ಪಾದಯಾತ್ರೆಯಲ್ಲಿ ಭಾಗವಹಿಸಿದ್ದು, ಪ್ರತಿಯೊಬ್ಬ ವಿದ್ಯಾರ್ಥಿ ಅನ್ನದಾನೇಶ ಹಾಗೂ ಅಭಿನವ ಅನ್ನದಾನೇಶ್ವರರ ಜಪ ಮಾಡುತ್ತಾ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದಾರೆ ಎಂದರು.ಕನ್ನಡ ಉಪನ್ಯಾಸಕ ಎಫ್.ಎನ್. ಹುಡೇದ ಮಾತನಾಡಿ, ಹಿರಿಯ ಅನ್ನದಾನ ಸ್ವಾಮಿಗಳ ಮೂರುಕೋಟಿ ಜಪದ ಫಲ ಇಂದು ಮಕ್ಕಳ ಮೇಲಿದೆ ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ಗುರಿ ಸಾಧನೆಗಾಗಿ ಸಂಕಲ್ಪ ಕೈಗೊಳ್ಳುವ ಮೂಲಕ ಇಂದು ಪಾದಯಾತ್ರೆಯಲ್ಲಿ ಭಾಗಿಯಾಗುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ ಎಂದರು