ಮಳವಳ್ಳಿ ಕ್ಷೇತ್ರಕ್ಕೆ ಅನ್ನದಾನಿ ಸಾಕಷ್ಟು ಕೊಡುಗೆ ನೀಡಿದ್ದಾರೆ

KannadaprabhaNewsNetwork | Published : Feb 24, 2024 2:33 AM

ಸಾರಾಂಶ

ಮಳವಳ್ಳಿ ಕ್ಷೇತ್ರಕ್ಕೆ ಮಾಜಿ ಶಾಸಕ ಡಾ.ಕೆ.ಅನ್ನದಾನಿ ಸಾಕಷ್ಟು ಕೊಡುಗೆ ನೀಡಿದ್ದು, ಶೇ.10 ರಷ್ಟು ಇಲ್ಲ ಎನ್ನುವವರು ಬಹಿರಂಗ ಚರ್ಚೆಗೆ ಬಂದರೆ ದಾಖಲೆ ಸಮೇತ ನೀಡುವುದಾಗಿ ಜೆಡಿಎಸ್ ಪುರಸಭಾ ಸದಸ್ಯ ಸಿದ್ದರಾಜು ಸವಾಲು ಹಾಕಿದರು.

ಕನ್ನಡಪ್ರಭ ವಾರ್ತೆ ಮಳವಳ್ಳಿಮಳವಳ್ಳಿ ಕ್ಷೇತ್ರಕ್ಕೆ ಮಾಜಿ ಶಾಸಕ ಡಾ.ಕೆ.ಅನ್ನದಾನಿ ಸಾಕಷ್ಟು ಕೊಡುಗೆ ನೀಡಿದ್ದು, ಶೇ.10 ರಷ್ಟು ಇಲ್ಲ ಎನ್ನುವವರು ಬಹಿರಂಗ ಚರ್ಚೆಗೆ ಬಂದರೆ ದಾಖಲೆ ಸಮೇತ ನೀಡುವುದಾಗಿ ಜೆಡಿಎಸ್ ಪುರಸಭಾ ಸದಸ್ಯ ಸಿದ್ದರಾಜು ಸವಾಲು ಹಾಕಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕಿನ ಅಭಿವೃದ್ಧಿಯಲ್ಲಿ ಮಾಜಿ ಶಾಸಕ ಡಾ.ಕೆ. ಅನ್ನದಾನಿ ಹಾಗೂ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಕೊಡುಗೆ ಏನು ಎನ್ನುವುದು ಬಹಿರಂಗ ಚರ್ಚೆಯಲ್ಲಿ ತಿಳಿಸುವುದಾಗಿ ಹೇಳಿದರು. ಕೆಲ ಕಾಂಗ್ರೆಸ್ ಮುಖಂಡರು ತಾಲೂಕಿನ ಅಭಿವೃದ್ಧಿಗೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ನೀಡಿರುವ ಕೊಡುಗೆಯಲ್ಲಿ ಶೇ.10ರಷ್ಟು ಮಾಜಿ ಶಾಸಕ ಡಾ.ಕೆ.ಅನ್ನದಾನಿ ನೀಡಿಲ್ಲ ಎಂದು ಆರೋಪಿಸಿದ್ದಾರೆ. ಅನ್ನದಾನಿ ಅವರ ಅಭಿವೃದ್ಧಿ ಕೆಲಸಗಳು ಕಣ್ಣು ಮುಂದೆ ಕಾಣುತ್ತವೆ. ಇವರು ಹೇಳಿಕೆ ಸುಳ್ಳಿನಿಂದ ಕೂಡಿದೆ ಎಂದು ಕಿಡಿಕಾರಿದರು. ವಕೀಲರೊಬ್ಬರು ಶಾಸಕರು ಪಾಳೇಗಾರರು ಎಂದಿದ್ದಾರೆ. ಪಾಳೇಗಾರರು ಎಂದರೆ ಏನು ಎಂಬುದು ಅವರಿಗೆ ಗೊತ್ತಿಲ್ಲ ಅನಿಸುತ್ತದೆ. ಅದು ಅವರ ಪಕ್ಷಕ್ಕೆ ಸೀಮಿತವಾಗಿರಲಿ. ಈ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದರು. ಸರ್ಕಾರ ಹಮ್ಮಿಕೊಂಡಿರುವ ಸಂವಿಧಾನ ಜಾಗೃತಿ ಜಾಥಾ ರಥದಲ್ಲಿ ಗ್ಯಾರಂಟಿ ಯೋಜನೆಗಳ ಹಾಗೂ ಸಚಿವರ ಭಾವಚಿತ್ರಗಳನ್ನು ಮೇಲೆ ಹಾಕಿ ಕೆಳಭಾಗದಲ್ಲಿ ಡಾ.ಬಿ.ಆರ್.ಅಂಬೇಡ್ಕರ್, ಬುದ್ಧ, ಬಸವಣ್ಣ ಅವರ ಚಿತ್ರ ಅಳವಡಿಸಿರುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಜೆಡಿಎಸ್ ಎಸ್ಸಿ, ಎಸ್ಟಿ ಘಟಕದ ತಾಲೂಕು ಅಧ್ಯಕ್ಷ ಕಾಂತರಾಜು ಮಾತನಾಡಿ, ಕಾಂಗ್ರೆಸ್ ನ ಮಾರ್ಕಾಲು ಸಿ.ಮಾಧು ಮಾಜಿ ಶಾಸಕ ಕೆ.ಅನ್ನದಾನಿ ಅವರನ್ನು ಏಕವಚನದಲ್ಲಿ ಟೀಕಿಸಿರುವುದು ಅವರಿಗೆ ಶೋಭೆ ತರುವುದಿಲ್ಲ ಎಂದರು.ಜೆಡಿಎಸ್ ಬಿಜೆಪಿಯೊಂದಿಗೆ ಮೈತ್ರಿಯಾದರೆ ನಮ್ಮನ್ನು ಕೋಮುವಾದಿ ಜೊತೆ ಹೋಗಿದ್ದಾರೆ ಎನ್ನುವ ಅವರು ಈ ಹಿಂದೆ ಅವರ ನಾಯಕರು ಯಾರೊಂದಿಗೆ ಹೋಗಿ ಸಚಿವರಾಗಿ ಅಧಿಕಾರ ಅನುಭವಿಸಿದ್ದರು. ಮಾಜಿ ಸಚಿವ ಬಿ.ಸೋಮಶೇಖರ್ ಬಿಜೆಪಿಗೆ ಹೋಗಿದ್ದಾಗ ಏಕೆ ಪ್ರಶ್ನೆ ಮಾಡಲಿಲ್ಲ ಎಂದು ತಿರುಗೇಟು ನೀಡಿದರು.

ಈ ಹಿಂದೆ 10 ವರ್ಷ ಪಿ.ಎಂ.ನರೇಂದ್ರಸ್ವಾಮಿ ಶಾಸಕ, ಸಚಿವರಾಗಿದ್ದಾಗ ಪಟ್ಟಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಯನ್ನು ನಿರ್ಮಾಣ ಮಾಡಲು ಏಕೆ ಸಾಧ್ಯವಾಗಿರಲಿಲ್ಲ. ಆದರೆ, ಅದನ್ನು ಮಾಜಿ ಶಾಸಕ ಡಾ.ಕೆ.ಅನ್ನದಾನಿ ಮಾಡಿ ತೋರಿಸಿದ್ದಾರೆ. ಇದನ್ನು ಸಹಿಸದ ಕಾಂಗ್ರೆಸ್ ಮುಖಂಡರ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದಲ್ಲಿ ನಿರ್ಮಾಣವಾಗಿರುವ ಅಂಬೇಡ್ಕರ್ ಪುತ್ಥಳಿಯನ್ನು ಬೆಂಗಳೂರಿನ ಡಾ.ಬಿ.ಆರ್.ಅಂಬೇಡ್ಕರ್ ಕಾಲೇಜಿನವರು ಕೊಟ್ಟಿಲ್ಲ. ನಾವೇ ಹೋಗಿ ತಂದಿದ್ದೇವೆ. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಚಪ್ಪಲಿ ಧರಿಸಿ ಪುತ್ಥಳಿಗೆ ಮಾಲಾರ್ಪಣೆ ಮಾಡಿಲ್ಲ. ಬೇಕಿದ್ದರೆ ವಿಡಿಯೋ ಪರಿಶೀಲಿಸಿ ನಂತರ ಮಾತನಾಡಲಿ ಎಂದು ಸಲಹೆ ಮಾಡಿದರು. ಶಾಶ್ವತವಾದ ಅಂಬೇಡ್ಕರ್ ಪುತ್ಥಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಲಾರ್ಪಣೆ ಮಾಡಬೇಕಿತ್ತು. ಅದನ್ನು ಬಿಟ್ಟು ಸಂವಿಧಾನ ಜಾಥಾಕ್ಕೆ ಮಾಡಿದ್ದು ಸಮಂಜಸಲ್ಲ ಎನ್ನುವುದನ್ನು ತಾಲೂಕಿನ ದಲಿತರ ಭಾವನೆಯನ್ನು ಕೆ.ಅನ್ನದಾನಿ ವ್ಯಕ್ತಪಡಿಸಿದ್ದಾರೆ ಅಷ್ಟೇ ಎಂದು ಹೇಳಿದರು.

ಮುಖಂಡ ನಾಗರಾಜು ಮಾತನಾಡಿ, ಕ್ಷೇತ್ರದ ಅಭಿವೃದ್ಧಿಗೆ ಶಾಸಕರು ಸಾವಿರಾರು ಕೋಟಿ ಅನುದಾನ ತಂದಿದ್ದಾರೆ. ಮಾಜಿ ಶಾಸಕರ ಕೊಡುಗೆ ಕಡಿಮೆ ಎನ್ನುವ ಕಾಂಗ್ರೆಸ್ ಮುಖಂಡರೊಂದಿಗೆ ತಾಲೂಕಿನ ಅಭಿವೃದ್ಧಿ ವಿಚಾರದಲ್ಲಿ ಬಹಿರಂಗ ಚರ್ಚೆ ಸಿದ್ದರಿದ್ದೇವೆ ಎಂದು ಸವಾಲು ಹಾಕಿದರು.

Share this article