ಕನ್ನಡಪ್ರಭ ವಾರ್ತೆ ನೆಲಮಂಗಲ
ತ್ರಿವಿಧ ದಾಸೋಹಿ ಡಾ.ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳ ಪುಣ್ಯಸ್ಮರಣೆಯ ದಿನದಂದು ನಮ್ಮ ತಾಲೂಕು ಘಟಕವು ದಾಸೋಹ ಸೇವೆ ಕೈಗೊಂಡಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ತಾಲೂಕು ಅಧ್ಯಕ್ಷ ರಾಜಶೇಖರ್ ತಿಳಿಸಿದರು.ನಗರದ ತಾಲೂಕು ಕಚೇರಿ ಮುಂಭಾಗದ ಕೆಂಗಲ್ ಹನುಮಂತಯ್ಯ ವೃತ್ತದಲ್ಲಿ ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅನ್ನಸಂತರ್ಪಣೆ ಮಾಡಿ ಮಾತನಾಡಿದರು.
ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮೀಜಿಯವರ ಪುಣ್ಯಸ್ಮರಣೆ ದಿನವನ್ನು ದಾಸೋಹ ದಿನವನ್ನಾಗಿ ಆಚರಿಸುತ್ತಿರುವ ಹಿನ್ನೆಲೆ ಮಹಾಸಭಾದಿಂದ 3 ಸಾವಿರ ಜನರಿಗೆ ಅನ್ನದಾಸೋಹ ಮಾಡಲಾಗಿದೆ ಎಂದರು.ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಮಹಿಳಾ ಅಧ್ಯಕ್ಷೆ ರಾಜಮ್ಮ ಮಾತನಾಡಿ, ಮಹಾಸಭಾದ ಅಧ್ಯಕ್ಷ ರಾಜಶೇಖರ್ ನೇತೃತ್ವದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಎಲ್ಲರಿಗೂ ದಾಸೋಹ ಸೇವೆ ಮಾಡಿರುವುದು ಸಾರ್ಥಕ ಕ್ಷಣ, ಶ್ರೀಗಳ ಆಚಾರ- ವಿಚಾರಗಳು ನಮ್ಮ ಮನೆ- ಮನ ತಲುಪಬೇಕಾಗಿದೆ. ಶ್ರೀಗಳ ಪುಣ್ಯ ಸ್ಮರಣೆಯನ್ನು ನಗರದ ತಾಲೂಕು ಕಚೇರಿ, ರುದ್ರೇಶ್ವರ ಪ್ರಾರ್ಥನಾ ಮಂದಿರ, ಸುಭಾಷ್ ನಗರ ಬಸ್ ನಿಲ್ದಾಣದ ಬಳಿ ಅದ್ಧೂರಿಯಾಗಿ ಆಚರಣೆ ಮಾಡುತ್ತಿರುವುದು ಸಂತಸ ತಂದಿದೆ ಎಂದರು.
ಮಹಾಸಭಾ ಜಿಲ್ಲಾಧ್ಯಕ್ಷ ರೇವಣ ಸಿದ್ದಯ್ಯ, ಕೇಂದ್ರ ಘಟಕ ಮಾಜಿ ನಿರ್ದೇಶಕ ಎನ್.ಎಸ್ ನಟರಾಜು, ನಗರಸಭೆ ಮಾಜಿ ಅಧ್ಯಕ್ಷೆ ಪೂರ್ಣಿಮಾ ಸುಗ್ಗರಾಜು, ಸದಸ್ಯೆ ಲೋಲಾಕ್ಷಿ ಗಂಗಾಧರ್, ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಮಾಜಿ ಅಧ್ಯಕ್ಷ ಶಾಂತ ಕುಮಾರ್, ರಾಜ್ಯ ಯುವಘಟಕದ ಮಾಜಿ ಕಾರ್ಯದರ್ಶಿ ಆರ್.ಕೊಟ್ರೇಶ್, ಮಹಾಸಭಾ ಮಹಿಳಾ ಅಧ್ಯಕ್ಷೆ ವೇದಾವತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗದೀಶ್, ತಾಲೂಕು ಕಾರ್ಯದರ್ಶಿ ಕುಮಾರಸ್ವಾಮಿ, ಟೌನ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಚನ್ನಬಸವರಾಜು, ಮುಖಂಡರಾದ ರುದ್ರಮೂರ್ತಿ, ಶ್ರೀಗಣೇಶ್,ಬೃಂಗೇಶ್, ದಯಾಶಂಕರ್, ಹರೀಶ್, ಗಿರೀಶ್ ಸೇರಿ ಮತ್ತಿತರರಿದ್ದರು.