ರಾಮನಗರ: ಎಐ ಸಿಟಿ (ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ - ಬಿಡದಿ ಟೌನ್ ಶಿಪ್ ) ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿರುವುದನ್ನು ವಾಪಸ್ ಪಡೆಯಬೇಕು ಹಾಗೂ ಭೂ ಸ್ವಾಧೀನ ರದ್ದು ಮಾಡುವಂತೆ ಒತ್ತಾಯಿಸಿ ರೈತರು ಜಾನುವಾರುಗಳ ಸಮೇತ ಬೀದಿಗಿಳಿದು ರಾಜ್ಯ ಸರ್ಕಾರದ ವಿರುದ್ಧ ಶಕ್ತಿ ಪ್ರದರ್ಶನ ಮಾಡಿದರು.
ಗ್ರಾಮಗಳಿಂದ ಬೈರಮಂಗಲ ವೃತ್ತಕ್ಕೆ ಆಗಮಿಸಿದ ರೈತರು ಜೊತೆಯಲ್ಲಿ ತಂದಿದ್ದ ಎತ್ತಿನಗಾಡಿ ಮತ್ತು ಟ್ರ್ಯಾಕ್ಟರ್ ಗಳನ್ನು ರಸ್ತೆಯ ಎರಡು ದಿಕ್ಕುಗಳಲ್ಲಿ ನಿಲ್ಲಿಸಿ ಬಿಡದಿ - ಹಾರೋಹಳ್ಳಿ ಮಾರ್ಗದ ವಾಹನ ಸಂಚಾರಕ್ಕೆ ನಿರ್ಬಂಧ ಹೇರಿದರು. ಎತ್ತಿನ ಗಾಡಿಗಳಿಗೆ ಜಾನುವಾರುಗಳನ್ನು ಕಟ್ಟಿ ಹಾಕಿ ಮೇವು ನೀರು ಹಾಕಿದರು. ಎತ್ತಿನ ಗಾಡಿಗಳ ಮೇಲೆ ಹಸಿರು ಬಾವುಟಗಳು ರಾರಾಜಿಸುತ್ತಿದ್ದವು.
ವೃತ್ತದಲ್ಲಿ ರೈತ ನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಅನ್ನದಾತರು, ರೈತ ಗೀತೆಗೆ ಗೌರವ ಸಲ್ಲಿಸಿದರು. ಹಸಿರು ಶಾಲನ್ನು ತಿರುವಿದ ರೈತರು ರಾಜ್ಯಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಶಾಸಕ ಬಾಲಕೃಷ್ಣ ಹಾಗೂ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವಿರುದ್ಧ ಘೋಷಣೆ ಮೊಳಗಿಸಿದರು.ಆನಂತರ ಬೈರಮಂಗಲ ವೃತ್ತದ ಮಧ್ಯದಲ್ಲಿಯೇ ಶಾಮಿಯಾನದ ಅಡಿಯಲ್ಲಿ ರೈತರು ಅನಿರ್ದಿಷ್ಟಾವಧಿ ಧರಣಿ ಪ್ರಾರಂಭಿಸಿದರು. ಮತ್ತೊಂದೆಡೆ ಚಳವಳಿಗಾರರಿಗಾಗಿ ಸ್ಥಳದಲ್ಲಿಯೇ ಅಡುಗೆ ತಯಾರಿಸಿ, ಎಲ್ಲರು ಮಧ್ಯಾಹ್ನ ಸೇವಿಸಿದರು.
ವಾಹನ ಸಂಚಾರ ಅಸ್ತವ್ಯಸ್ಥ :
ಚಳವಳಿ ಹಿನ್ನೆಲೆಯಲ್ಲಿ ಪೊಲೀಸರು ವಾಹನ ಸಂಚಾರದ ಮಾರ್ಗವನ್ನು ಬದಲಾಯಿಸಿದ್ದರು. ಹಾರೋಹಳ್ಳಿ ಮತ್ತು ಬಿಡದಿ ಕೈಗಾರಿಕಾ ಪ್ರದೇಶಗಳ ವಾಹನಗಳು ಸೇರಿದಂತೆ ಸಾರಿಗೆ ಬಸ್ಸುಗಳು, ಖಾಸಗಿ ವಾಹನಗಳು ಅನ್ಯ ಮಾರ್ಗಗಳಲ್ಲಿ ಸಂಚರಿಸಿದವು. ಧರಣಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಬೈರಮಂಗಲ ವೃತ್ತದಲ್ಲಿ ಜಾನುವಾರುಗಳ ಸಮೇತಿ ರೈತರು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿರುವುದು.