ಕನ್ನಡಪ್ರಭ ವಾರ್ತೆ ಸಿಂದಗಿ
ಸುಮಾರು ದಿನಗಳಿಂದ ಭೀಕರವಾಗಿ ಸುರಿಯುತ್ತಿರುವ ಮಳೆಯಿಂದ ಸಿಂದಗಿ ಮತ್ತು ಆಲಮೇಲ ತಾಲೂಕುಗಳ ರೈತರು ಬೆಳೆದ ಬೆಳೆಗಳು ಸಂಪೂರ್ಣ ನೆಲಕಚ್ಚಿ ಹೋಗಿವೆ. ಇದರಿಂದ ರೈತರು ಬೀದಿಗೆ ಬಂದಂತಾಗಿದೆ. ಅಂತವರ ಬದುಕಿಗೆ ಪರಿಹಾರ ವಿತರಿಸಲು ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ರೈತರ ಕುಟುಂಬಕ್ಕೆ ಸಹಾಯಹಸ್ತ ನೀಡಬೇಕು ಎಂದು ಒತ್ತಾಯಿಸಿ ಶಾಸಕ ಅಶೋಕ ಮನಗೂಳಿ ಶುಕ್ರವಾರ ಬೆಂಗಳೂರಿನಲ್ಲಿ ಸಿಎಂ ಸಿದ್ದರಾಯಮ್ಯಗೆ ಮನವಿ ಸಲ್ಲಿಸಿದರು.ಈ ಸಂಧರ್ಭದಲ್ಲಿ ಅವರು ಸಿಂದಗಿ ಮತ್ತು ಆಲಮೇಲ ತಾಲೂಕುಗಳ ರೈತರು ಬೆಳೆದ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಹಾನಿಯ ಬಗ್ಗೆ ಸಿಎಂ ಸಿದ್ದರಾಮಯ್ಯರಿಗೆ ವಿಶ್ಲೇಷಿಸಿದರು. ಸಂಬಂಧಿಸಿದ ಅಧಿಕಾರಿ ವರ್ಗದವರು ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸುತ್ತಿದ್ದಾರೆ. ಸಿಂದಗಿ ತಾಲೂಕಿನಲ್ಲಿ ಅಂದಾಜು 65000 ಹೆಕ್ಟೇರ್ ಮತ್ತು ಆಲಮೇಲ ತಾಲೂಕಿನಲ್ಲಿ ಅಂದಾಜು 53000 ಹೆಕ್ಟೇರ್ ಪ್ರದೇಶ ಮುಂಗಾರು ಬಿತ್ತನೆ ಕ್ಷೇತ್ರವಾಗಿದೆ. ಇದರಲ್ಲಿ ಸಿಂದಗಿ ತಾಲೂಕಿಗೆ ಸಂಬಂಧಿಸಿದಂತೆ ಮುಖ್ಯವಾಗಿ ತೊಗರಿ, ಹತ್ತಿ ಹಾಗೂ ಮೆಕ್ಕೆಜೋಳ ಬೆಳೆಗಳು ಸೇರಿ 47430 ಹೆಕ್ಟೇರ್ ಪ್ರದೇಶ ಬಿತ್ತನೆಯಾಗಿದೆ. ಇದರಲ್ಲಿ ಪ್ರಸ್ತುತ ಬೆಳೆ ಸಮೀಕ್ಷೆಯ ಪ್ರಕಾರ 21450 ಹೆಕ್ಟೇರ್ ಪ್ರದೇಶ ಸತತ ಸುರಿಯುತ್ತಿರುವ ಮಳೆಯಿಂದ ಬೆಳೆಗಳು ಹಾನಿಯಾಗಿವೆ. ಆಲಮೇಲ ತಾಲೂಕಿಗೆ ಸಂಬಂಧಿಸಿದಂತೆ ಸುಮಾರು 53000 ಹೆಕ್ಟೇರ್ ಪ್ರದೇಶ ಮುಂಗಾರು ಬಿತ್ತನೆಯ ಪ್ರದೇಶವಾಗಿದ್ದು ಇದರಲ್ಲಿ ತೊಗರಿ, ಹತ್ತಿ ಮತ್ತು ಮೆಕ್ಕೆಜೋಳ ಬೆಳೆಗಳು ಸುಮಾರು 32715 ಹೆಕ್ಟೇರ್‌ದಲ್ಲಿ ಬಿತ್ತನೆ ಮಾಡಿದ್ದಾರೆ. ಮಳೆಯಿಂದ ಸುಮಾರು 18890 ಹೆಕ್ಟೇರ್ ಪ್ರದೇಶದ ಬೆಳೆಗಳು ಹಾನಿಗೆ ಒಳಗಾಗಿ ತತ್ತರಿಸಿ ಹೋಗಿವೆ. ಇದರ ಜೊತೆಗೆ ಆಲಮೇಲ ಭಾಗದಲ್ಲಿ ಭೀಮಾನದಿ ಪ್ರವಾಹದಿಂದ ಕಬ್ಬಿನ ಬೆಳೆಗಳು ಹಾಳಾಗಿದೆ ಎಂದು ಸಿಎಂಗೆ ತಿಳಿಸಿದ್ದಾರೆ.
ಸೆಪ್ಟಂಬರ್ ತಿಂಗಳಲ್ಲಿ ವಾಡಿಕೆ ಮಳೆಗಿಂತ ಶೇ.65ಕ್ಕೂ ಅಧಿಕವಾಗಿದೆ. ಇದರಿಂದ ರೈತರ ಸ್ಥಿತಿ ಚಿಂತಾಜನಕವಾಗಿದೆ. ಅಂತ ರೈತರ ಕುಟುಂಬಕ್ಕೆ ಸರ್ಕಾರ ಗಂಭೀರವಾಗಿ ಪರಿಗಣಿಸಿ ಸೂಕ್ತ ಪ್ಯಾಕೇಜ್ ಮೂಲಕ ಬೆಳೆ ಪರಿಹಾರ ಘೋಷಣೆ ಮಾಡಬೇಕು ಎಂದು ಶಾಸಕ ಅಶೋಕ ಮನಗೂಳಿ ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ ಮುಖ್ಯಮಂತ್ರಿಗಳು ರೈತರಿಗೆ ಪರಿಹಾರ ನೀಡುವ ಭರವಸೆ ನೀಡಿದ್ದಾರೆ ಎಂದರು.ಈ ವೇಳೆ ಸಚಿವ ಭೈರತಿ ಸುರೇಶ, ಜಿಲ್ಲಾ ಕೆಡಿಪಿ ಸದಸ್ಯ ನೂರಅಹ್ಮದ ಅತ್ತಾರ, ಪ್ರವೀಣ ಕಂಟಿಗೊಂಡ, ಸಿದ್ದು ಹತ್ತಳ್ಳಿ ಸೇರಿದಂತೆ ಇತರರು ಇದ್ದರು.