ರಿಯಾಜಅಹ್ಮದ ದೊಡ್ಡಮನಿಕನ್ನಡಪ್ರಭ ವಾರ್ತೆ ಡಂಬಳ ಈ ಬಾರಿ ಮುಂಗಡಪತ್ರದಲ್ಲಿ ಸಿಎಂ ಸಿದ್ದರಾಮಯ್ಯನವರು ಗದಗ ಜಿಲ್ಲೆಯ ಡಂಬಳಕ್ಕೆ ತೋಟಗಾರಿಕೆ ಕಾಲೇಜು ಘೋಷಿಸಿರುವುದು ತೋಟಗಾರಿಕೆ ಬೆಳೆಗಾರರಲ್ಲಿ ಹುಮ್ಮಸ್ಸು ಮೂಡಿಸಿದ್ದು, ಸಚಿವ ಎಚ್.ಕೆ. ಪಾಟೀಲ ಹಾಗೂ ಶಾಸಕ ಜಿ.ಎಸ್. ಪಾಟೀಲರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗಿದೆ.
ಈ ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ ಸಿಂಗಟಾಲೂರ ಯೋಜನೆಯ ಮೂಲಕ ಡಂಬಳ, ತಾಮ್ರುಗುಂಡಿ, ಪೇಠಾ ಆಲೂರ, ಬಸಾಪೂರ, ಜಂತ್ಲಿ ಶಿರೂರ ಕೆರೆ ಭರ್ತಿಗೊಳಿಸಿದ ಹಿನ್ನೆಲೆ ತೋಟಗಾರಿಕಾ ಮತ್ತು ಕೃಷಿ ಬೆಳೆಗಳಲ್ಲಿ ಇಲ್ಲಿ ಕ್ರಾಂತಿ ಉಂಟಾಗಿದೆ. ಈಗ ತೋಟಗಾರಿಕೆ ಕಾಲೇಜು ಸಹ ಘೋಷಣೆಯಾಗಿರುವುದು ಸಹಜವಾಗಿಯೇ ಬೆಳೆಗಾರರಲ್ಲಿ ಮತ್ತು ತೋಟಗಾರಿಕೆ ವಿದ್ಯಾರ್ಥಿಗಳಲ್ಲಿ ಮತ್ತಷ್ಟು ಕನಸುಗಳನ್ನು ಗಟ್ಟಿಗೊಳಿಸಿದೆ.
ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಆಶಯದಂತೆ ಡಂಬಳ ಹೋಬಳಿಯ ಗ್ರಾಮಸ್ಥರು ತೋಟಗಾರಿಕಾ ಬೆಳೆಗೆ ಹೆಚ್ಚು ಉತ್ತೇಜನ ಕೊಟ್ಟಿದ್ದಾರೆ. ಈ ಭಾಗದಲ್ಲಿ ತೋಟಗಾರಿಕಾ ಕಾಲೇಜು ಪ್ರಾರಂಭವಾದರೆ ವಿದ್ಯಾರ್ಥಿಗಳ ಭವಿಷ್ಯ ಮತ್ತು ರೈತರ, ನವಯುವ ರೈತರಿಗೆ, ಕಾರ್ಮಿಕರಿಗೆ, ಮಹಿಳೆಯರಿಗೆ ಒಳ್ಳೆಯದಾಗುತ್ತದೆ ಎಂದು ಮುಖ್ಯಮಂತ್ರಿಗಳಿಗೆ ಒತ್ತಾಯ ಮಾಡಿದ್ದೇವೆ ಹಾಗಾಗಿ ಅದರ ಸಂಪೂರ್ಣ ವರದಿಯನ್ನು ತರಿಸಿಕೊಂಡಿದ್ದು. ಇದೆ ಶೈಕ್ಷಣಿಕ ವರ್ಷದಲ್ಲಿ ತೋಟಗಾರಿಕೆ ಕಾಲೇಜು ಪ್ರಾರಂಭಿಸಲು ಶ್ರಮಿಸಲಾಗುವುದು ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.ಶಾಸಕ ಜಿ.ಎಸ್. ಪಾಟೀಲರು ತೋಟಗಾರಿಕಾ ಕಾಲೇಜ್ ಯೋಜನೆಯ ರೂವಾರಿಗಳಾಗಿದ್ದು, ಅವರು ರೈತಾಪಿ ಕುಟುಂಬದಲ್ಲಿ ಹುಟ್ಟಿದ್ದರಿಂದ ರೈತರ ಕಷ್ಟ ಕಾರ್ಪಣ್ಯಗಳನ್ನು ಅರಿತಿದ್ದು ರೈತರ ಕಷ್ಟಗಳಿಗೆ ನೇರವಾಗಿ ಸಹಾಯ ಮಾಡುತ್ತಾರೆ. ಅವರು ತೋಟಗಾರಿಕಾ ಕಾಲೇಜು ತಂದ ಧೀಮಂತ ನಾಯಕರು ಎಂದು ಹಿರೇವಡ್ಡಟ್ಟಿ ಸಮಾಜ ಸೇವಕ ಅಬ್ದುಲ್‌ಸಾಬ ಕಲಕೇರಿ ಬಣ್ಣಿಸಿದರು.
ಕೆಲ ರಾಜಕಾರಣಿಗಳು ಕೇವಲ ತಮ್ಮ ಆರ್ಥಿಕ ಭದ್ರತೆಗಾಗಿ ರಾಜಕೀಯ ಮಾಡುತ್ತಾರೆ. ಆದರೆ, ಶಾಸಕ ಜಿ.ಎಸ್. ಪಾಟೀಲರು ರಾಜಕೀಯ ಮರೆತು ರೈತರ ಶ್ರೇಯಸ್ಸು, ಅಭಿವೃದ್ಧಿಗಾಗಿ ಶ್ರಮಿಸುತ್ತಾ ಬಂದಿದ್ದಾರೆ. ಈ ಭಾಗದ ತೋಟಗಾರಿಕೆಗೆ ಶಕ್ತಿ ನೀಡುವ ತೋಟಗಾರಿಕಾ ಕಾಲೇಜ್ ತಂದಿರುವುದು ಅವರ ಹೃದಯ ಶ್ರೀಮಂತಿಕೆಗೆ ಸಾಕ್ಷಿಯಾಗಿದೆ ರಾಜ್ಯ ರೈತ ಕೃಷಿ ಪುರಸ್ಕೃತ ಗೋಣಿಬಸಪ್ಪ ಕೊರ್ಲಹಳ್ಳಿ ಹೇಳಿದರು.