ಕೇಂದ್ರ ಸರ್ಕಾರವು ಜಾರಿಗೊಳಿಸುತ್ತಿರುವ ವಿಬಿ-ಜಿ ರಾಮ್-ಜಿ ಯೋಜನೆಯು ಗ್ರಾಮೀಣ ಭಾರತದ ಅಭಿವೃದ್ಧಿಯ ದೃಷ್ಟಿಯಿಂದ ಕೈಗೊಂಡಿರುವ ಅತ್ಯಂತ ಮಹತ್ವದಾಯಕವಾದ ಯೋಜನೆಯಾಗಿದೆ.

ವಿಬಿ-ಜಿ ರಾಮ್-ಜಿ ಜಾಗೃತಿ ಸಮಾವೇಶ, ಸಂತ ಶಿರೋಮಣಿ ರವಿದಾಸ ಜಯಂತಿಕನ್ನಡಪ್ರಭ ವಾರ್ತೆ ಹಳಿಯಾಳ

ಕೇಂದ್ರ ಸರ್ಕಾರವು ಜಾರಿಗೊಳಿಸುತ್ತಿರುವ ವಿಬಿ-ಜಿ ರಾಮ್-ಜಿ ಯೋಜನೆಯು ಗ್ರಾಮೀಣ ಭಾರತದ ಅಭಿವೃದ್ಧಿಯ ದೃಷ್ಟಿಯಿಂದ ಕೈಗೊಂಡಿರುವ ಅತ್ಯಂತ ಮಹತ್ವದಾಯಕವಾದ ಯೋಜನೆಯಾಗಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ್ ಕೋಣೆಮನೆ ಹೇಳಿದರು.

ಪಟ್ಟಣದ ಗಣೇಶ ಕಲ್ಯಾಣ ಮಂಟಪದಲ್ಲಿ ಬುಧವಾರ ಹಳಿಯಾಳ ಬಿಜೆಪಿ ಮಂಡಲದಲ್ಲಿ ಆಯೋಜಿಸಿದ ವಿಬಿ-ಜಿ ರಾಮ್-ಜಿ ಜಾಗೃತಿ ಸಮಾವೇಶ ಹಾಗೂ ಸಂತ ಶಿರೋಮಣಿ ರವಿದಾಸ ಜಯಂತಿ ಆಚರಣೆಯಲ್ಲಿ ಮಾತನಾಡಿದರು.

ಮೂಲಭೂತ ಸೌಲಭ್ಯ, ಉದ್ಯೋಗ ಸೃಷ್ಟಿ, ಡಿಜಿಟಲ್ ಸೌಲಭ್ಯಗಳ ಮೂಲಕ ಗ್ರಾಮಗಳನ್ನು ಸ್ವಾವಲಂಬಿ ಹಾಗೂ ಸಶಕ್ತವಾಗಿಸುವುದೇ ವಿಬಿ-ಜಿ ರಾಮ್-ಜಿ ಯೋಜನೆಯ ಮೂಲ ಆಶಯವಾಗಿದೆ. ಈ ಯೋಜನೆಯ ಲಾಭಗಳನ್ನು ಪ್ರತಿಯೊಬ್ಬ ಗ್ರಾಮಸ್ಥರಿಗೆ ತಲುಪಿಸುವ ಮೂಲಕ ಗ್ರಾಮ-ಹಾಗೂ ನಗರದ ಅಂತರವನ್ನು ಕಡಿಮೆ ಮಾಡಿ ಸಮೃದ್ಧಿ ಹಾಗೂ ಆತ್ಮನಿರ್ಭರ ಭಾರತ ನಿರ್ಮಾಣ ಮಾಡುವ ಉದ್ದೇಶ ಗುರಿಯನ್ನು ಈ ಯೋಜನೆ ಹೊಂದಿದೆ ಎಂದರು.

ಮಾಜಿ ಶಾಸಕ ಸುನೀಲ ಹೆಗಡೆ ಮಾತನಾಡಿ, ಮನರೇಗಾ ಯೋಜನೆಯಡಿಯಲ್ಲಿ ನಡೆದ ಹಗಲು ದರೋಡೆಯನ್ನು ಸರಿಯಾಗಿ ಅಧ್ಯಯನ ಮಾಡಿಯೇ ಅನ್ಯಾಯ, ಅಕ್ರಮಗಳಿಗೆ ಅವಕಾಶ ನೀಡದಂತೆ ಪರಿಷ್ಕರಿಸಿ ಆರಂಭಿಸಲಾಗುತ್ತಿದೆ. ಈ ಯೋಜನೆಯ ಬಗ್ಗೆ ಕಾಂಗ್ರೆಸ್ ಸಾರ್ವಜನಿಕರಲ್ಲಿ ಸುಳ್ಳು ಪ್ರಚಾರ ಮಾಡುತ್ತಿದೆ. ಜನರಿಗೆ ಸರಿಯಾಗಿ ವಿಬಿ-ಜಿ ರಾಮ್-ಜಿ ಯೋಜನೆಯ ಬಗ್ಗೆ ತಿಳಿ ಹೇಳುವ ಜವಾಬ್ದಾರಿಯು ಕಾರ್ಯಕರ್ತರದ್ದಾಗಿದೆ ಎಂದರು.

ವಿಪ ಸದಸ್ಯ ಮಾಜಿ ಎಸ್.ಎಲ್. ಘೋಟ್ನೇಕರ ಮಾತನಾಡಿ, ಮುಂಬರಲಿರುವ ಎಲ್ಲಾ ಗ್ರಾಪಂ, ತಾಪಂ, ಜಿಪಂ ಹಾಗೂ ಪೌರ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿಗಳೇ ಗೆಲ್ಲಬೇಕು ಎಂದರು.

ಮಂಡಲ ಪ್ರಭಾರಿಗಳಾದ ನಿತ್ಯಾನಂದ ಗಾಂವ್ಕರ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದರು.

ಸಮಾವೇಶದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾಜಿ ನರಸಾನಿ, ಮಂಡಲ ಅಧ್ಯಕ್ಷ ವಿಠ್ಠಲ ಸಿದ್ದಣ್ಣನವರ, ಪ್ರಧಾನ ಕಾರ್ಯದರ್ಶಿ ಸಂತೋಷ ಘಟಕಾಂಬ್ಳೆ, ವಿ.ಎಂ. ಪಾಟೀಲ, ಜಿಲ್ಲಾ ವಿಶೇಷ ಆಹ್ವಾನಿತ ಮಂಗೇಶ ದೇಶಪಾಂಡೆ, ಅನಿಲ್ ಮುತ್ನಾಳೆ, ಮಾರ್ಕೇಟಿಂಗ್ ಸೊಸೈಟಿ ಅಧ್ಯಕ್ಷ ಶ್ರೀನಿವಾಸ ಘೋಟ್ನೇಕರ, ಜಿಲ್ಲಾ ಒಬಿಸಿ ಪ್ರಧಾನ ಕಾರ್ಯದರ್ಶಿ ಗಣಪತಿ ಕರಂಜೇಕರ, ಮಹಿಳಾ ಮೊರ್ಚಾ ಅಧ್ಯಕ್ಷೆ ಸಂಗೀತಾ ಜಾವಳೇಕರ, ಎಸ್.ಸಿ ಮೋರ್ಚಾ ಅಧ್ಯಕ್ಷ ಯಲ್ಲಪ್ಪಾ ಹೊನ್ನೋಜಿ, ಯುವ ಮೊರ್ಚಾ ಅಧ್ಯಕ್ಷ ಯಲ್ಲಪ್ಪಾ ಹೆಳವರ, ಸೋನಪ್ಪಾ ಸುಣಕಾರ, ಉದಯ ಜಾಧವ ಹಾಗೂ ಇತರರು ಇದ್ದರು.