ನವಲಿ ಡ್ಯಾಂ ನಿರ್ಮಾಣದ ಘೋಷಣೆ ಮಾಡಲಿ

KannadaprabhaNewsNetwork |  
Published : Jun 25, 2026, 02:00 AM IST
ಪೋಟೊ24.15: ಕೊಪ್ಪಳ ನಗರದ ಬಿಜೆಪಿ ಕಚೇರಿಯಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ನಿಕಟ ಪೂರ್ವ ಅಭ್ಯರ್ಥಿ ಡಾ. ಬಸವರಾಜ್ ಎಸ್. ಕ್ಯಾವಟರ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.  | Kannada Prabha

ಸಾರಾಂಶ

ತುಂಗಭದ್ರಾ ಡ್ಯಾಂನಲ್ಲಿನ ಹೂಳಿನ ಬಗ್ಗೆ, ನವಲಿ ಜಲಾಶಯ ನಿರ್ಮಾಣದ ಬಗ್ಗೆ ಬಜೆಟ್‌ನಲ್ಲಿ ಹಲವು ಬಾರಿ ಪ್ರಸ್ತಾಪ ಮಾಡಲಾಗಿದೆ.

ಕೊಪ್ಪಳ: ತುಂಗಭದ್ರಾ ಜಲಾಶಯದ ನೂತನ ಕ್ರಸ್ಟ್‌ಗೇಟ್‌ಗಳ ಉದ್ಘಾಟನೆಗೆ ಮೂರು ರಾಜ್ಯಗಳ ಸಿಎಂ ಆಗಮಿಸುತ್ತಿದ್ದು, ಆದರೆ ಡ್ಯಾಂನಲ್ಲಿನ ಹೂಳಿನ ಬಗ್ಗೆ ಏನೂ ಮಾತನಾಡುತ್ತಿಲ್ಲ. ನವಲಿ ಡ್ಯಾಂ ಬಗ್ಗೆಯೂ ಬರಿ ಮಾತುಗಳಾಗಿವೆ. ಲೋಕಾರ್ಪಣೆಯ ಕಾರ್ಯಕ್ರಮದಲ್ಲಿ ನವಲಿ ಡ್ಯಾಂ ನಿರ್ಮಾಣದ ಘೋಷಣೆ ಮಾಡಲಿ ಎಂದು ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ನಿಕಟ ಪೂರ್ವ ಅಭ್ಯರ್ಥಿ ಡಾ.ಬಸವರಾಜ್ ಎಸ್. ಕ್ಯಾವಟರ್ ಹೇಳಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಕಿತ್ತು ಹೋದಾಗ ಡಿ.ಕೆ. ಶಿವಕುಮಾರ ಬಂದು ನೋಡಿ ಹೋದರು. ಆದರೆ ಡ್ಯಾಂನ ಹೂಳಿನ ಬಗ್ಗೆ ಏನೂ ಮಾತನಾಡಲಿಲ್ಲ. ಕಾಂಗ್ರೆಸ್ ಸರ್ಕಾರದ ಈ ನಿರ್ಲಕ್ಷ್ಯದಿಂದ ಕಳೆದ ವರ್ಷ ರೈತರು ಎರಡನೇ ಬೆಳೆ ಬೆಳೆಯಲಾಗಲಿಲ್ಲ. ಗೇಟ್ ದುರಸ್ಥಿಯಿಂದ ರೈತರು ತೊಂದರೆ ಎದುರಿಸಿದರು. ಡ್ಯಾಂನ ಗೇಟ್ ನಿರ್ಮಾಣಕ್ಕೆ ೫೦ ಕೋಟಿ ಖರ್ಚು ಮಾಡಿರುವ ಈ ಸರ್ಕಾರ ಅದರ ಲೋಕಾರ್ಪಣೆಗೆ ನೂರಾರು ಕೋಟಿ ವೆಚ್ಚ ಮಾಡುತ್ತಿದೆ. ಡ್ಯಾಂನಲ್ಲಿನ ಜ್ವಲಂತ ಸಮಸ್ಯೆ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದರು.

ತುಂಗಭದ್ರಾ ಡ್ಯಾಂನಲ್ಲಿನ ಹೂಳಿನ ಬಗ್ಗೆ, ನವಲಿ ಜಲಾಶಯ ನಿರ್ಮಾಣದ ಬಗ್ಗೆ ಬಜೆಟ್‌ನಲ್ಲಿ ಹಲವು ಬಾರಿ ಪ್ರಸ್ತಾಪ ಮಾಡಲಾಗಿದೆ. ಆದರೆ ಪರ್ಯಾಯ ವ್ಯವಸ್ಥೆ ಮಾಡಿಲ್ಲ. ಕಳೆದ ಮೂರು ವರ್ಷಗಳಿಂದಲೂ ಆಂಧ್ರ ಸಿಎಂಗೆ ಪತ್ರ ಬರೆದಿದ್ದೇವೆ ಎಂದೆನ್ನುತ್ತಿದ್ದಾರೆ. ಈಗ ಅದೇ ರಾಜ್ಯಗಳ ಮುಖ್ಯಮಂತ್ರಿಗಳು ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದು ಈ ಬಗ್ಗೆ ನವಲಿ ಡ್ಯಾಂ ನಿರ್ಮಾಣದ ಬಗ್ಗೆ ಪ್ರಸ್ತಾಪ ಮಾಡಿ ರೈತರ ಹಿತ ಕಾಪಾಡಲಿ. ಮೂರು ರಾಜ್ಯಗಳ ಸಿಎಂ, ಕೇಂದ್ರ ಜಲಶಕ್ತಿ ಸಚಿವರು ಒಂದೇ ವೇದಿಕೆಯಡಿ ಕೂಡುವುದು ಅಪರೂಪ. ೩೦ ಟಿಎಂಸಿ ನೀರಿಗಾಗಿ ನವಲಿ ಜಲಾಶಯ ನಿರ್ಮಾಣಕ್ಕೆ ಒತ್ತು ನೀಡಬೇಕು ಹಾಗೂ ಜೂ. ೨೫ರ ಕಾರ್ಯಕ್ರಮದಲ್ಲಿ ಇದರ ಘೋಷಣೆ ಮಾಡಬೇಕು ಎಂದು ಒತ್ತಾಯ ಮಾಡಿದರು.

ನವಲಿ ಜಲಾಶಯದ ಬಗ್ಗೆ ಕಾಂಗ್ರೆಸ್ ಸರ್ಕಾರ ಅನುದಾನ ಮೀಸಲಿಟ್ಟಿಲ್ಲ. ಹಿಂದೆ ಬಿಜೆಪಿ ಸರ್ಕಾರ ಅದಕ್ಕೆ ಅನುದಾನ ಮೀಸಲಿಟ್ಟಿತ್ತು. ಡಿಕೆಶಿ ಹೂಳಿನ ಬಗ್ಗೆ ಕಾಳಜಿ ಇಲ್ಲ. ನವಲಿ ಡ್ಯಾಂ ನಿರ್ಮಾಣದ ಬಗ್ಗೆ ಘೋಷಣೆ ಮಾಡಬೇಕು. ಪ್ರತಿ ವರ್ಷವೂ ಡ್ಯಾಂಗೆ ಹೂಳು ತುಂಬುತ್ತಿದೆ. ಈ ಸರ್ಕಾರ ಸ್ಪಷ್ಟ ನಿರ್ಧಾರ ಕೈಗೊಳ್ಳುತ್ತಿಲ್ಲ ಎಂದರು.

ಇದಲ್ಲದೇ ಅಳವಂಡಿ-ಬೆಟಗೇರಿ ಏತ ನೀರಾವರಿ ಯೋಜನೆಗೆ ಭೂಮಿ ನೀಡಿದ ರೈತರ ಜಮೀನಿಗೆ ನೀರು ಹರಿಯುತ್ತಿಲ್ಲ. ಬಹದೂರಬಂಡಿ ಏತ ನೀರಾವರಿ ಯೋಜನೆಯಡಿ ಪೈಪಲೈನ್ ಮಾಡಿದ್ದಾರೆ ವಿನಃ ರೈತರ ಕಾಲುವೆ ನಿರ್ಮಿಸಿಲ್ಲ ಹಿರೇಹಳ್ಳ ಯೋಜನೆ ೩೫೦೦ ಸಾವಿರ ಎಕರೆ ಪ್ರದೇಶದ ಗುರಿ ಇದ್ದರೂ ೫೦೦ಎಕರೆಗೆ ನೀರು ಕೊಡಲಾಗಿಲ್ಲ. ಇನ್ನು ಸಿಂಗಟಾಲೂರು ಏತ ನೀರಾವರಿ ಯೋಜನೆ ಸ್ಥಿತಿಯೂ ಅದೇ ಆಗಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣನವರ್ ಮಾತನಾಡಿ, ಈ ಹಿಂದೆ ಕೊಪ್ಪಳ-ಯಲಬುರ್ಗಾ ತಾಲೂಕಿನ ಕೆರೆ ತುಂಬಿಸುವ ಯೋಜನೆಗೆ ೨೭೦ ಕೋಟಿ ಘೋಷಣೆ ಮಾಡಿತು. ಆದರೆ ಈ ವರೆಗೂ ಪೈಪಲೈನ್ ಕಾಮಗಾರಿ ನಡೆಯುತ್ತಿದೆ. ಈ ಬಗ್ಗೆ ಕಾಂಗ್ರೆಸ್ ಶಾಸಕರು ಏನೂ ಮಾತನಾಡುತ್ತಿಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಎಂಎಲ್‌ಸಿ ಹೇಮಲತಾ ನಾಯಕ್, ಗ್ರಾಮೀಣ ಮಂಡಲ ಅಧ್ಯಕ್ಷ ವೀರೇಶ್ ಸಜ್ಜನ್, ಅಂದಪ್ಪ ಯಲ್ಲಮ್ಮನವರ, ಶ್ರೀನಿವಾಸ್ ಕಲದಾಗಿ ಹಾಗೂ ರಾಜು ವಸ್ತ್ರದ್ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಾಸೋಹಕ್ಕೆ ನೀಡಿದ ದಾನ ಎಂದಿಗೂ ವ್ಯರ್ಥವಾಗದು: ಚನ್ನವೀರ ಸ್ವಾಮಿಗಳು
ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ: ರಾಜಶ್ರೀ ಸಜ್ಜೇಶ್ವರ