ಭಾರತ ಲೂಟಿ ಮಾಡಿದ ಘಜ್ನಿಗೂ ಮೋದಿ-ಶಾಗೂ ವ್ಯತ್ಯಾಸವಿಲ್ಲ

KannadaprabhaNewsNetwork |  
Published : Jun 25, 2026, 02:00 AM IST
ಬಿ.ಕೆ. ಹರಿಪ್ರಸಾದ್‌ | Kannada Prabha

ಸಾರಾಂಶ

ಬಿಜೆಪಿಯವರು ಧರ್ಮವನ್ನು ಗುತ್ತಿಗೆ ಪಡೆದಿರುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ಈಗ ನೋಡಿದರೆ ದೇವರ, ಮಂದಿರದ ಹೆಸರಿನಲ್ಲಿ ನೂರಾರು ಕೋಟಿ ಲೂಟಿ ಹೊಡೆದಿದ್ದಾರೆ. ಇವರಿಗೂ ಘಜ್ನಿಗೂ ವ್ಯತ್ಯಾಸವೇ ಇಲ್ಲ ಎಂದು ಬಿ.ಕೆ. ಹರಿಪ್ರಸಾದ್‌ ಕಿಡಿಕಾರಿದರು.

ಹುಬ್ಬಳ್ಳಿ:

ಭಾರತದ ಮೇಲೆ ಬರೋಬ್ಬರಿ 17 ಬಾರಿ ದಾಳಿ ಮಾಡಿ ಲೂಟಿ ಮಾಡಿದ ಮಹಮ್ಮದ್‌ ಘಜ್ನಿಗೂ ರಾಮಮಂದಿರ ಕಟ್ಟಿ, ಮಂದಿರದ ಹೆಸರಲ್ಲಿ ಲೂಟಿ ಹೊಡೆದ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾಗೂ ಯಾವುದೇ ವ್ಯತ್ಯಾಸ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ ಕಿಡಿಕಾರಿದರು.

ನಗರದಲ್ಲಿ ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಧರ್ಮವನ್ನು ಗುತ್ತಿಗೆ ಪಡೆದಿರುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ಈಗ ನೋಡಿದರೆ ದೇವರ, ಮಂದಿರದ ಹೆಸರಿನಲ್ಲಿ ನೂರಾರು ಕೋಟಿ ಲೂಟಿ ಹೊಡೆದಿದ್ದಾರೆ. ಇವರಿಗೂ ಘಜ್ನಿಗೂ ವ್ಯತ್ಯಾಸವೇ ಇಲ್ಲ ಎಂದರು.

ದೇಶದಲ್ಲಿ ಎಲ್ಲ ಧರ್ಮದ ಆಚರಣೆಗೆ ಅವಕಾಶವಿದೆ. ಆದರೆ, ಬಿಜೆಪಿಗರು ದೇಶದ ಅಭಿವೃದ್ಧಿ ಮಾಡದೆ ಧರ್ಮ ಹಾಗೂ ಒಂದು ಸಮುದಾಯದ ಅಭಿವೃದ್ಧಿ ಹೆಸರಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ನೋಂದಣಿಗೆ ಏಕೆ ವಿರೋಧ:

ಪೊಲೀಸ್‌ ಭಯಕ್ಕೆ ಫುಟ್‌ಪಾತ್‌ ಮೇಲೆ ಅಂಗಡಿ ಇಟ್ಟವನು ನೋಂದಣಿ ಮಾಡಿಕೊಳ್ಳುತ್ತಾನೆ. ಆದರೆ, 100 ವರ್ಷ ಇತಿಹಾಸವಿರುದ ಆರ್‌ಎಸ್‌ಎಸ್‌ ಏಕೆ ನೋಂದಣಿ ಮಾಡಿಸಿಕೊಂಡಿಲ್ಲ. ಮಾಡಿಸಿಕೊಂಡರೆ ಏನಾಗುತ್ತದೆ? ಎಂದು ಪ್ರಶ್ನಿಸಿರುವ ಹರಿಪ್ರಸಾದ್‌, ನಿಮಗೆ ಎಲ್ಲಿಂದ ಹಣ ಬರುತ್ತದೆ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸುತ್ತ, ಆರ್‌ಎಸ್‌ಎಸ್‌ ಬಗ್ಗೆ ಸಂಸದ ರಮೇಶ ಜಿಗಜಿಣಗಿ ಹೇಳಿರುವುದು ಸತ್ಯವಾಗಿದೆ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಆರ್‌ಎಸ್‌ಎಸ್‌ ಒಲವಿದ್ದರೆ ಗೇಟ್‌ಪಾಸ್‌:

ಆರ್‌ಎಸ್‌ಎಸ್‌ ಸಿದ್ಧಾಂತವನ್ನು ಕಾಂಗ್ರೆಸ್‌ ಒಪ್ಪಿಕೊಳ್ಳುವುದಿಲ್ಲ. ನಮ್ಮವರು ಅವರ ಪರ ಹೋದರೆ ಅವರಿಗೆ ಪಕ್ಷದಲ್ಲಿ ಅವಕಾಶವಿಲ್ಲ ಎಂದು ಎಚ್ಚರಿಕೆ ನೀಡಿದ ಅವರು, ಆರ್‌ಎಸ್ಎಸ್‌ ಸಂವಿಧಾನ ಹಾಗೂ ಜಾತ್ಯತೀತ ತತ್ವಕ್ಕೆ ವಿರೋಧವಾಗಿದೆ ಎಂದು ದೂರಿದರು. ರಾಹುಕಾಲ:ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಅಚ್ಛೇದಿನ್‌ ಶುರುವಾಯಿತು ಎಂದು ಹೇಳಿದ್ದರು. ಆದರೆ, ರಾಹುಕಾಲ ಬಂದು ದೇಶದ ಅಭಿವೃದ್ಧಿಯಿಂದ ವಿಮುಖವಾಗಿದೆ ಎಂದು ದೂರಿದ ಅವರು, ರಾಜ್ಯಕ್ಕೆ ಕೇಂದ್ರ ಸರ್ಕಾರ ನಿರಂತರವಾಗಿ ಅನ್ಯಾಯ ಮಾಡುತ್ತಿದ್ದು ಈ ಬಗ್ಗೆ ಬಿಜೆಪಿ ಸಂಸದರು ಮೋದಿ ಅವರನ್ನು ಏಕೆ ಪ್ರಶ್ನಿಸುತ್ತಿಲ್ಲ ಎಂದರು.

ಕಳಸಾ- ಬಂಡೂರಿ ಏನಾಯ್ತು?:

ಉತ್ತರ ಕರ್ನಾಟಕದ ಬಹುದಿನದ ಬೇಡಿಕೆಯಾದ ಕಳಸಾ-ಬಂಡೂರಿ ಯೋಜನೆ ಜಾರಿಗೆ ಅರಣ್ಯ ನಾಶವಾಗುತ್ತದೆ ಎಂಬ ನೆಪದಿಂದ ಕೇಂದ್ರ ಸರ್ಕಾರ ಅನುಮತಿ ನೀಡುತ್ತಿಲ್ಲ. ಆದರೆ, ಛತ್ತಿಸಗಡದಲ್ಲಿ ಎಲಿಫಂಟ್‌ ಕಾರಿಡಾರ್‌ ಇದ್ದ ನೂರಾರು ಎಕರೆ ಪ್ರದೇಶದಲ್ಲಿದ್ದ ಅಪಾರ ಪ್ರಮಾಣದ ಮರ ಕಡಿದು ಅದಾನಿ ಗ್ರೂಪ್‌ಗೆ ನೀಡಿದ್ದು ಏಕೆ? ಎಂದಿರುವ ಅವರು, ಲೋಕಸಭೆ ಚುನಾವಣೆ ವೇಳೆ ಕಳಸಾ- ಬಂಡೂರಿ ಯೋಜನೆ ಜಾರಿಗೆ ಅನುಮತಿ ಸಿಕ್ಕಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಿಜಯೋತ್ಸವ ಆಚರಿಸಿದ್ದರು. ಆದರೆ, ಈಗಲೂ ನಮಗೆ ಅನುಮತಿ ಸಿಗುತ್ತಿಲ್ಲವೆಂದು ವ್ಯಂಗ್ಯವಾಡಿದರು.

ಅದೇ ರೀತಿ ಭದ್ರಾ ಮೇಲ್ದಂಡೆ ಯೋಜನೆಗೆ ₹ 5300 ಕೋಟಿ ನೀಡುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದರು. ಆದರೆ ಈ ವರೆಗೂ ಹಣ ನೀಡಿಲ್ಲ ಎಂದು ಕಿಡಿಕಾರಿದರು.

ಅಪಪ್ರಚಾರ:

ನೀಟ್‌ ಪರೀಕ್ಷೆ ದಿನ ಕಾಂಗ್ರೆಸ್‌ ಸಮಾವೇಶದಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದರೆ ವಿಷಾದ ವ್ಯಕ್ತಪಡಿಸುವೆ ಎಂದು ಹರಿಪ್ರಸಾದ್‌, ಟ್ರಾಫಿಕ್‌ ಜಾಮ್‌ ಆಗಿದ್ದರೆ 30000 ವಿದ್ಯಾರ್ಥಿಗಳಿಗೆ ತೊಂದರೆ ಆಗಬೇಕಿತ್ತು. ನಮ್ಮಿಂದಲ್ಲೇ ಮಕ್ಕಳಿಗೆ ತೊಂದರೆಯಾಗಿದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ ಎಂದು ದೂರಿದ ಅವರು, ಮೂರು ಬಾರಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿ 1.40 ಕೋಟಿ ಮಕ್ಕಳಿಗೆ ತೊಂದರೆಯಾಯಿತು. 12 ಜನ ಆತ್ಮಹತ್ಯೆ ಮಾಡಿಕೊಂಡರು. ಇದಕ್ಕೆ ಯಾರು ಹೊಣೆ. ಪ್ರಶ್ನೆಪತ್ರಿಕೆಯನ್ನು ಯುದ್ಧ ವಿಮಾನದಲ್ಲಿ ಸರಬರಾಜು ಮಾಡುವ ಪರಿಸ್ಥಿತಿ ಈ ದೇಶಕ್ಕೆ ಬರಬಾರದಿತ್ತು ಎಂದರು.

ಚುನಾವಣಾ ತಯಾರಿ:

ಮುಂಬರುವ ಚುನಾವಣೆಗೆ ಸಿದ್ಧತೆ ನಡೆಸುವ ದೃಷ್ಟಿಯಿಂದ ನನ್ನನ್ನು ಅಧ್ಯಕ್ಷನನ್ನಾಗಿ ಮಾಡಿದ್ದಾರೆ. ಅನೇಕರು ಅಧ್ಯಕ್ಷಗಿರಿ ಮೇಲೆ ಕಣ್ಣಿಟ್ಟಿದ್ದರು. ಆದರೂ ವರಿಷ್ಠರು ನನ್ನ ಮೇಲೆ ನಂಬಿಕೆ ಇಟ್ಟು ಜವಾಬ್ದಾರಿ ನೀಡಿದ್ದಾರೆ. ಶೀಘ್ರದಲ್ಲೇ ಜಿಲ್ಲಾ ಘಟಕ ಪುನರಚಿಸಿ ಪಕ್ಷ ಸಂಘಟಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ವಿಪ ಮುಖ್ಯಸಚೇತಕ ಸಲೀಂಅಹ್ಮದ್‌, ಶಾಸಕ ಪ್ರಸಾದ ಅಬ್ಬಯ್ಯ, ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಹುಡಾ ಅಧ್ಯಕ್ಷ ಶಾಕೀರ ಸನದಿ, ವಿಪ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ, ಜಿಲ್ಲಾಧ್ಯಕ್ಷರಾದ ಅನೀಲಕುಮಾರ ಪಾಟೀಲ, ಅಲ್ತಾಫ್‌ ಹಳ್ಳೂರ, ಕಾರ್ಯದರ್ಶಿ ಪ್ರಕಾಶಗೌಡ ಪಾಟೀಲ, ಮಾಜಿ ಸಂಸದ ಮಂಜುನಾಥ ಕುನ್ನೂರ ಸೇರಿದಂತೆ ಹಲವರಿದ್ದರು.ಪೆಟ್ರೋಲ್‌ ಬೆಲೆ ಇಳಿಯುತ್ತಿಲ್ಲ:

ಮದ್ಯಪ್ರಾಚ್ಯ ಯುದ್ಧದಿಂದಾಗಿ ಡೀಸೆಲ್‌, ಪೆಟ್ರೋಲ್‌ ಬೆಲೆ ಹೆಚ್ಚಾಗಿತ್ತು. ಆದರೆ, ಇದೀಗ ಯುದ್ಧ ಶಾಂತವಾಗಿದೆ. ಪೆಟ್ರೋಲ್‌-ಡೀಸೆಲ್‌ ಬ್ಯಾರಲ್‌ಗಳ ಬೆಲೆಯೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಡಿಮೆಯಾಗಿದೆ. ಆದರೂ ಬೆಲೆಯನ್ನೇಕೆ ಇಳಿಸುತ್ತಿಲ್ಲ ಎಂದು ಪ್ರಶ್ನಿಸಿರುವ ಹರಿಪ್ರಸಾದ್‌, ಚುನಾವಣೆ ಬಂದಾಗ ಬರೀ ಪಾಕಿಸ್ತಾನ-ಹಿಂದೂಸ್ತಾನ ಹಲಾಲ್‌, ಚಿಕನ್‌, ಹಿಜಾಬ್‌ ಎನ್ನುವುದಷ್ಟೇ ಆಗಿದೆ ಎಂದು ಟೀಕಿಸಿದರು.

ಸಮತೋಲಿತ ಕ್ಯಾಬಿನೆಟ್‌...

ರಾಜ್ಯದಲ್ಲಿ ಸಮತೋಲಿತ ಕ್ಯಾಬಿನೆಟ್‌ ಬರುತ್ತದೆಯೇ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಹರಿಪ್ರಸಾದ್‌, ಸಚಿವ ಸ್ಥಾನಕ್ಕಾಗಿ ಎಲ್ಲೂ ಪ್ರತಿಭಟನೆ ನಡೆಯುತ್ತಿಲ್ಲ. ಆದರೆ, ಹಕ್ಕೊತ್ತಾಯ ನಡೆಯುತ್ತಿದೆ ಅಷ್ಟೇ ಎಂದು ಸ್ಪಷ್ಟಪಡಿಸಿದರು. ಕ್ಯಾಬಿನೆಟ್‌ ಯಾವಾಗ ವಿಸ್ತರಣೆ ಮಾಡಬೇಕು. ಯಾರಿಗೆ ಕೊಡಬೇಕು ಎಂಬುದನ್ನು ಮುಖ್ಯಮಂತ್ರಿಗಳು ನಿರ್ಧರಿಸುತ್ತಾರೆ ಎಂದರು. ಆದರೆ, ಬಿಜೆಪಿಯಲ್ಲಿ ಪ್ರತಿನಿತ್ಯ ಗದ್ದಲ ನಡೆಯುತ್ತಿದೆ. ಅವರ ಕ್ರಮಕೈಗೊಳ್ಳಲು ಅವರಿಗೆ ಶಕ್ತಿ ಇದೆಯಾ? ಎಂದು ಪ್ರಶ್ನಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಾಸೋಹಕ್ಕೆ ನೀಡಿದ ದಾನ ಎಂದಿಗೂ ವ್ಯರ್ಥವಾಗದು: ಚನ್ನವೀರ ಸ್ವಾಮಿಗಳು
ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ: ರಾಜಶ್ರೀ ಸಜ್ಜೇಶ್ವರ