ಬಡ್ಡಿ ದಂಧೆ ವಿರುದ್ಧ ಜಿಲ್ಲಾ ಪೊಲೀಸರ ಕಾರ್ಯಾಚರಣೆ

KannadaprabhaNewsNetwork |  
Published : Jun 25, 2026, 02:00 AM IST
ಸಾಂದರ್ಭಿಕ ಚಿತ್ರ. | Kannada Prabha

ಸಾರಾಂಶ

ಅಕ್ರಮ ಹಣಕಾಸು ವ್ಯವಹಾರ, ವಿಪರೀತ ಬಡ್ಡಿ ವಸೂಲಿ, ಸಾಲಗಾರರಿಗೆ ಬೆದರಿಕೆ ಹಾಕುವುದು ಹಾಗೂ ಮಾನಸಿಕ ಕಿರುಕುಳ ನೀಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಆಧರಿಸಿ ಗದಗ ಪೊಲೀಸರು ವಿಶೇಷ ಕಾರ್ಯಾಚರಣೆ ಕೈಗೊಂಡರು.

ಗದಗ: ನಗರದಲ್ಲಿ ಕಳೆದ ಕೆಲವು ದಿನಗಳಿಂದ ಪತ್ತೆಯಾಗಿರುವ ಅಕ್ರಮ ಹಣಕಾಸು ವ್ಯವಹಾರ ಹಾಗೂ ದುಬಾರಿ ಬಡ್ಡಿ ದಂಧೆ ಕುರಿತ ಸರಣಿ ಪ್ರಕರಣಗಳು ಬೆಳಕಿಗೆ ಬಂದ ಹಿನ್ನೆಲೆ ಜಿಲ್ಲಾ ಪೊಲೀಸರು ಬುಧವಾರ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಒಬ್ಬ ವ್ಯಕ್ತಿಯ ಮನೆ ಹಾಗೂ ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಮಹತ್ವದ ದಾಖಲೆಗಳು, ಚಿನ್ನ, ನಗದು ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಅಕ್ರಮ ಹಣಕಾಸು ವ್ಯವಹಾರ, ವಿಪರೀತ ಬಡ್ಡಿ ವಸೂಲಿ, ಸಾಲಗಾರರಿಗೆ ಬೆದರಿಕೆ ಹಾಕುವುದು ಹಾಗೂ ಮಾನಸಿಕ ಕಿರುಕುಳ ನೀಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಆಧರಿಸಿ ಗದಗ ಪೊಲೀಸರು ವಿಶೇಷ ಕಾರ್ಯಾಚರಣೆ ಕೈಗೊಂಡರು. 6 ವಿಶೇಷ ತಂಡಗಳನ್ನು ರಚಿಸಿ ಬೆಟಗೇರಿಯ ನಿವಾಸಿ ಮನೋಹರ ಕಟ್ಟಿಮನಿ ಎಂಬವರ ಮನೆ ಹಾಗೂ ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಲಾಯಿತು.

ದಾಳಿಯ ವೇಳೆ 150ಕ್ಕೂ ಹೆಚ್ಚು ಚೆಕ್‌ಗಳು, 65ಕ್ಕೂ ಹೆಚ್ಚು ಖಾಲಿ ಬಾಂಡ್‌ಗಳು, ಒಪ್ಪಂದ ಪತ್ರಗಳು ಹಾಗೂ ವಿವಿಧ ದಾಖಲೆಗಳು, 9 ಬ್ಯಾಂಕ್ ಪಾಸ್‌ಬುಕ್‌ಗಳು, 11 ಚೆಕ್‌ ಬುಕ್‌ ಗಳು, 5ಕ್ಕೂ ಹೆಚ್ಚು ಎಟಿಎಂ ಕಾರ್ಡ್‌ಗಳು ಹಾಗೂ 3 ಪ್ಯಾನ್ ಕಾರ್ಡ್‌ಗಳು ಪೊಲೀಸರು ದಾಳಿಯ ವೇಳೆ ವಶಪಡಿಸಿಕೊಂಡಿದ್ದಾರೆ.

ಯಾವುದೇ ಲೆಕ್ಕಪತ್ರಗಳಲ್ಲಿ ದಾಖಲಾಗದ ಅಂದಾಜು 422.4 ಗ್ರಾಂ ಚಿನ್ನ ಪತ್ತೆಯಾಗಿದ್ದು, ಇದರ ಮೌಲ್ಯ ಸುಮಾರು ₹60 ಲಕ್ಷ ಎಂದು ಅಂದಾಜಿಸಲಾಗಿದೆ. ಅಲ್ಲದೇ ₹5.5 ಲಕ್ಷ ನಗದು ಹಣವನ್ನೂ ವಶಪಡಿಸಿಕೊಳ್ಳಲಾಗಿದೆ. ದಾಳಿಯ ವೇಳೆ ಗೋವಾ ಮದ್ಯದ 10 ಬಾಟಲಿಗಳು ಕೂಡ ಪತ್ತೆಯಾಗಿದ್ದು, ಅವುಗಳನ್ನು ಸಹ ಜಪ್ತಿ ಮಾಡಲಾಗಿದೆ.

ಪ್ರಕರಣ ಸಂಬಂಧ ಭಾರತೀಯ ನ್ಯಾಯ ಸಂಹಿತೆ(ಬಿಎನ್ಎಸ್) ಸುಲಿಗೆ, ಬೆದರಿಕೆ, ಕ್ರಿಮಿನಲ್ ಇಂಟಿಮಿಡೇಶನ್ ಸೇರಿದಂತೆ ವಿವಿಧ ಕಲಂಗಳು ಹಾಗೂ ಮೈಕ್ರೋ ಫೈನಾನ್ಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯ ವಿರುದ್ಧ ಅಕ್ರಮ ಹಣಕಾಸು ಜಾಲದ ಬಗ್ಗೆ ತನಿಖೆ ಕೂಡಾ ಮುಂದುವರಿದಿದೆ.

ಖಡಕ್ ಸಂದೇಶ: ಅಕ್ರಮ ಬಡ್ಡಿ ದಂಧೆ ಹಾಗೂ ಸಮಾಜಕ್ಕೆ ಹಾನಿಕಾರಕವಾಗಿರುವ ಅನಧಿಕೃತ ಹಣಕಾಸು ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಉದ್ದೇಶದಿಂದ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಅಕ್ರಮ ಬಡ್ಡಿ ವ್ಯವಹಾರ ನಡೆಸುವವರಿಗೆ ಖಡಕ್ ಸಂದೇಶ ರವಾನಿಸಲಾಗಿದೆ. ತನಿಖೆಯಿಂದ ಇನ್ನಷ್ಟು ಮಾಹಿತಿ ಹೊರಬರಲಿದೆ ಎಂದು ಎಸ್ಪಿ ರೋಹನ್ ಜಗದೀಶ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಾಸೋಹಕ್ಕೆ ನೀಡಿದ ದಾನ ಎಂದಿಗೂ ವ್ಯರ್ಥವಾಗದು: ಚನ್ನವೀರ ಸ್ವಾಮಿಗಳು
ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ: ರಾಜಶ್ರೀ ಸಜ್ಜೇಶ್ವರ