ಗದಗ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಕಳ್ಳರ ಕೈಚಳಕ, ಕಂದಮ್ಮಗಳ ಉಸಿರಿಗೇ ಕುತ್ತು!

KannadaprabhaNewsNetwork |  
Published : Jun 25, 2026, 02:00 AM IST
ಆಸ್ಪತ್ರೆಯ ಎಸಿಗಳ ತಾಮ್ರದ ಪೈಪ್ ಗಳನ್ನು ಕಟ್ ಮಾಡಿಕೊಂಡು ಹೋಗಿರುವುದು.  | Kannada Prabha

ಸಾರಾಂಶ

ಆಸ್ಪತ್ರೆಯ ಅತ್ಯಂತ ಸೂಕ್ಷ್ಮ ಹಾಗೂ ಪ್ರಮುಖ ವಿಭಾಗವಾದ ಆಪರೇಷನ್ ಥಿಯೇಟರ್‌ಗೆ ಅಳವಡಿಸಿದ್ದ ಏರ್ ಕಂಡಿಷನರ್ ವ್ಯವಸ್ಥೆಯ ತಾಮ್ರದ ಪೈಪ್‌ಗಳನ್ನು ಕಳ್ಳರು ಅತ್ಯಂತ ನಿರ್ದಯವಾಗಿ ಕತ್ತರಿಸಿ ಕೊಂಡೊಯ್ದಿದ್ದಾರೆ.

ಶಿವಕುಮಾರ ಕುಷ್ಟಗಿ

ಗದಗ: ನಗರದಲ್ಲಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಯಲ್ಲಿ ಒಂದೇ ತಿಂಗಳಲ್ಲಿ ಎರಡನೇ ಬಾರಿಗೆ ಎಸಿ ಯಂತ್ರಗಳಿಗೆ ಅಳವಡಿಕೆ ಮಾಡಲಾದ ತಾಮ್ರದ ಪೈಪ್‌ಗಳನ್ನು ಕಳ್ಳತನ ಮಾಡಲಾಗಿದೆ. ಇದರಿಂದಾಗಿ ಹೆರಿಗೆ, ಶಸ್ತ್ರಚಿಕಿತ್ಸೆ ನಂತರ ಚಿಕಿತ್ಸೆಗಳಿಗಾಗಿ ಆಸ್ಪತ್ರೆಗೆ ಬರುವ ನೂರಾರು ಗರ್ಭಿಣಿಯರು, ರೋಗಿಗಳು ಮತ್ತು ಹಸುಗೂಸುಗಳು ಉಸಿರುಗಟ್ಟುವ ವಾತಾವರಣದಲ್ಲಿ ನರಕಯಾತನೆ ಅನುಭವಿಸುವಂತಾಗಿದೆ.

ಆಸ್ಪತ್ರೆಯ ಅತ್ಯಂತ ಸೂಕ್ಷ್ಮ ಹಾಗೂ ಪ್ರಮುಖ ವಿಭಾಗವಾದ ಆಪರೇಷನ್ ಥಿಯೇಟರ್‌ಗೆ ಅಳವಡಿಸಿದ್ದ ಏರ್ ಕಂಡಿಷನರ್ ವ್ಯವಸ್ಥೆಯ ತಾಮ್ರದ ಪೈಪ್‌ಗಳನ್ನು ಕಳ್ಳರು ಅತ್ಯಂತ ನಿರ್ದಯವಾಗಿ ಕತ್ತರಿಸಿ ಕೊಂಡೊಯ್ದಿದ್ದಾರೆ. ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ತಂಪು ವಾತಾವರಣವಿಲ್ಲದಿದ್ದರೆ ಸೋಂಕಿನ ಭೀತಿ ಹೆಚ್ಚಿರುತ್ತದೆ. ಹೀಗಾಗಿ, ವೈದ್ಯರು ಅನಿವಾರ್ಯವಾಗಿ ಶಸ್ತ್ರಚಿಕಿತ್ಸೆಗಳನ್ನು ತಾತ್ಕಾಲಿಕವಾಗಿ ಮುಂದೂಡುವಂತಾಗಿದೆ. ತುರ್ತು ಹೆರಿಗೆ ಮತ್ತು ಆಪರೇಷನ್‌ಗಾಗಿ ದಾಖಲಾಗಿದ್ದ ಬಡ ರೋಗಿಗಳನ್ನು ಕೊನೆಯ ಕ್ಷಣದಲ್ಲಿ ಬೇರೆಡೆಗೆ ಕರೆದೊಯ್ಯುವಂತೆ ಸೂಚಿಸುತ್ತಿರುವುದರಿಂದ, ಹೆತ್ತವರು ದಿಕ್ಕುತೋಚದೆ ಕಣ್ಣೀರು ಹಾಕುತ್ತಿದ್ದಾರೆ.

ಉಸಿರಾಟಕ್ಕೆ ತೊಂದರೆ: ಕಳ್ಳರ ಕೈಚಳದಿಂದಾಗಿ ಎಸಿ ಸ್ಥಗಿತಗೊಂಡ ಬೆನ್ನಲ್ಲೇ ಆಸ್ಪತ್ರೆಯ ಪ್ರಮುಖ ಸ್ಥಳಗಳಲ್ಲಿ ಸಮಸ್ಯೆ ಸೃಷ್ಟಿಯಾಗಿದೆ. ತಾಯಿ, ಮಗುವಿನ ವಾರ್ಡ್‌ಗಳಲ್ಲಿ ಮತ್ತು ತೀವ್ರ ನಿಗಾ ಘಟಕದ 2 ಎಸಿಗಳು ತಾಮ್ರದ ಪೈಪ್ ಲೈನ್ ಸ್ಥಗಿತದಿಂದಾಗಿ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕಳ್ಳರು ಮಾಡಿದ ಕೆಲವೇ ಕೆಲವು ರುಪಾಯಿಗಳ ಲಾಭದ ಆಸೆಯ ಕಳ್ಳತನ ಆಸ್ಪತ್ರೆಯ ವ್ಯವಸ್ಥೆಯನ್ನೇ ಅಸ್ತವ್ಯಸ್ತ ಮಾಡುವ ಹಂತಕ್ಕೆ ಬಂದಿದೆ.

ವ್ಯಾಪಕ ಕಳ್ಳತನ: ಒಂದೇ ತಿಂಗಳಲ್ಲಿ 2ನೇ ಬಾರಿ ತಾಮ್ರದ ಪೈಪ್ ಕಳ್ಳತನವಾಗಿದೆ. ಇದರೊಟ್ಟಿಗೆ ಆಸ್ಪತ್ರೆಗೆ ಬರುವ ಗ್ರಾಮೀಣ ಮಹಿಳೆಯರು ಮತ್ತು ಸಾರ್ವಜನಿಕರ ಹತ್ತಾರು ಭಾರೀ ಬೆಲೆಬಾಳುವ ವಸ್ತುಗಳನ್ನು, ಮೊಬೈಲ್‌ಗಳನ್ನು ಕೂಡಾ ಕಳೆದುಕೊಂಡಿದ್ದಾರೆ. ಇದರ ಬಗ್ಗೆ ಸಾರ್ವಜನಿಕರು ದೂರು ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಹಾಗಾಗಿ ಈ ಆಸ್ಪತ್ರೆ ಕಳ್ಳರ ಪಾಲಿಗೆ ಸ್ವರ್ಗವಾಗಿ ಪರಿಣಮಿಸಿದೆ.

ಭದ್ರತಾ ವೈಫಲ್ಯ: ಜಿಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸಿಸಿ ಕ್ಯಾಮೆರಾಗಳು ಕೆಲವೆಡೆ ಇದ್ದೂ ಇಲ್ಲದಂತಿವೆ. ಇವುಗಳ ರಿಪೇರಿ ಮಾಡದೇ ಇರುವುದು ಕೂಡಾ ಕಳ್ಳರಿಗೆ ಅನುಕೂಲವಾಗಿದ್ದು, ಈ ಬಗ್ಗೆ ಗಮನ ನೀಡಬೇಕಾದ ಅಧಿಕಾರಿಗಳು, ಜಿಲ್ಲಾಡಳಿತದ ನಿರ್ಲಕ್ಷ್ಯದಿಂದಾಗಿ ಸಾಕಷ್ಟು ಸಮಸ್ಯೆಯಾಗುತ್ತಿದೆ. ಇದುವರೆಗೂ ಕೇವಲ ಜನಸಾಮಾನ್ಯರ ವಸ್ತುಗಳನ್ನು ಮಾತ್ರ ಕದಿಯುತ್ತಿದ್ದ ಕಳ್ಳರು ಈಗ ಸರ್ಕಾರದ ಆಸ್ತಿಗೆ ಕೈ ಹಚ್ಚಿದ್ದು, ಇನ್ನಾದರೂ ಅಧಿಕಾರಿಗಳು ಗಮನ ನೀಡುತ್ತಾರಾ ಕಾಯ್ದು ನೋಡಬೇಕು.ಗೊಂದಲದ ಗೂಡು: ಜಿಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯು ಈ ಮೊದಲು ಅಂದರೆ, ಗದುಗಿನಲ್ಲಿ ವೈದ್ಯಕೀಯ ಕಾಲೇಜು ಪ್ರಾರಂಭಕ್ಕಿಂತಲೂ ಮೊದಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಡಿಯಲ್ಲಿಯೇ ಇತ್ತು. ಮೆಡಿಕಲ್ ಕಾಲೇಜು ಪ್ರಾರಂಭವಾದ ನಂತರ ಅಲ್ಲಿಗೆ ಹಸ್ತಾಂತರಿಸಲಾಗಿತ್ತು.

ನಂತರ ವೈದ್ಯಕೀಯ ಕಾಲೇಜಿನ ನಿಮಯಗಳ ಪ್ರಕಾರ ಈ ಆಸ್ಪತ್ರೆಯನ್ನು ಕಾಲೇಜು ಆವರಣದಲ್ಲಿ ಸ್ಥಳಾಂತರಿಸಬೇಕಾದ ಅನಿವಾರ್ಯತೆ ಎದುರಾಯಿತು. ಇದಕ್ಕೆ ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತಪಡಿಸಿದ ನಂತರ ಈ ಆಸ್ಪತ್ರೆ ಇಲ್ಲಿಯೇ ಮುಂದುವರಿದಿದೆ. ಹಾಗಾಗಿ ಈಗ ಇದರ ನಿರ್ವಹಣೆಯನ್ನು ಮರಳಿ ಡಿಎಚ್‌ಒ ಅವರಿಗೆ ನೀಡಲಾಗಿದೆ. ಈ ಎಲ್ಲ ಗೊಂದಲಗಳಿಂದಾಗಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಹತ್ತಾರು ರೀತಿಯಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎನ್ನುವುದು ಸಮಸ್ಯೆ ಹಿಂದಿರುವ ಸತ್ಯವಾಗಿದೆ.

ಭದ್ರತಾ ವ್ಯವಸ್ಥೆ: ಆಸ್ಪತ್ರೆಯಂತಹ ಸೂಕ್ಷ್ಮ ಪ್ರದೇಶದಲ್ಲಿ ಕಳ್ಳರು ರಾಜಾರೋಷವಾಗಿ ತಾಮ್ರದ ಪೈಪ್ ಕತ್ತರಿಸಿಕೊಂಡು ಹೋಗುತ್ತಿರುವುದು ಭದ್ರತೆಯ ವೈಫಲ್ಯವನ್ನು ಎತ್ತಿ ತೋರಿಸುತ್ತದೆ. ತಕ್ಷಣವೇ ಆಸ್ಪತ್ರೆ ಆವರಣದಲ್ಲಿ ಸೂಕ್ತ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಬೇಕು. ಎಸಿಗಳನ್ನು ಕೂಡಲೇ ದುರಸ್ತಿ ಮಾಡಿಸಬೇಕು ಎಂದು ಜೆಡಿಎಸ್ ರಾಜ್ಯ ವಕ್ತಾರ ವಿ.ಆರ್. ಗೋವಿಂದಗೌಡ್ರ ತಿಳಿಸಿದರು.

ಸರಿಪಡಿಸುವ ಪ್ರಯತ್ನ: ಈ ಕುರಿತು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ತಾತ್ಕಾಲಿಕವಾಗಿ ವ್ಯವಸ್ಥೆಯನ್ನು ಸರಿಪಡಿಸುವ ಪ್ರಯತ್ನ ಮಾಡಲಾಗಿದೆ. ಸಿಸಿ ಕ್ಯಾಮೆರಾ ಸೇರಿದಂತೆ ಇನ್ನುಳಿದ ಸಂಪೂರ್ಣ ವ್ಯವಸ್ಥೆಯನ್ನು ಸರಿಪಡಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಆಸ್ಪತ್ರೆಯನ್ನು ಇತ್ತೀಚೆಗಷ್ಟೇ ನಮ್ಮ ವ್ಯಾಪ್ತಿಗೆ ನೀಡಿದ್ದಾರೆ ಎಂದು ಡಿಎಚ್ಒ ಡಾ. ಎಸ್.ಎಸ್. ನೀಲಗುಂದ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಾಸೋಹಕ್ಕೆ ನೀಡಿದ ದಾನ ಎಂದಿಗೂ ವ್ಯರ್ಥವಾಗದು: ಚನ್ನವೀರ ಸ್ವಾಮಿಗಳು
ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ: ರಾಜಶ್ರೀ ಸಜ್ಜೇಶ್ವರ