ಜಿಪಂ, ತಾಪಂ ಮೀಸಲಾತಿ ಘೋಷಣೆ: ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಆರಂಭ

KannadaprabhaNewsNetwork |  
Published : Oct 14, 2026, 02:15 AM IST
ಶಿರಹಟ್ಟಿ ತಾಲೂಕು ಪಂಚಾಯಿತಿ ಕಾರ್ಯಾಲಯದ ಚಿತ್ರ. | Kannada Prabha

ಸಾರಾಂಶ

ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳ ಪ್ರಕ್ರಿಯೆಗೆ ಮೀಸಲಾತಿ ಅಧಿಸೂಚನೆ ಪ್ರಕಟಣೆಯೊಂದಿಗೆ ಚುರುಕು ದೊರೆತಿದ್ದು, ತಾಲೂಕಿನಲ್ಲಿ ರಾಜಕೀಯ ವಲಯದಲ್ಲಿ ಚಟುವಟಿಕೆಗಳು ಗರಿಗೆದರಿವೆ.

ರಾಜಕೀಯ ವಲಯದಲ್ಲಿ ಗರಿಗೆದರಿದ ಚಟುವಟಿಕೆಗಳು

ಮಹದೇವಪ್ಪ ಎಂ.ಸ್ವಾಮಿ

ಕನ್ನಡಪ್ರಭ ವಾರ್ತೆ ಶಿರಹಟ್ಟಿ

ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳ ಪ್ರಕ್ರಿಯೆಗೆ ಮೀಸಲಾತಿ ಅಧಿಸೂಚನೆ ಪ್ರಕಟಣೆಯೊಂದಿಗೆ ಚುರುಕು ದೊರೆತಿದ್ದು, ತಾಲೂಕಿನಲ್ಲಿ ರಾಜಕೀಯ ವಲಯದಲ್ಲಿ ಚಟುವಟಿಕೆಗಳು ಗರಿಗೆದರಿವೆ. ಮೀಸಲಾತಿ ಪ್ರಕಟವಾಗುತ್ತಿದ್ದಂತೆಯೇ ಚುನಾವಣೆಯಲ್ಲಿ ಸ್ಪರ್ಧಿಸುವ ಆಕಾಂಕ್ಷಿಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ರಾಜಕೀಯ ಲೆಕ್ಕಾಚಾರ ಆರಂಭಿಸಿದ್ದಾರೆ. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರದ ಅಬ್ಬರ ಕೂಡ ಶುರುವಾಗಿದೆ.

ಜಿಪಂ ಹಾಗೂ ತಾಪಂ ಚುನಾವಣೆಗೆ ಸ್ಪರ್ಧಿಸಲು ಉತ್ಸುಕರಾಗಿರುವ ಆಕಾಂಕ್ಷಿಗಳು ಫೇಸ್‌ಬುಕ್, ವಾಟ್ಸ್ಆ್ಯಪ್, ಇನ್‌ಸ್ಟಾಗ್ರಾಂ ಸೇರಿ ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕ ಜನರನ್ನು ತಲುಪಲು ಮುಂದಾಗಿದ್ದಾರೆ. ಶುಭಾಶಯಗಳ ಸಂದೇಶಗಳು, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಚಿತ್ರಗಳು, ಜನರೊಂದಿಗೆ ಬೆರೆತಿರುವ ಛಾಯಾಚಿತ್ರಗಳು ಹಾಗೂ ಕ್ಷೇತ್ರದ ಅಭಿವೃದ್ಧಿಯ ಕುರಿತ ಸಂದೇಶಗಳನ್ನು ಹಂಚಿಕೊಳ್ಳುವ ಮೂಲಕ ಮತದಾರರ ಗಮನ ಸೆಳೆಯುವ ಪ್ರಯತ್ನ ನಡೆಸುತ್ತಿದ್ದಾರೆ.

ತಾಲೂಕಿನ ೩ ಜಿಪಂ, ೯ ತಾಪಂ ಕ್ಷೇತ್ರಕ್ಕೆ ಮೀಸಲು ಪ್ರಕಟಗೊಂಡಿದ್ದು, ಯಾವ ಕ್ಷೇತ್ರ ಯಾರಿಗೆ ಮೀಸಲಾಗಿದೆ ಎಂಬುದರ ಆಧಾರದ ಮೇಲೆ ಚುನಾವಣೆಗೆ ಸ್ಪರ್ಧಿಸುವವರ ಲೆಕ್ಕಾಚಾರ ಬದಲಾಗುತ್ತಿದೆ. ಸಾಮಾನ್ಯ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಮೀಸಲಾತಿಯೊಂದಿಗೆ ಮಹಿಳಾ ಮೀಸಲಾತಿಯೂ ಅಭ್ಯರ್ಥಿಗಳ ಆಯ್ಕೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಹೀಗಾಗಿ ಕೆಲವರು ತಮ್ಮ ಕ್ಷೇತ್ರದಲ್ಲಿಯೇ ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿದ್ದರೆ, ಮೀಸಲಾತಿ ಬದಲಾವಣೆಯಿಂದ ಅವಕಾಶ ಕೈತಪ್ಪುವ ಸಾಧ್ಯತೆ ಇರುವವರು ಪರ್ಯಾಯ ಕ್ಷೇತ್ರಗಳತ್ತ ಗಮನ ಹರಿಸುವಂತಾಗಿದೆ.

ಸಾಮಾಜಿಕ ಜಾಲತಾಣಗಳೇ ಪ್ರಚಾರದ ವೇದಿಕೆ:

ಹಿಂದಿನ ಚುನಾವಣೆಗಳಲ್ಲಿ ಮನೆಮನೆಗೆ ತೆರಳಿ ಮತದಾರರನ್ನು ಭೇಟಿಯಾಗುವುದು, ಸಭೆ-ಸಮಾರಂಭಗಳಲ್ಲಿ ಭಾಗವಹಿಸುವುದು ಪ್ರಚಾರದ ಪ್ರಮುಖ ವಿಧಾನಗಳಾಗಿದ್ದವು. ಈಗ ಇವುಗಳ ಜೊತೆಗೆ ಸಾಮಾಜಿಕ ಜಾಲತಾಣಗಳೂ ಪ್ರಚಾರದ ಪ್ರಮುಖ ವೇದಿಕೆಗಳಾಗಿವೆ. ಕ್ಷೇತ್ರದ ಜನರಿಗೆ ನಿರಂತರವಾಗಿ ಕಾಣಿಸಿಕೊಳ್ಳುವ ಉದ್ದೇಶದಿಂದ ಆಕಾಂಕ್ಷಿಗಳು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಚಿತ್ರಗಳನ್ನು ಪ್ರಕಟಿಸುತ್ತಿದ್ದಾರೆ. ಶುಭಾಶಯಗಳ ಮೂಲಕವೂ ಜನರೊಂದಿಗೆ ಸಂಪರ್ಕ ಉಳಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ.

ಕೆಲವರು ಕ್ಷೇತ್ರದ ಸಮಸ್ಯೆಗಳು, ರಸ್ತೆ, ಕುಡಿಯುವ ನೀರು, ಚರಂಡಿ, ಸ್ವಚ್ಛತೆ, ಶಿಕ್ಷಣ ಹಾಗೂ ಮೂಲಸೌಕರ್ಯ ಅಭಿವೃದ್ಧಿಯ ವಿಷಯಗಳನ್ನು ಮುಂದಿಟ್ಟುಕೊಂಡು ಜನರ ಗಮನ ಸೆಳೆಯಲು ಮುಂದಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಹಂಚಿಕೆ ಮತ್ತು ಪ್ರತಿಕ್ರಿಯೆಗಳ ಮೂಲಕ ತಮ್ಮ ಜನಪ್ರಿಯತೆಯನ್ನು ಅಳೆಯುವ ಪ್ರಯತ್ನವೂ ನಡೆಯುತ್ತಿದೆ.

ಟಿಕೆಟ್‌ಗಾಗಿ ತೆರೆಮರೆಯಲ್ಲಿ ಕಸರತ್ತು:

ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತಿ ಹೊಂದಿರುವವರು ಸಾರ್ವಜನಿಕ ಸಂಪರ್ಕದ ಜೊತೆಗೆ ರಾಜಕೀಯ ಪಕ್ಷಗಳ ಮುಖಂಡರನ್ನು ಭೇಟಿಯಾಗಿ ಟಿಕೆಟ್‌ಗಾಗಿ ಪ್ರಯತ್ನ ಆರಂಭಿಸಿದ್ದಾರೆ. ಪಕ್ಷದ ಹಿರಿಯ ನಾಯಕರ ಗಮನ ಸೆಳೆಯುವುದು, ಸ್ಥಳೀಯ ಮುಖಂಡರ ಬೆಂಬಲ ಪಡೆಯುವುದು ಹಾಗೂ ಕಾರ್ಯಕರ್ತರನ್ನು ಸಂಘಟಿಸುವುದಕ್ಕೆ ಆದ್ಯತೆ ನೀಡುತ್ತಿದ್ದಾರೆ.

ಒಟ್ಟಿನಲ್ಲಿ, ಜಿಪಂ ಮತ್ತು ತಾಪಂ ಮೀಸಲಾತಿ ಘೋಷಣೆಯೊಂದಿಗೆ ಗ್ರಾಮೀಣ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಆಕಾಂಕ್ಷಿಗಳ ಪ್ರಚಾರ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಆಯ್ಕೆ, ಟಿಕೆಟ್‌ಗಾಗಿ ನಡೆಯುವ ಪೈಪೋಟಿ ಹಾಗೂ ಚುನಾವಣಾ ಸಿದ್ಧತೆಗಳು ಮತ್ತಷ್ಟು ವೇಗ ಪಡೆಯುವ ನಿರೀಕ್ಷೆಯಿದೆ. ಅಧಿಕೃತ ಚುನಾವಣಾ ವೇಳಾಪಟ್ಟಿ ಪ್ರಕಟವಾದ ಬಳಿಕ ಈ ಚಟುವಟಿಕೆಗಳು ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ.ಮೀಸಲಾತಿ ಹಂಚಿಕೆಯಲ್ಲಿ ಅನ್ಯಾಯ

ಮೀಸಲಾತಿ ಹಂಚಿಕೆಯಲ್ಲಿ ಜಿಲ್ಲೆಯ ಮುಖಂಡರು ತಾಲೂಕಿಗೆ ಸಂಪೂರ್ಣ ಅನ್ಯಾಯ ಮಾಡಿದ್ದಾರೆ. ಅವೈಜ್ಞಾನಿಕ, ಅಸಂವಿಧಾನಿಕವಾಗಿ ಮೀಸಲಾತಿ ಘೋಷಣೆಯಾಗಿದೆ. ಇದು ಕ್ಷೇತ್ರದ ಆಕಾಂಕ್ಷಿಗಳಿಗೆ ನಿರಾಸೆ ಮೂಡಿಸಿದೆ. ಇದನ್ನು ತೀವ್ರವಾಗಿ ಖಂಡಿಸುವ ಜತೆಯಲ್ಲಿ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟಕ್ಕೆ ಮುಂದಾಗುವುದಾಗಿ ಬಿಜೆಪಿ ಯುವ ಮುಖಂಡರಾದ ತಿಮ್ಮರಡ್ಡಿ ಮರಡ್ಡಿ, ಮೋಹನ್ ಗುತ್ತೆಮ್ಮನವರ ಎಚ್ಚರಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶ್ರೀ ಕ್ಷೇತ್ರ ದೊಡ್ಡಣಗುಡ್ಡೆ: ವೈಭವದ ಶರನ್ನವರಾತ್ರಿ
ಕಾಫಿ ಬೆಳೆಗಾರ, ಕೃಷಿ ಸುಧಾರಣೆಗೆ ಒತ್ತು: ಡಾ. ಮಂತರ್ ್ಗೌಡ