ಕನ್ನಡಪ್ರಭ ವಾರ್ತೆ ಕುಶಾಲನಗರ
ರೆಡ್‌ಕ್ರಾಸ್ ಸಂಸ್ಥೆ ಮಾನವೀಯ ಮೌಲ್ಯವನ್ನು ಎತ್ತಿ ಹಿಡಿಯುವ ಸಂಘಟನೆಯಾಗಿದೆ ಎಂದು ತಾಲೂಕು ತಹಸೀಲ್ದಾರ್ ಕಿರಣ್ ಜಿ ಗೌರಯ್ಯ ಹೇಳಿದರು.ಕುಶಾಲನಗರ ರೋಟರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ರೆಡ್ ಕ್ರಾಸ್ ಸಂಸ್ಥೆಯ ತಾಲೂಕು ಘಟಕದ ವಾರ್ಷಿಕ ಸಾಮಾನ್ಯ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ನಿಸ್ವಾರ್ಥದಿಂದ ಸೇವೆ ಮಾಡಬೇಕು ಎಂಬ ಮನೋಭಾವ ಇಟ್ಟುಕೊಂಡು ಬರುವವರು ಸಂಸ್ಥೆಯಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸುತ್ತಾರೆ ಎಂದರು.ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಘಟಕದ ರವೀಂದ್ರ ರೈ ಮಾತನಾಡಿ, ಸದಸ್ಯರಲ್ಲಿ ಮಾನವೀಯ ಮೌಲ್ಯ, ನಿಸ್ವಾರ್ಥ ಸೇವೆ, ಸಮಾಜ ಸೇವೆ, ತಾಳ್ಮೆ, ಸಹನೆ ಎಲ್ಲವನ್ನು ಗುಣಗಳನ್ನು ಬೆಳೆಸಲು ರೆಡ್ ಕ್ರಾಸ್ ಸಂಸ್ಥೆ ಸೂಕ್ತ ವೇದಿಕೆಯಾಗಿದೆ. ಆದ್ದರಿಂದ ತಾಲೂಕು ಘಟಕದಲ್ಲಿ ಹೆಚ್ಚಿನ ಜನರಿಗೆ ಸದಸ್ಯತ್ವ ನೀಡುವ ಮೂಲಕ ಸಾಮಾಜಿಕ ಚಟುವಟಿಕೆಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.ರೆಡ್ ಕ್ರಾಸ್ ಸಂಸ್ಥೆಯ ತಾಲೂಕು ಘಟಕದ ಉಪಾಧ್ಯಕ್ಷ ಎಂ.ಡಿ.ರಂಗಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ, ಅಂತರರಾಷ್ಟ್ರೀಯ ರೆಡ್ ಕ್ರಾಸ್ ಸಂಸ್ಥೆಯು ಸ್ವಿಟ್ಜರ್ಲ್ಯಾಂಡ್ ದೇಶದ ಜಿನೀವ ನಗರದಲ್ಲಿದೆ. ಇದೊಂದು ಜನಸೇವಾ ಪರ ಸಂಸ್ಥೆಯಾಗಿದೆ.ಜಿನೀವ ಒಪ್ಪಂದಗಳಲ್ಲಿ ಭಾಗಿಯಾಗಿರುವ ದೇಶಗಳು ಯುದ್ಧ ಕಾಲದಲ್ಲಿ ಈ ಸಂಸ್ಥೆಗೆ ಯುದ್ಧದಿಂದ ಪ್ರಭಾವಿತರಾಗಿರುವವರನ್ನು ಚಿಕಿತ್ಸೆ ನೀಡುವ ಹಕ್ಕನ್ನು ನೀಡಿವೆ. 1864ರಲ್ಲಿ ಹೆನ್ರಿ ಡುನಾಂಟ್ ಅವರಿಂದ ಸ್ಥಾಪಿತವಾದ ಈ ಸಂಸ್ಥೆಗೆ ಮೂರು ಬಾರಿ ನೊಬೆಲ್ ಶಾಂತಿ ಪುರಸ್ಕಾರಗಳು ದೊರಕಿವೆ ಎಂದರು.ತಾಲೂಕು ಘಟಕದ ಅಧ್ಯಕ್ಷ ಎಸ್.ಕೆ.ಸತೀಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೋವಿಡ್ ಹಾಗೂ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ತಾಲೂಕು ರೆಡ್‌ಕ್ರಾಸ್ ಸಂಸ್ಥೆಯು ಉತ್ತಮ ಸೇವಾ ಕಾರ್ಯಗಳನ್ನು ಮಾಡಿದೆ. ಎಲ್ಲಾ ಸದಸ್ಯರು ನೊಂದವರ ಧ್ಚನಿಯಾಗಿ ಕೆಲಸ ಮಾಡಿದ್ದು ಸಮಾಜಕ್ಕೆ ಸೇವೆ ಸಲ್ಲಿಸಿದೆ. ಇನ್ನು ಮುಂದಿನ ದಿನಗಳನ್ನು ಸೇವಾ ಮನೋಭಾವ ಇರುವ ವ್ಯಕ್ತಿಗಳನ್ನು ಸದಸ್ಯರನ್ನಾಗಿ ಮಾಡಿಕೊಂಡು ರೆಡ್ ಕ್ರಾಸ್ ಸಂಸ್ಥೆಯನ್ನು ಸದೃಢವಾಗಿ ಬೆಳೆಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದರು.ತಾಲೂಕು ರೆಡ್ ಕ್ರಾಸ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಪಿ.ಚಂದ್ರಶೇಖರ್ ಅವರು ವಾರ್ಷಿಕ ವರದಿ ಮಂಡಿಸಿದರು. ಖಜಾಂಜಿ ಅಂಜನ್ ಅವರು ಲೆಕ್ಕ ಪತ್ರ ಮಂಡಿಸಿ ಅನುಮೋದನೆ ಪಡೆದರು.ಈ ಸಂದರ್ಭ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಧನಂಜಯ, ಸದಸ್ಯರಾದ ಚಂದ್ರು, ದೇವರಾಜ್ ಇತರರು ಭಾಗವಹಿಸಿದ್ದರು.ತೇಜಸ್ವಿನಿ ಪ್ರಾರ್ಥಿಸಿದರು. ಇದೇ ಸಂದರ್ಭ ಮಹಿಳೆಯರಿಗೆ ಹೊಲಿಗೆ ಯಂತ್ರ ಹಾಗೂ ಅಂಗನವಾಡಿ ಕೇಂದ್ರಗಳಿಗೆ ವಾಟರ್ ಫಿಲ್ಟರ್ ಗಳನ್ನು ಕೊಡುಗೆಯಾಗಿ ನೀಡಿದರು.