ಕನ್ನಡಪ್ರಭ ವಾರ್ತೆ ಶನಿವಾರಸಂತೆ
ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸುವುದಷ್ಟೆ ಮುಖ್ಯವಾಗುವುದಿಲ್ಲ. ಕೌಶಲ್ಯ ಬೆಳವಣಿಗೆಯು ಅಷ್ಟೇ ಮುಖ್ಯವಾಗಿರುತ್ತದೆ ಎಂದು ಹಾಸನ ಆಕಾಶವಾಣಿಯ ನಿವೃತ್ತ ಆಡಳಿತಾಧಿಕಾರಿ ಎಂ.ಶಿವಕುಮಾರ್ ಅಭಿಪ್ರಾಯ ಪಟ್ಟರು.ಅವರು ಶನಿವಾರಸಂತೆ ಸುಪ್ರಜ ಗುರುಕುಲ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಗುರುಕುಲ ಸಂಕ್ರಮಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇಂದು ಗ್ರಾಮೀಣ ಭಾಗದಲ್ಲೂ ಆಂಗ್ಲ ಮಾಧ್ಯಮ ಶಾಲೆಗಳಿದ್ದು ವಿದ್ಯಾರ್ಥಿಗಳು ಆಂಗ್ಲ ಭಾಷೆಯನ್ನು ಕಲಿಯುತ್ತಿದ್ದಾರೆ. ಇದರ ಜೊತೆಯಲ್ಲೂ ಮಾತೃ ಭಾಷೆಯಾದ ಕನ್ನಡ ಭಾಷೆಗೂ ಹೆಚ್ಚಿನ ಆದ್ಯತೆ ನೀಡಬೇಕು. ಕನ್ನಡ ದೇಶದ ಹೆಮ್ಮೆಯ ಭಾಷೆಯಾಗಿದ್ದು ಈ ಕಾರಣದಿಂದಲೇ ಕರ್ನಾಟಕಕ್ಕೆ 8 ಮಂದಿಗೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟಿದೆ ಎಂದರು. ಇಂದು ನಮ್ಮಲ್ಲಿ ಕನ್ನಡದಲ್ಲಿ ಶಿಕ್ಷಣ ಪಡೆದ ಅನೇಕ ಮಂದಿ ದೊಡ್ಡದೊಡ್ಡ ಸಾಧಕರಿದ್ದಾರೆ. ಈ ನಿಟ್ಟಿನಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕು. ಇಂದು ಎಲ್ಲಾರಲ್ಲೂ ಉತ್ತಮ ಅಂಕಗಳಿಸಿದರೆ ಮಾತ್ರ ಉದ್ಯೋಗಸಿಗುತ್ತದೆ ಎಂಬ ಮನೋಭಾವನೆ ಇದೆ. ಆದರೆ ಉತ್ತಮ ಅಂಕವೊಂದಿದ್ದರೆ ಸಾಲದು ಕೌಶಲ್ಯ ಕ್ರಿಯಾಶೀಲತೆಯೂ ಇರಬೇಕಾಗುತ್ತದೆ ಎಂದರು.ಹಾಸನ ಜಿಲ್ಲಾ ಕಸಾಪ ಕಾರ್ಯದರ್ಶಿ ಜಾವಗಲ್ ಪ್ರಸನ್ನಕುಮಾರ್ ಮಾತನಾಡಿ, ಪೋಷಕರು ತಮ್ಮ ಮಕ್ಕಳಿಗೆ ಕೇವಲ ವಿದ್ಯಾಭ್ಯಾಸ ಕೊಡಿಸಿದರೆ ಸಾಕಾಗುವುದಿಲ್ಲ. ಇದರ ಜೊತೆಯಲ್ಲಿ ಸಂಸ್ಕಾರವನ್ನು ಕಲಿಸಿಕೊಡಬೇಕು. ವಿದ್ಯಾವಂತರಲ್ಲಿ ಸಂಸ್ಕಾರ ಇದ್ದರೆ ಮಾತ್ರ ಸಂಸ್ಕಾರ ಸಮಾಜ ನಿರ್ಮಾಣವಾಗಲು ಸಾಧ್ಯವಾಗುತ್ತದೆ ಎಂದರು. ವಿದ್ಯಾಭ್ಯಾಸ ಸಂದರ್ಭ ವಿದ್ಯಾರ್ಥಿಗಳು ಕನ್ನಡ ಭಾಷೆಗೆ ಹೆಚ್ಚಿನ ಒತ್ತುಕೊಡಬೇಕು. ಇದರಿಂದ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಬೆಳವಣಿಗೆಯಾಗುತ್ತದೆ ಎಂದು ಸಲಹೆ ನೀಡಿದರು.ವಿದ್ಯಾಸಂಸ್ಥೆ ಪ್ರಾಂಶುಪಾಲೆ ಡಿ. ಸುಜಲಾದೇವಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ವಿದ್ಯಾಸಂಸ್ಥೆ ಕಾರ್ಯದರ್ಶಿ ಸುಮನ ರಾಣಿ ಹಾಜರಿದ್ದರು. ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ರಾಮಾಯಣದಲ್ಲಿ ಬರುವ ಸೀತಾಪಹರಣ ದಿಂದ ರಾವಣನನ್ನು ಶ್ರೀ ರಾಮ ಸಂಹಾರ ಮಾಡುವ ಕತಾ ಹಂದರವನ್ನು ವಿದ್ಯಾರ್ಥಿಗಳು ನೃತ್ಯರೋಪಕದಲ್ಲಿ ಪ್ರದರ್ಶಿಸುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.