ಹೊಗೆಸೊಪ್ಪು, ತೋಟಗಾರಿಕೆ, ಹೈನುಗಾರಿಕೆಯಿಂದ ವಾರ್ಷಿಕ 23 ಲಕ್ಷ ರು. ಆದಾಯ

KannadaprabhaNewsNetwork | Published : Apr 13, 2025 2:02 AM

ಸಾರಾಂಶ

ದಿನೇಶ್‌ ಅವರು ಒ.ಡಿ.ಪಿ. ಸಂಸ್ಥೆಯಲ್ಲಿ ಮಣ್ಣು ಮತ್ತು ನೀರಿನ ಪರೀಕ್ಷೆ ಮಾಡಿಸಿದ್ದು, ಮಣ್ಣು ಪರೀಕ್ಷೆಯ ಆಧಾರದ ಮೇಲೆ ರಸಗೊಬ್ಬರದ ಬಳಕೆ ಮಾಡುತ್ತಿದ್ದಾರೆ., ವಿಸ್ತರಣಾ ಶಿಕ್ಷಣ ಘಟಕ, ನಾಗನಹಳ್ಳಿಯಲ್ಲಿ ಸಾವಯವ ಕೃಷಿ ಬಗ್ಗೆ 5 ದಿನಗಳ ತರಬೇತಿ ಪಡೆದು ತಮ್ಮ ಭೂಮಿಯ ಫಲವತ್ತತೆಯನ್ನು ಕಾಪಾಡಲು ಹಸಿರೆಲೆ ಗೊಬ್ಬರ ಹಾಗು ಜೈವಿಕ ಗೊಬ್ಬರ, ಜೀವಾಮೃತ, ಪಂಚಗವ್ಯ, ಕಾಂಪೋಸ್ಟ್‌ ಬಳಕೆ ಮಾಡುತ್ತಿದ್ದಾರೆ.

ಅಂಶಿ ಪ್ರಸನ್ನಕುಮಾರ್‌

ಕನ್ನಡಪ್ರಭ ವಾರ್ತೆ ಮೈಸೂರು

ಪಿರಿಯಾಪಟ್ಟಣ ತಾಲೂಕು ತಾತನಹಳ್ಳಿಯ ನಂಜುಂಡೇಗೌಡರ ಪುತ್ರ ಟಿ.ಎನ್‌. ದಿನೇಶ್‌ ಅವರಿಗೆ 13 ಎಕರೆ ಮಳೆಯಾಶ್ರಿತ ಹಾಗೂ ನೀರಾವರಿ ಜಮೀನಿನಿದೆ.

ಅಲ್ಲಿ ಭತ್ತ, ರಾಗಿ, ಮುಸುಕಿನ ಜೋಳ, ಹೊಗೆಸೊಪ್ಪು, ತೋಟಗಾರಿಕಾ ಬೆಳೆಗಳಾದ ಬಾಳೆ, ತೆಂಗು, ಅಡಿಕೆ, ಮಾವು, ಕಲ್ಲಂಗಡಿ, ಶುಂಠಿ, ನವಿಲುಕೋಸು, ಮೆಣಸಿನಕಾಯಿ ಬೆಳೆಯುತ್ತಿದ್ದಾರೆ. ತೋಟಗಾರಿಕಾ ಬೆಳೆಗಳಾದ ತೆಂಗು, ಅಡಿಕೆ, ಬಾಳೆ, ಮೆಣಸಿನಕಾಯಿ, ಟೊಮೆಟೋ, ಬೀನ್ಸ್‌, ಪಪ್ಪಾಯಿಯನ್ನು ಸಹ ಬೆಳೆಯುತ್ತಿದ್ದಾರೆ. ತೋಟಗಾರಿಕಾ ಬೆಳೆಗಳಿಂದಲೇ 2023-24 ನೇ ಸಾಲಿನಲ್ಲಿ ರು. 8 ಲಕ್ಷ ನಿವ್ವಳ ಆದಾಯ ಪಡೆದಿದ್ದಾರೆ.

ಸಮಗ್ರ ಕೃಷಿ ಪದ್ಧತಿಯಡಿ ಕೃಷಿ, ಅರಣ್ಯ ಬೆಳೆಗಳಾದ ಹೆಬ್ಬೇವು, ಸಿಲ್ವರ್ ಮರಗಳು, ಕಹಿಬೇವು, ಮಹಾಗನಿ, ತೇಗ, ಬಿದಿರು ಮರಗಳನ್ನು ಬೆಳೆಸಿದ್ದಾರೆ. ಬೆಳೆಗಳಿಗೆ ಹನಿನೀರಾವರಿ ಮೂಲಕ ನೀರಾವರಿ ವ್ಯವಸ್ಥೆ ಕಲ್ಪಿಸಿ, ನೀರಿನ ಸದ್ಬಳಕೆ ಮಾಡುತ್ತಿದ್ದಾರೆ. ಕೃಷಿಯ ಜೊತೆಗೆ ಉಪಕಸುಬುಗಳಾದ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದು 4 ಎಚ್.ಎಫ್. ಹಾಗೂ 3 ಜರ್ಸಿ ಹಸುಗಳಿಂದ ವಾರ್ಷಿಕ ರು 1.20 ಲಕ್ಷ ನಿವ್ವಳ ಆದಾಯ ಪಡೆಯುತ್ತಿದ್ದಾರೆ. ರಾಸುಗಳಿಗೆ ನೇಪಿಯಾರ್, ಕೆಂಪುಕಡ್ಡಿ ಹುಲ್ಲು, ಕುದುರೆ ಮಸಾಲೆ, ಗಿನಿ ಹುಲ್ಲು, ಮೇವಿನ ಅಲಸಂದೆ ಹಾಗೂ ಮೆಕ್ಕೆಜೋಳವನ್ನು ತಮ್ಮ ಜಮೀನಿನಲ್ಲಿಯೇ ಬೆಳೆಯುತ್ತಾರೆ.

ಬಂಡೂರು ಕುರಿಗಳು, ನಾಟಿ ಮೇಕೆ, ನಾಟಿ ಕೋಳಿ, ಗಿರಿರಾಜ ಕೋಳಿ ಹಾಗೂ ಜೇನು ಸಾಕಾಣಿಕೆ ಮಾಡಿ ಆದಾಯ ಹೆಚ್ಚಿಸಿಕೊಳ್ಳುವಲ್ಲಿ ಗಮನಹರಿಸಿದ್ದಾರೆ. ಕೃಷಿ ಹೊಂಡದಲ್ಲಿ 2000 ರೋಹು ಮೀನುಗಳು, 1000 ಕಾಟ್ಲ ಮೀನುಗಳನ್ನು ಸಾಕುತ್ತಿದ್ದು, ಟೆಂಡರ್ ಮೂಲಕ ಮೀನುಗಾರಿಕೆ ಇಲಾಖೆಗೆ ಮಾರಾಟ ಮಾಡುತ್ತಾರೆ. ವಿಸ್ತರಣಾ ಶಿಕ್ಷಣ ಘಟಕ, ನಾಗನಹಳ್ಳಿಯಲ್ಲಿ ಅಣಬೆ ಕೃಷಿ ಬಗ್ಗೆ ತರಬೇತಿ ಪಡೆದು ಅಣಬೆ ಬೇಸಾಯ ಮಾಡಿ ಸ್ಥಳೀಯ ಮಾರುಕಟ್ಟೆಗೆ ಸರಬರಾಜು ಮಾಡುತ್ತಾರೆ. ಶ್ರೀಯುತರು ತಮ್ಮ ಒಟ್ಟಾರೆ ಸಾಗುವಳಿ ಭೂಮಿಯಿಂದ ವಾರ್ಷಿಕ ಒಟ್ಟು ರು. 23 ಲಕ್ಷಗಳ ನಿವ್ವಳ ಆದಾಯ ಪಡೆಯುತ್ತಿದ್ದು, ಸಂತೃಪ್ತ ಜೀವನ ನಡೆಸುತ್ತಿದ್ದಾರೆ.

ದಿನೇಶ್‌ ಅವರು ಒ.ಡಿ.ಪಿ. ಸಂಸ್ಥೆಯಲ್ಲಿ ಮಣ್ಣು ಮತ್ತು ನೀರಿನ ಪರೀಕ್ಷೆ ಮಾಡಿಸಿದ್ದು, ಮಣ್ಣು ಪರೀಕ್ಷೆಯ ಆಧಾರದ ಮೇಲೆ ರಸಗೊಬ್ಬರದ ಬಳಕೆ ಮಾಡುತ್ತಿದ್ದಾರೆ., ವಿಸ್ತರಣಾ ಶಿಕ್ಷಣ ಘಟಕ, ನಾಗನಹಳ್ಳಿಯಲ್ಲಿ ಸಾವಯವ ಕೃಷಿ ಬಗ್ಗೆ 5 ದಿನಗಳ ತರಬೇತಿ ಪಡೆದು ತಮ್ಮ ಭೂಮಿಯ ಫಲವತ್ತತೆಯನ್ನು ಕಾಪಾಡಲು ಹಸಿರೆಲೆ ಗೊಬ್ಬರ ಹಾಗು ಜೈವಿಕ ಗೊಬ್ಬರ, ಜೀವಾಮೃತ, ಪಂಚಗವ್ಯ, ಕಾಂಪೋಸ್ಟ್‌ ಬಳಕೆ ಮಾಡುತ್ತಿದ್ದಾರೆ. ಬೆಳೆಗಳಲ್ಲಿ ಸಮಗ್ರ ರೋಗ ಮತ್ತು ಕೀಟಗಳ ನಿರ್ವಹಣೆಯಲ್ಲಿ ಬೀಜೋಪಚಾರದ ಉಪಯೋಗಗಳನ್ನು ಅರಿತು ಟ್ರೈಕೋಡರ್ಮ, ಬೀಜಾಮೃತ ಬಳಸಿ ಬೀಜೋಪಚಾರ ಮಾಡುತ್ತಿದ್ದಾರೆ. ವಿಸ್ತರಣಾ ಶಿಕ್ಷಣ ಘಟಕ ನಾಗನಹಳ್ಳಿ ವತಿಯಿಂದ ಕೈಗೊಳ್ಳುತ್ತಿರುವ ಮುಂಚೂಣಿ ಪ್ರಾಾತ್ಯಕ್ಷಿಕೆಗಳಲ್ಲಿ ಭಾಗವಹಿಸಿ, ತಾಂತ್ರಿಕತೆಗಳನ್ನು ಅಳವಡಿಸಿಕೊಂಡು ಇತರೆ ರೈತರಿಗೆ ಅರಿವು ಮೂಡಿಸುತ್ತಿದ್ದಾರೆ. ಕೃಷಿ ಇಲಾಖೆ, ತೋಟಗಾರಿಕೆ, ಹೈನುಗಾರಿಕೆ ಹಾಗೂ ರೇಷ್ಮೆ ಇಲಾಖೆಗಳಲ್ಲಿ ಜರುಗಲಿರುವ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಇಲ್ಲಿ ಪಡೆದ ತಾಂತ್ರಿಕ ಮಾಹಿತಿಗಳನ್ನು ತಾವು ಅಳವಡಿಸಿಕೊಳ್ಳುವುದರ ಜೊತೆಗೆ ಇತರೆ ರೈತರಿಗೆ ಮಾದರಿ ಯುವ ರೈತರ ಎನಿಸಿಕೊಂಡಿದ್ದಾರೆ. 2024ನೇ ಸಾಲಿನಲ್ಲಿ ಪಿರಿಯಾಪಟ್ಟಣ ತಾಲೂಕು ಮಟ್ಟದ ಯುವರೈತ ಪ್ರಶಸ್ತಿ ಪಡೆದಿದ್ದಾರೆ.

ಸಂಪರ್ಕ ವಿಳಾಸಃ ಟಿ.ಎನ್‌. ದಿನೇಶ್, ಬಿನ್ ನಂಜುಂಡೇಗೌಡ

ತಾತನಹಳ್ಳಿ,

ಕಸಬಾ ಹೋಬಳಿ,

ಪಿರಿಯಾಪಟ್ಟಣ ತಾಲೂಕು,

ಮೈಸೂರು ಜಿಲ್ಲೆ

ಮೊ. 96633 41244

ನಮಗೆ ಹೊಗೆಸೊಪ್ಪು ಪ್ರಮುಖ ಬೆಳೆ. ಹತ್ತು ಎಕರೆಯಲ್ಲಿ ಬೆಳೆಯುತ್ತೇವೆ. ಇದೊಂದರಿಂದಲೇ ವಾರ್ಷಿಕ 14-15 ಲಕ್ಷ ರು. ಸಿಗುತ್ತದೆ. ಶುಂಠಿ ಬೆಲೆ ನಂಬಲಾಗದು. ಕೆಲವೊಮ್ಮೆ ಲಾಭ ಬರುತ್ತದೆ. ಮತ್ತೊಮ್ಮೆ ನಷ್ಟವಾಗುತ್ತದೆ. ಹೈನುಗಾರಿಕೆಯಿಂದ ಮಾಸಿಕ 26 ಸಾವಿರ ರು. ಸಿಗುತ್ತದೆ. ತೋಟಗಾರಿಕೆ ಬೆಳೆಗಳಿಂದಲೂ ಆದಾಯವಿದೆ. ನಮ್ಮರಲ್ಲೂ ಆಳುಗಳ ಸಮಸ್ಯೆ ಇಲ್ಲ. ಹೆಣ್ಣಾಳಿಗೆ 300, ಗಂಡಾಳಿಗೆ 500 ರು. ಕೂಲಿ ಕೊಡಬೇಕು.

-ಟಿ.ಎನ್‌. ದಿನೇಶ್‌, ತಾತನಹಳ್ಳಿ

Share this article