23 ರಂದು ಭಗವತಿ ದೇವಿಯ ವಾರ್ಷಿಕ ಪೊಂಗಾಲ ಉತ್ಸವ

KannadaprabhaNewsNetwork | Published : May 21, 2024 12:30 AM

ಸಾರಾಂಶ

ನಗರದ ಶ್ರೀ ಮುತ್ತಪ್ಪ ದೇವಾಲಯದಲ್ಲಿರುವ ಭಗವತಿ ದೇವಿಯ ವಾರ್ಷಿಕ ಪೊಂಗಾಲ ಉತ್ಸವ ಮೇ 23ರಂದು ನಡೆಯಲಿದೆ ಎಂದು ಮುತ್ತಪ್ಪ ಮಹಿಳಾ ವೇದಿಕೆಯ ಅಧ್ಯಕ್ಷೆ ಶಾರದ ರಾಮನ್‌ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮಡಿಕೇರಿ: ನಗರದ ಶ್ರೀ ಮುತ್ತಪ್ಪ ದೇವಾಲಯದಲ್ಲಿರುವ ಭಗವತಿ ದೇವಿಯ ವಾರ್ಷಿಕ ಪೊಂಗಾಲ ಉತ್ಸವವು ಮೇ 23 ರಂದು ನಡೆಯಲಿದೆ ಎಂದು ಶ್ರೀ ಮುತ್ತಪ್ಪ ಮಹಿಳಾ ವೇದಿಕೆಯ ಅಧ್ಯಕ್ಷೆ ಶಾರದ ರಾಮನ್ ತಿಳಿಸಿದ್ದಾರೆ.

ನಗರದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಕೊಡಗಿನ ಪುರಾತನ ದೇವಾಲಯಗಳಲ್ಲೊಂದಾದ ಮಡಿಕೇರಿಯ ಶ್ರೀ ಮುತ್ತಪ್ಪ ದೇವಾಲಯದ ಆವರಣದಲ್ಲಿರುವ ಶ್ರೀ ಪಾರ್ವತಿ, ಸರಸ್ವತಿ, ಮಹಾಲಕ್ಷ್ಮಿ ಸಂಕಲ್ಪದಲ್ಲಿರುವ ಶ್ರೀ ಭಗವತಿ ದೇವಿಗೆ ಪೊಂಗಾಲ ಸೇವೆಯನ್ನು ಬೆಳಗ್ಗೆ 8.30ಕ್ಕೆ ನಡೆಸಲು ಉದ್ದೇಶಿಸಲಾಗಿದ್ದು, ಈ ಬಾರಿ ವಿಜೃಂಭಣೆಯಿಂದ ಉತ್ಸವ ನಡೆಸಲಾಗುವುದು. ಇದು ಕೇವಲ ಮಹಿಳೆಯರು ಮಾತ್ರ ನಡೆಸುವ ಪುಣ್ಯ ಕಾರ್ಯವಾಗಿದ್ದು, ಪೊಂಗಾಲ ಸಮರ್ಪಣೆಯಿಂದ ಮನೆಯಲ್ಲಿ ಆರೋಗ್ಯ ಶಾಂತಿ, ನೆಮ್ಮದಿ ನೆಲೆಸುವ ನಂಬಿಕೆ ಇದೆ ಎಂದರು.

ಇಟ್ಟಿಗೆ ಅಥವಾ ಕಲ್ಲುಗಳನ್ನು ಜೋಡಿಸಿ ಒಲೆಯನ್ನು ಹಾಕಿ ಸೌದೆಗಳನ್ನು ಜೋಡಿಸಿ ಸಿದ್ಧಪಡಿಸಿದ ನಂತರ ಅರ್ಚಕರು ನೀಡಿದ ಕರ್ಪೂರದಾರತಿಯಿಂದ ಒಲೆ ಉರಿಸಿ, ಹೊಸ ಮಡಿಕೆಯಲ್ಲಿ ನೀರು ತುಂಬಿಸಿ, ಪೊಂಗಾಲ ತಯಾರಿಕೆ ಮಾಡಲಾಗುತ್ತದೆ.

ಪೊಂಗಾಲ ಸೇವೆ ಮಾಡಲಿಚ್ಚಿಸುವ ಮಹಿಳೆಯರು ಮೂರು ದಿನ ಶುದ್ಧಿಯಿಂದ ವ್ರತ ಮಾಡಬೇಕು. ಪೊಂಗಾಲ ತಯಾರಿಕೆಗಾಗಿ ಬೇಕಾಗುವ ಸಾಮಾಗ್ರಿಗಳಾದ ಹೊಸ ಮಡಿಕೆ, ಸೌದೆ, ಅಕ್ಕಿ, ಬೆಲ್ಲ, ಕಾಯಿ, ತುಪ್ಪ, ಏಲಕ್ಕಿ, ದ್ರಾಕ್ಷಿ, ಗೋಡಂಬಿ ಮುಂತಾದವುಗಳನ್ನು ದೇವಸ್ಥಾನದಿಂದಲೇ ಒದಗಿಸಿಕೊಡಲಾಗುವುದು. 300 ರು. ನೀಡಿ ಮುಂಗಡ ರಶೀತಿ ಪಡೆದು ಹಸರು ನೋಂದಾಯಿಸಿಕೊಳ್ಳಬೇಕು ಎಂದು ಮಾಹಿತಿ ನೀಡಿದರು.

ಹೆಚ್ಚಿನ ಮಾಹಿತಿಗಾಗಿ 9481488602, 9480427615, 7760919536, 8861290731 ಸಂಪರ್ಕಿಸುವಂತೆ ಶಾರದರಾಮನ್ ತಿಳಿಸಿದ್ದಾರೆ.

ವೇದಿಕೆಯ ಉಪಾಧ್ಯಕ್ಷೆ ದೀಪಾ ಕಾವೇರಪ್ಪ, ಕಾರ್ಯದರ್ಶಿ ಗೀತಾ ವಿಜಯನ್, ಸಲಹೆಗಾರರಾದ ವಿಶಾಲಕ್ಷಿ ಸುಕುಮಾರ್, ಸದಸ್ಯರಾದ ಮಲಕ್ಷ್ಮಣಿ ಸುದ್ದಿಗೋಷ್ಠಿಯಲ್ಲಿದ್ದರು.

Share this article