ಕನ್ನಡಪ್ರಭ ವಾರ್ತೆ ನಾಪೋಕ್ಲು
ಇಲ್ಲಿ ವರ್ಷಕ್ಕೆರಡು ಬಾರಿ ವಿಶಿಷ್ಟ ಹಬ್ಬ ಜರುಗುತ್ತವೆ. ಡಿಸೆಂಬರ್ ತಿಂಗಳಲ್ಲಿ ಮೊದಲನೇ ಹಬ್ಬವಾದರೆ, ಎರಡನೇ ಮುಖ್ಯ ಹಬ್ಬ ಮೇ ತಿಂಗಳಲ್ಲಿ ನಡೆಯುತ್ತವೆ. ಎರಡೂ ಹಬ್ಬಗಳು ಅತ್ಯಂತ ಆಕರ್ಷಣೀಯವಾಗಿರುತ್ತದೆ.
ಎತ್ತು ಹೇರಾಟ, ದೀಪಾರಾಧನೆ, ಅಜ್ಜಪ್ಪ ಹಾಗೂ ವಿಷ್ಣುಮೂರ್ತಿ ಕೋಲ, ಮುಂತಾದ ವೈಶಿಷ್ಟ್ಯಗಳೊಂದಿಗೆ ಶ್ರೀ ಮಕ್ಕಿ ಶಾಸ್ತಾವು ಹಬ್ಬ ಜರುಗುತ್ತದೆ. ಡಿಸೆಂಬರ್ ತಿಂಗಳ ಹಬ್ಬದಲ್ಲಿ ಮೊದಲ ದಿನ ಬೆಳಗ್ಗೆ ದೇವರ ನಾಯಿ ಹಾಕುವ ಕಾರ್ಯಕ್ರಮ ಜರುಗಿದರೆ ರಾತ್ರಿ ದೀಪಾರಾಧನೆ (ಅಂದಿಬೊಳಕ್) ನಡೆಯುತ್ತದೆ. ಮರುದಿನ ಪೂರ್ವಾಹ್ನ ಅಜ್ಜಪ್ಪ ಕೋಲ ಹಾಗೂ ಚಾಮುಂಡಿ ಕೋಲ, ಮೇಲೇರಿ (ಕೆಂಡಸೇವೆ )ನಡೆಯುತ್ತವೆ.ಶ್ರೀ ಮಕ್ಕಿಶಾಸ್ತಾವು ಉತ್ಸವ ಎರಡು ದಿನದ ಕಾರ್ಯಕ್ರಮ. ಶುಕ್ರವಾರ ರಾತ್ರಿ ದೀಪಾರಾಧನೆ ಜರುಗಿತು.ಅದಕ್ಕಿಂತ ಮುನ್ನಾ ದಿನ ಕೊಟ್ಟಿಪಾಡುವೊ ಕಾರ್ಯಕ್ರಮ ಜರುಗಿತು.
ಅಜ್ಜಪ್ಪ ಕೋಲ ಹಾಗೂ ವಿಷ್ಣುಮೂರ್ತಿ ಕೋಲಗಳು ಶನಿವಾರ ಜರುಗಲಿವೆ. ಮಧ್ಯಾಹ್ನ ವಿಷ್ಣುಮೂರ್ತಿ ಕೋಲದಲ್ಲಿ ಹರಡಿರುವ ಕೆಂಡದ ರಾಶಿಯ ಮೇಲೆ ಬೀಳುವುದು ಭಕ್ತಾದಿಗಳಲ್ಲಿ ರೋಮಾಂಚನ ಉಂಟುಮಾಡುತ್ತವೆ.ಹಿಂದಿನಿಂದ ಪರಿಪಾಲಿಸಿಕೊಂಡು ಬಂದಿರುವ ಮಕ್ಕಿ ದೇವಾಲಯದ ಹಬ್ಬದ ಆಚರಣೆಗಳು ಹಲವು. ಈ ತಾಣ ಸುತ್ತಮುತ್ತಲಿನವರಿಗೆ ಒಂದು ಪುನೀತ ಕ್ಷೇತ್ರ. ಮಕ್ಕಿಯಲ್ಲಿ ಹರಸಿಕೊಂಡವರ ಬಯಕೆಗಳು ಈಡೇರುತ್ತವೆ ಹಾಗೂ ಸಂಕಷ್ಟಗಳು ದೂರವಾಗುತ್ತದೆ ಎಂಬ ನಂಬಿಕೆಯಿದೆ. ಅಂತೆಯೇ ನಾಪೋಕ್ಲುವಿನ ಮಕ್ಕಿ ದೇವಾಲಯ ಭಕ್ತಿ ತಾಣವಾಗಿ ಪ್ರಸಿದ್ದಿ ಹೊಂದಿದೆ.