ಅಣ್ಣೂರು ಕೇರಿ ಶಾಲೆ ಬಳಿ ದುರ್ವಾಸನೆ ತಪ್ಪೋದು ಯಾವಾಗ?

KannadaprabhaNewsNetwork | Published : Jul 18, 2024 1:40 AM

ಸಾರಾಂಶ

ತಾಲೂಕಿನ ಅಣ್ಣೂರು ಕೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿಂಬದಿಯ ಜಮೀನಿನಲ್ಲಿ ಕೊಳಚೆ ನೀರು ನಿಂತು ಗಬ್ಬೆದ್ದು ನಾರುತ್ತಿದ್ದು, ಶಾಲಾ ಮಕ್ಕಳು, ಶಿಕ್ಷಕರಿಗೆ ದುರ್ವಾಸನೆ ಬೀರುತ್ತಿದೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ತಾಲೂಕಿನ ಅಣ್ಣೂರು ಕೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿಂಬದಿಯ ಜಮೀನಿನಲ್ಲಿ ಕೊಳಚೆ ನೀರು ನಿಂತು ಗಬ್ಬೆದ್ದು ನಾರುತ್ತಿದ್ದು, ಶಾಲಾ ಮಕ್ಕಳು, ಶಿಕ್ಷಕರಿಗೆ ದುರ್ವಾಸನೆ ಬೀರುತ್ತಿದೆ.

ಅಣ್ಣೂರು ಕೇರಿ ಗ್ರಾಪಂ ಕೇಂದ್ರ ಸ್ಥಾನವಾಗಿದೆ. ಆದರೂ ಶಾಲೆಯ ಬಳಿಯ ಕೊಳಚೆ ನೀರು ನಿಂತು ವಾಸನೆ ಬೀರುತ್ತಿದ್ದರೂ ಗ್ರಾಪಂ ಸ್ವಚ್ಛ ಮಾಡಿಸಲು ಆಗದಷ್ಟು ಇಲ್ಲಿನ ಗ್ರಾಮ ಪಂಚಾಯ್ತಿಯೆ ಗಬ್ಬೆದ್ದು ಹೋಗಿದೆಯಾ ಎಂಬ ಪ್ರಶ್ನೆ ಸಹಜವಾಗಿಯೇ ಎದ್ದಿದೆ. ಶಾಲೆಯ ಹಿಂಬದಿ ಕಸ, ಕಡ್ಡಿಯ ಜೊತೆಗೆ ಕೊಳಚೆ ನೀರು ನಿಂತ ಕಾರಣ ಗಿಡ ಗಂಟಿಗಳು ಬೆಳೆದು ನಿಂತಿವೆ. ಮಳೆ ಬೇರೆ ಕಳೆದ ಆರೇಳು ದಿನಗಳಿಂದ ಬಿಟ್ಟು ಬಿಟ್ಟು ಸುರಿಯುತ್ತಿರುವ ಕಾರಣ ಶಾಲೆಯ ಹಿಂಬದಿಯಿಂದ ದುರ್ವಾಸನೆ ಶಾಲೆಗೆ ಬಡಿಯುತ್ತಿದೆ.‌ ಶಾಲೆಯ ಹಿಂಬದಿ ಕೊಳಚೆ ನೀರು ನಿಂತು ಶಾಲೆಯ ಮಕ್ಕಳು ಹಾಗು ಶಿಕ್ಷಕರಿಗೆ ತೊಂದರೆಯಾಗುತ್ತಿದೆ ಎಂದು ಅಣ್ಣೂರು ಕೇರಿ ಗ್ರಾಪಂಗೆ ದೂರು ನೀಡಿ ಒಂದೂವರೆ ತಿಂಗಳು ಕಳೆದರೂ ವಾಸನೆ ನಿಲ್ಲಿಸಲು ಗ್ರಾಪಂನಿಂದ ಆಗಿಲ್ಲ ಎಂದು ಆರೋಪಿಸಿದ್ದಾರೆ.

ರಾಜ್ಯದಲ್ಲಿ ಡೆಂಘೀ ಜ್ವರ ಉಲ್ಬಣಗೊಳ್ಳುತ್ತಿದೆ. ಇಂಥ ಸಮಯದಲ್ಲಾದರೂ ಗ್ರಾಪಂ ನಿದ್ದೆಯಿಂದೆದ್ದು ಗ್ರಾಮದಲ್ಲಿ ಸ್ವಚ್ಛತೆಗೆ ಮುಂದಾಗಬೇಕಿತ್ತು. ಶಾಲೆಯ ಹಿಂಬದಿ ಜಾಗ ಕೊಳಚೆ ಪ್ರದೇಶದಂತಾಗಿದ್ದು, ಸೊಳ್ಳೆಗಳ ಉತ್ಪತ್ತಿಯ ತಾಣವಾಗಿದೆ. ಕೂಡಲೇ ಗ್ರಾಪಂ ಶಾಲೆಯ ಹಿಂಬದಿಯ ವಾಸನೆಗೆ ಮುಕ್ತಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.ಶಾಲೆಯ ಕಿಟಕಿಗಳನ್ನು ಹಾಕಿದ್ದರೂ ವಾಸನೆ ಮೂಗಿಗೆ ಬಡಿಯುತ್ತಿದೆ, ಇನ್ನೂ ಶಾಲೆಯ ಕಿಟಕಿ ತೆರೆದರೆ ಮತ್ತಷ್ಟು ದುರ್ವಾಸನೆ ಬೀರುತ್ತದೆ. ಸ್ವಚ್ಛ ಮಾಡಿಸಿ ಎಂದು ದೂರು ನೀಡಿ ಒಂದೂವರೆ ತಿಂಗಳಾಗುತ್ತಿದೆ.

-ಶಿವನಾಗ, ಗ್ರಾಮಸ್ಥಕಳೆದೊಂದು ವಾರದಿಂದ ಮಳೆ ಬೀಳುತ್ತಿರುವ ಕಾರಣ ಶಾಲೆಯ ಹಿಂಬದಿ ಕೊಳಚೆ ಜಾಗವನ್ನು ಸ್ವಚ್ಛ ಮಾಡಿಸಲು ಆಗಿಲ್ಲ. ಮಳೆ ಕಡಿಮೆಯಾದ ಬಳಿಕ ಸ್ವಚ್ಛ ಮಾಡಿಸಿ ವಾಸನೆ ಬರದಂತೆ ಕ್ರಮ ವಹಿಸಲಾಗುವುದು.

-ಶಿಲ್ಪ, ಪಿಡಿಒ

Share this article