ನಗರದಲ್ಲಿ ಮತ್ತೆ 50 ಕೋಟಿ ಮೌಲ್ಯದ ಡ್ರಗ್ಸ್‌ ಬೇಟೆ

KannadaprabhaNewsNetwork |  
Published : Oct 13, 2025, 02:01 AM IST
NCB Airport 1 | Kannada Prabha

ಸಾರಾಂಶ

ಎನ್‌ಸಿಬಿ ಅಧಿಕಾರಿಗಳು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜಪ್ತಿ ಮಾಡಿದ ಮಾದಕ ವಸ್ತುಗಳು

ಕನ್ನಡಪ್ರಭ ವಾರ್ತೆ ಬೆಂಗಳೂರು

ಮಾದಕ ವಸ್ತು ನಿಯಂತ್ರಣ ಸಂಸ್ಥೆಯ (ಎನ್‌ಸಿಬಿ) ಬೆಂಗಳೂರು ವಲಯದ ಅಧಿಕಾರಿಗಳು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿ 50 ಕೋಟಿ ರು. ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ಅಧಿಕಾರಿಗಳು ಅ.9ರಂದು ಈ ಭರ್ಜರಿ ಕಾರ್ಯಾಚರಣೆ ನಡೆಸಿ ಶ್ರೀಲಂಕಾ ಪ್ರಜೆ ಸೇರಿ ಮೂವರು ಡ್ರಗ್ಸ್‌ ಪೆಡ್ಲರ್‌ಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು 45 ಕೆ.ಜಿ. ಹೈಡ್ರೋ ಗಾಂಜಾ ಮತ್ತು 6 ಕೆ.ಜಿ.ಸೈಲೋಸಿಬಿನ್‌ ಮಶ್ರೂಮ್‌ ಜಪ್ತಿ ಮಾಡಿದ್ದಾರೆ.

ಅಧಿಕಾರಿಗಳು ಥೈಲ್ಯಾಂಡ್‌ನಿಂದ ಹೈಡ್ರೋಫೋನಿಕ್‌ ಗಾಂಜಾ ಕಳ್ಳ ಸಾಗಣೆಯಲ್ಲಿ ತೊಡಗಿರುವ ಡ್ರಗ್ಸ್‌ ಪೆಡ್ಲರ್‌ಗಳ ಬಗ್ಗೆ ಗುಪ್ತಚರ ಮಾಹಿತಿ ಪಡೆದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಗಾ ವಹಿಸಿದ್ದರು. ಶ್ರೀಲಂಕಾದ ಕೊಲಂಬೋದಿಂದ ಬೆಂಗಳೂರಿಗೆ ಬರುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿ ಅವರಿಂದ 31.4 ಕೆ.ಜಿ. ಹೈಡ್ರೋ ಗಾಂಜಾ ಮತ್ತು 4 ಕೆ.ಜಿ. ಸೈಲೋಸಿಬಿನ್‌ ಮಶ್ರೂಮ್‌ಗಳನ್ನು ಜಪ್ತಿ ಮಾಡಿದ್ದರು.

ಈ ಇಬ್ಬರ ವಿಚಾರಣೆ ವೇಳೆ ಮತ್ತೊಂದು ವಿಮಾನದಲ್ಲಿ ಶ್ರೀಲಂಕಾದ ಡ್ರಗ್ಸ್‌ ಹ್ಯಾಂಡ್ಲರ್‌ ನಗರಕ್ಕೆ ಬರುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ ಎನ್‌ಸಿಬಿ ಅಧಿಕಾರಿಗಳು, ಕಾದು ಆತನನ್ನು ಬಂಧಿಸಿದ್ದಾರೆ. ಆತನಿಂದ 14 ಕೆ.ಜಿ. ಹೈಡ್ರೋ ಗಾಂಜಾ ಮತ್ತು 2 ಕೆ.ಜಿ. ಸೈಲೋಸಿಬಿನ್‌ ಮಶ್ರೂಮ್‌ ಜಪ್ತಿ ಮಾಡಿದ್ದಾರೆ.

ಫುಡ್‌ ಟಿನ್‌ಗಳಲ್ಲಿ ಕಳ್ಳ ಸಾಗಣೆ:

ಆರೋಪಿಗಳು ಸುಮಾರು 250 ಆಹಾರದ ಡಬ್ಬಿಗಳಲ್ಲಿ ಹೈಡ್ರೋ ಗಾಂಜಾ ತುಂಬಿಸಿದ್ದು, ತಪಾಸಣೆ ವೇಳೆ ತಪ್ಪಿಸಿಕೊಳ್ಳಲು ಆ ಆಹಾರದ ಡಬ್ಬಿಗಳನ್ನು ವ್ಯಾಕ್ಯೂಮ್‌ ಸೀಲ್ ಮಾಡಿದ್ದರು. ಈ ಡ್ರಗ್ಸ್‌ ಕಳ್ಳ ಸಾಗಣೆ ಹಿಂದೆ ವ್ಯವಸ್ಥಿತ ಜಾಲ ಕಾರ್ಯ ನಿರ್ವಹಿಸುತ್ತಿರುವುದು ಕಂಡು ಬಂದಿದೆ. ಈ ಸಿಂಡಿಕೇಟ್‌ನಲ್ಲಿ ಹಲವು ಡ್ರಗ್ಸ್‌ ಪೆಡ್ಲರ್‌ಗಳು ಸೇರಿದ್ದು, ಅವರ ಬಂಧನಕ್ಕೆ ಎನ್‌ಸಿಬಿ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

ಎನ್‌ಸಿಬಿ ಬೆಂಗಳೂರು ಘಟಕ ಈ ವರ್ಷ 18 ಪ್ರಕರಣಗಳಲ್ಲಿ ನೂರಾರು ಕೋಟಿ ರು. ಮೌಲ್ಯದ 220 ಕೆ.ಜಿ. ಹೈಡ್ರೋ ಗಾಂಜಾ ಜಪ್ತಿ ಮಾಡಿದೆ. ಈ ಸಂಬಂಧ ಕೇರಳ, ರಾಜಸ್ಥಾನ, ಗುಜರಾತ್‌ ಮತ್ತು ಮಹಾರಾಷ್ಟ್ರಕ್ಕೆ ಸೇರಿದ 45 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.

ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿಗೆ 80 ಲಕ್ಷ!

ಈ ಹೈಡ್ರೋ ಗಾಂಜಾ ಕಳ್ಳ ಸಾಗಣೆ ಲಾಭದಾಯಕ ವ್ಯವಹಾರವಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಒಂದು ಕೆ.ಜಿ.ಗೆ ಸುಮಾರು 80 ಲಕ್ಷ ರು.ವರೆಗೂ ಮಾರಾಟವಾಗುತ್ತದೆ. ಹೈಡ್ರೋಫೋನಿಕ್‌ ಗಾಂಜಾವನ್ನು ಪಾರ್ಟಿಯಲ್ಲಿ ನಶೆಗಾಗಿ ಹೆಚ್ಚಾಗಿ ಬಳಸಲಾಗುತ್ತದೆ. ಅನೇಕ ಯುವಕರು ಹಣದಾಸೆಗೆ ಥೈಲ್ಯಾಂಡ್‌ನಿಂದ ಇದನ್ನು ಕಳ್ಳಸಾಗಣೆ ಮಾಡುತ್ತಾರೆ.

ಪೆಡ್ಲರ್‌ಗಳು ಈ ಹೈಡ್ರೋಫೊನಿಕ್ಸ್‌ ಗಾಂಜಾವನ್ನು ಟೆಟ್ರಾ ಪ್ಯಾಕ್‌ಗಳು, ಚಾಕೋಲೇಟ್‌ ಬಾರ್‌ಗಳು, ಆಹಾರ ಪೊಟ್ಟಣಗಳು, ಬಟ್ಟೆ ಮೊದಲಾದ ವಸ್ತುಗಳಲ್ಲಿ ಬಚ್ಚಿಟ್ಟು ಕಳ್ಳ ಸಾಗಣೆ ಮಾಡುತ್ತಾರೆ. ಕೆಲವು ವಿಮಾನ ನಿಲ್ದಾಣಗಳಲ್ಲಿ ಬಿಗಿ ತಪಾಸಣೆ ಇರುವುದರಿಂದ ಪೆಡ್ಲರ್‌ಗಳು ದುಬೈ, ಕೊಲಂಬೋ, ಕಾಠ್ಮಂಡು ಮೊದಲಾದ ವಿಮಾನ ನಿಲ್ದಾಣಗಳಿಂದ ವಿವಿಧ ದೇಶಗಳಿಗೆ ಕಳ್ಳ ಸಾಗಣೆ ಮಾಡುತ್ತಾರೆ ಎಂದು ಎನ್‌ಸಿಬಿ ಮೂಲಗಳು ತಿಳಿಸಿವೆ.ಟೋಲ್ ಫ್ರೀ ಸಂಖ್ಯೆ 1933ಗೆ ಕರೆ ಮಾಡಿ

ನಾಗರಿಕರಿಗೆ ಮಾದಕವಸ್ತು ಕಳ್ಳ ಸಾಗಣೆ ಬಗ್ಗೆ ಮಾಹಿತಿ ಇದ್ದಲ್ಲಿ ಟೋಲ್‌ ಫ್ರೀ ಸಂಖ್ಯೆ 1933ಕ್ಕೆ ಕರೆ ಮಾಹಿತಿ ನೀಡಬಹುದು. ಮಾಹಿತಿ ನೀಡಿದ ವ್ಯಕ್ತಿಗಳ ಮಾಹಿತಿಯನ್ನು ಗೌಪ್ಯವಾಗಿ ಇರಿಸಲಾಗುವುದು ಎಂದು ಎನ್‌ಸಿಬಿ ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಣಸೆ, ಹಲಸು, ನೇರಳೆಗೆ ಮಂಡಳಿ ರಚಿಸಿ: ದೇವೇಗೌಡ
ಗುಮ್ಮ ಬಂದ ಗುಮ್ಮ, ಮಕ್ಕಳಿಗೆ ಹೊಡೆಯೋ ಗುಮ್ಮ!