ಧಾರವಾಡದಲ್ಲೂ ವಿದ್ಯಾರ್ಥಿ ಜನಿವಾರಕ್ಕೆ ಸಿಬ್ಬಂದಿ ಕತ್ತರಿ : ಸಿಬ್ಬಂದಿ ಎಡವಟ್ಟಿಗೆ ಹಿಂದೂ ಸಂಘಟನೆ ಕಿಡಿ

KannadaprabhaNewsNetwork |  
Published : Apr 21, 2025, 01:33 AM ISTUpdated : Apr 21, 2025, 06:42 AM IST
20ಡಿಡಬ್ಲೂಡಿ4ಸಿಇಟಿ ಪರೀಕ್ಷೆ ಬರೆಯುವ ವೇಳೆ ಅಲ್ಲಿಯ ಸಿಬ್ಬಂದಿ ಕತ್ತರಿಸಿದ ಜನಿವಾರ ಪ್ರದರ್ಶಿಸುತ್ತಿರುವ ನಂದನ್‌ ಏರಿ.   | Kannada Prabha

ಸಾರಾಂಶ

ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗಾಗಿ ಏ.16 ಮತ್ತು 17ರಂದು ನಡೆದ ಸಿಇಟಿ ಪರೀಕ್ಷೆ ವೇಳೆ ಬೀದರ್ ಹಾಗೂ ಶಿವಮೊಗ್ಗದಲ್ಲಿ ನಡೆದ ರೀತಿಯಲ್ಲಿಯೇ ಧಾರವಾಡದಲ್ಲೂ ವಿದ್ಯಾರ್ಥಿಯೊಬ್ಬನ ಜನಿವಾರ ಕತ್ತರಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಧಾರವಾಡ : ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗಾಗಿ ಏ.16 ಮತ್ತು 17ರಂದು ನಡೆದ ಸಿಇಟಿ ಪರೀಕ್ಷೆ ವೇಳೆ ಬೀದರ್ ಹಾಗೂ ಶಿವಮೊಗ್ಗದಲ್ಲಿ ನಡೆದ ರೀತಿಯಲ್ಲಿಯೇ ಧಾರವಾಡದಲ್ಲೂ ವಿದ್ಯಾರ್ಥಿಯೊಬ್ಬನ ಜನಿವಾರ ಕತ್ತರಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಇಲ್ಲಿಯ ರಾಘವೇಂದ್ರ ನಗರದ ನಂದನ್​ ಏರಿ ಎಂಬ ವಿದ್ಯಾರ್ಥಿ ಏ.16ರಂದು ಹುರಕಡ್ಲಿ ಅಜ್ಜ ಕಾನೂನು ಕಾಲೇಜಿಗೆ ಸಿಇಟಿ ಬರೆಯಲು ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಪರೀಕ್ಷಾ ಕೇಂದ್ರದ ಭದ್ರತಾ ಸಿಬ್ಬಂದಿ ತಪಾಸಣೆ ನಡೆಸುವಾಗ ನಂದನ್​ ಧರಿಸಿದ್ದ ಜನಿವಾರ ತೆಗೆಯಲು ಹೇಳಿದ್ದಾರೆ. ಆದರೆ, ನಂದನ್​ ಇದಕ್ಕೆ ಒಪ್ಪದಿದ್ದಾಗ, ಅದನ್ನು ಧರಿಸಿದರೆ ಪರೀಕ್ಷಾ ಕೊಠಡಿಗೆ ಬಿಡುವುದಿಲ್ಲ ಎಂದಿದ್ದಾರೆ. ಅಷ್ಟರಲ್ಲೇ ಜನಿವಾರ ಕತ್ತರಿಸಲು ಸಿಬ್ಬಂದಿ ಮುಂದಾದಾಗ, ಬೇಡ ಬ್ಯಾಗ್​ನಲ್ಲಿ ಇಟ್ಟುಕೊಳ್ಳುವುದಾಗಿ ಹೇಳಿದರೂ ಸ್ಪಂದಿಸದೆ ಜನಿವಾರ ಕತ್ತರಿಸಿ ಮರಳಿ ನಂದನ್‌ ಕೈಗೆ ಕೊಟ್ಟಿದ್ದಾರೆ.

ನಂದನ್​, ಈ ವಿಚಾರವನ್ನು ಯಾರ ಬಳಿಯೂ ಹೇಳಿರಲಿಲ್ಲ. 2ನೇ ದಿನವೂ ಜನಿವಾರ ಇಲ್ಲದೆ ಪರೀಕ್ಷೆಗೆ ಬಂದಿದ್ದ. ಆದರೆ, ರಾಜ್ಯದ ವಿವಿಧ ಕಡೆಗಳಲ್ಲಿ ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಿದ್ದಂತೆ ಈ ವಿಚಾರವನ್ನು ತಂದೆ ಮುಂದೆ ಪ್ರಸ್ತಾಪಿಸಿದ್ದಾನೆ. ತಂದೆ ವಿವೇಕ ಏರಿ, ಮಾಧ್ಯಮಗಳಿಗೆ ಈ ವಿಷಯ ತಿಳಿಸಿದ್ದಾರೆ.

ಹಿಂದೂ ಸಂಘಟನೆಗಳ ಕಿಡಿ:

ಘಟನೆ ಬಗ್ಗೆ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ವಿಷಯ ಗೊತ್ತಾಗುತ್ತಿದ್ದಂತೆ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್‌ ಅವರು ಭಾನುವಾರ ಮಧ್ಯಾಹ್ನ ವಿದ್ಯಾರ್ಥಿ ಮನೆಗೆ ಭೇಟಿ ನೀಡಿ, ಧೈರ್ಯ ತುಂಬಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಮುತಾಲಿಕ್‌, ಧಾರ್ಮಿಕ ಭಾವನೆಗೆ ಧಕ್ಕೆ ತರುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಸಿಎಂ ಸಿದ್ದರಾಮಯ್ಯ ಅವರು ಈ ಸಂಬಂಧ ವಿದ್ಯಾರ್ಥಿಗಳ ತಂದೆ-ತಾಯಿ ಬಳಿ ಕ್ಷಮೆ ಕೇಳಬೇಕು. ಹಿಂದೂ ವಿದ್ಯಾರ್ಥಿಗಳನ್ನು ಅವಮಾನಿಸುವ ಕೆಲಸ ನಡೆಯುತ್ತಿದೆ. ಈ ವಿಚಾರವಾಗಿ ನ್ಯಾಯಾಲಯದ ಮೊರೆ ಹೋಗುತ್ತೇವೆ. ಹಿಜಾಬ್​, ಬುರ್ಖಾಗೆ ಅವಕಾಶ ಕೊಡುವ ಸರ್ಕಾರಕ್ಕೆ, ಆ ಧರ್ಮದ ಬಗ್ಗೆ ಮಾತನಾಡುವ ಧೈರ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...