ನಗರದಲ್ಲಿ ಮತ್ತೆ 23 ಕೋಟಿ ಡ್ರಗ್ಸ್‌ ಬೇಟೆ!

KannadaprabhaNewsNetwork |  
Published : Apr 17, 2026, 03:45 AM IST
Police

ಸಾರಾಂಶ

ಮಾದಕ ವಸ್ತು ಮಾರಾಟ ಜಾಲದ ಮೇಲೆ ರಾಜಧಾನಿ ಪೊಲೀಸರ ಅಬ್ಬರದ ಕಾರ್ಯಾಚರಣೆ ಮತ್ತಷ್ಟು ಬಿರುಸುಗೊಂಡಿದ್ದು, ಈಗ ಮತ್ತೆ ಇಬ್ಬರು ವಿದೇಶಿ ಮಹಿಳೆಯರು ಸೇರಿದಂತೆ 10 ಮಂದಿಯನ್ನು ಬಂಧಿಸಿ 23 ಕೋಟಿ ರು. ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ.

  ಬೆಂಗಳೂರು :  ಮಾದಕ ವಸ್ತು ಮಾರಾಟ ಜಾಲದ ಮೇಲೆ ರಾಜಧಾನಿ ಪೊಲೀಸರ ಅಬ್ಬರದ ಕಾರ್ಯಾಚರಣೆ ಮತ್ತಷ್ಟು ಬಿರುಸುಗೊಂಡಿದ್ದು, ಈಗ ಮತ್ತೆ ಇಬ್ಬರು ವಿದೇಶಿ ಮಹಿಳೆಯರು ಸೇರಿದಂತೆ 10 ಮಂದಿಯನ್ನು ಬಂಧಿಸಿ 23 ಕೋಟಿ ರು. ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ.

ಯಲಹಂಕ ಉಪನಗರ, ದೇವರಜೀವನಹಳ್ಳಿ (ಡಿ.ಜೆ.ಹಳ್ಳಿ), ಬಾಣಸವಾಡಿ, ಕೋರಮಂಗಲ, ಬೊಮ್ಮನಹಳ್ಳಿ ಹಾಗೂ ಪುಲಿಕೇಶಿ ನಗರ ಠಾಣೆಗಳ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದು, ಆರೋಪಿಗಳಿಂದ 5.919 ಕೆಜಿ ಎಂಡಿಎಂಎ, 1.151 ಕೆಜಿ ಕೊಕೇನ್‌, 21 ಕೆಜಿ ಗಾಂಜಾ ಹಾಗೂ 19 ಗ್ರಾಂ ಎಕ್ಸೈಟಿಸಿ ಮಾತ್ರೆ ಸೇರಿದಂತೆ 11.81 ಕೋಟಿ ರು. ಮೌಲ್ಯದ ಡ್ರಗ್ಸ್ ಜಪ್ತಿಯಾಗಿದೆ. ಪ್ರಸುತ್ತ ಮಾರುಕಟ್ಟೆಯಲ್ಲಿ ಆ ಡ್ರಗ್ಸ್ ಮೌಲ್ಯವು 23.63 ಕೋಟಿ ರು. ಇದೆ. ಆರೋಪಿಗಳಿಗೆ ಡ್ರಗ್ಸ್ ಪೂರೈಸುತ್ತಿದ್ದ ವಿದೇಶಿ ಹಾಗೂ ಹೊರ ರಾಜ್ಯದ ವ್ಯಕ್ತಿಗಳಿಗೆ ತನಿಖೆ ನಡೆದಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ವಿದೇಶಿ ಮಹಿಳೆಯರ ಬಳಿ 11 ಕೋಟಿ ಡ್ರಗ್ಸ್ :

ಬಟ್ಟೆ ವ್ಯಾಪಾರದ ಸೋಗಿನಲ್ಲಿ ಡ್ರಗ್ಸ್ ದಂಧೆ ನಡೆಸುತ್ತಿದ್ದ ಇಬ್ಬರು ವಿದೇಶಿ ಮಹಿಳೆಯರು ಯಲಹಂಕ ಉಪನಗರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ನೈಜೀರಿಯಾ ಮೂಲದ ಪೀಸ್ ಗೋಡಿಯಾ ಅಲಿಯಾಸ್ ಎಲ್ಲ ಹಾಗೂ ಬಕ್ಕುಲಾ ಒಮತಯಾ ಅಲಿಯಾಸ್ ಬುಕ್ಕಿ ಬಂಧಿತರಾಗಿದ್ದು, ಆರೋಪಿಗಳಿಂದ 11.72 ಕೋಟಿ ರು. ಮೌಲ್ಯದ 5.8 ಕೆಜಿ ಎಂಡಿಎಂಎ ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಡ್ರಗ್ಸ್ ಪ್ರಕರಣದಲ್ಲಿ ಬಂಧಿತನಾಗಿದ್ದ ನೈಜೀರಿಯಾ ಮೂಲದ ಸ್ಯಾಮುಲ್‌ ನೀಡಿದ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಾಲ್ಕು ವರ್ಷಗಳ ಹಿಂದೆ ವೈದ್ಯಕೀಯ ವೀಸಾದಡಿ ಭಾರತಕ್ಕೆ ಬಂದಿದ್ದ ಪೀಸ್ ಹಾಗೂ ಬುಕ್ಕಿ, ನಂತರ ನಗರಕ್ಕೆ ಬಂದು ನೆಲೆಸಿದ್ದರು. ಜಿಗಣಿ ಬಳಿ ಬಿಡಾರ ಹೂಡಿದ್ದ ಆರೋಪಿಗಳು, ಸುಲಭವಾಗಿ ಹಣ ಗಳಿಸಲು ಡ್ರಗ್ಸ್ ದಂಧೆ ಶುರು ಮಾಡಿದ್ದಾರೆ. ಬಟ್ಟೆ ವ್ಯಾಪಾರ ನಡೆಸುವುದಾಗಿ ಹೇಳಿಕೊಂಡು ಮರೆಯಲ್ಲಿ ಗ್ರಾಹಕರಿಗೆ ಡ್ರಗ್ಸ್ ಪೂರೈಸುತ್ತಿದ್ದರು. ಆದರೆ ಎಲ್ಲಿಂದ ಡ್ರಗ್ಸ್ ಖರೀದಿಸಿ ತಂದಿದ್ದರು ಎಂಬ ಬಗ್ಗೆ ಆರೋಪಿಗಳು ಬಾಯ್ಬಿಟ್ಟಿಲ್ಲ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಆನ್‌ಲೈನ್‌ ಮೂಲಕ ಡ್ರಗ್ಸ್ ಡೀಲ್ ಅನ್ನು ವಿದೇಶಿ ಪೆಡ್ಲರ್‌ಗಳು ನಡೆಸುತ್ತಿದ್ದರು. ಗ್ರಾಹಕರಿಗೆ ಲೋಕೇಷನ್ ಹಂಚಿಕೊಳ್ಳುವ ಮೂಲಕ ಡ್ರಗ್ಸ್‌ ಪೂರೈಸುತ್ತಿದ್ದರು. ಆನೇಕಲ್ ತಾಲೂಕಿನ ಕೃಷ್ಣದೊಡ್ಡಿ ಗ್ರಾಮದ ಮನೆಯೊಂದರಲ್ಲಿ ವಿದೇಶಿ ಪೆಡ್ಲರ್‌ಗಳು ಡ್ರಗ್ಸ್ ದಾಸ್ತಾನು ಮಾಡಿರುವ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಪೆಂಟರ್‌ ಬಳಿ ₹11 ಕೋಟಿ ಕೊಕೇನ್‌!

ಡಿ.ಜೆ.ಹಳ್ಳಿ ಪೊಲೀಸರ ಬಲೆಗೆ ಮತ್ತೊಬ್ಬ ಪೆಡ್ಲರ್ ಬಿದ್ದಿದ್ದಾನೆ. ಮಾರುತಿನಗರದ ಸೈಯದ್ ಬಂಧಿತನಾಗಿದ್ದು, ಆರೋಪಿಯಿಂದ 11.44 ಕೋಟಿ ರು. ಮೌಲ್ಯದ 1.1 ಕೆಜಿ ಕೊಕೇನ್ ಜಪ್ತಿಯಾಗಿದೆ. ಆದರೆ ಈತ ಎಲ್ಲಿಂದ ಡ್ರಗ್ಸ್ ಖರೀದಿಸಿದ್ದ ಎಂಬುದು ಖಚಿತವಾಗಿಲ್ಲ. ಈ ಬಗ್ಗೆ ತನಿಖೆ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇನ್ನು 46 ಗ್ರಾಂ ಎಂಡಿಎಂಎ, 19 ಗ್ರಾಂ ಎಕ್ಸೈಟೆಸಿ ಪಿಲ್ಸ್‌, 6.6 ಗ್ರಾಂ ಕೊಕೇನ್ ಸೇರಿದಂತೆ 23.56 ಲಕ್ಷ ರು. ಮೌಲ್ಯದ ಡ್ರಗ್ಸ್ ಅನ್ನು ಬಾಣಸವಾಡಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಅಧಿಕ ಮಾಸ, ಆಂಜನೇಯ ದೇವಾಲಯಗಳಲ್ಲಿ ಭಕ್ತ ಸಾಗರ
ಮಕ್ಕಳನ್ನೇ ಜೋಡೆತ್ತು ಮಾಡಿ ಎಡೆಕುಂಟೆ ಹೊಡೆದ ಅಪ್ಪ