ವಿಷಾಹಾರ ಸೇವನೆ: ಮತ್ತೋರ್ವ ವಿದ್ಯಾರ್ಥಿ ಸಾವು

KannadaprabhaNewsNetwork | Published : Mar 19, 2025 12:34 AM

ಸಾರಾಂಶ

ವಿಷಾಹಾರ ಸೇವಿಸಿ ಗಂಭೀರ ಸ್ಥಿತಿಯಲ್ಲಿದ್ದ ಮೇಘಾಲಯದ ಮತ್ತೊಬ್ಬ ವಿದ್ಯಾರ್ಥಿ ಚಿಕಿತ್ಸೆ ಫಲಕಾರಿಯಾಗದೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ಮಧ್ಯರಾತ್ರಿ ಮೃತಪಟ್ಟಿದ್ದಾನೆ. ಇದರಿಂದ ಮೃತಪಟ್ಟವರ ಸಂಖ್ಯೆ ಎರಡಕ್ಕೇರಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ವಿಷಾಹಾರ ಸೇವಿಸಿ ಗಂಭೀರ ಸ್ಥಿತಿಯಲ್ಲಿದ್ದ ಮೇಘಾಲಯದ ಮತ್ತೊಬ್ಬ ವಿದ್ಯಾರ್ಥಿ ಚಿಕಿತ್ಸೆ ಫಲಕಾರಿಯಾಗದೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ಮಧ್ಯರಾತ್ರಿ ಮೃತಪಟ್ಟಿದ್ದಾನೆ. ಇದರಿಂದ ಮೃತಪಟ್ಟವರ ಸಂಖ್ಯೆ ಎರಡಕ್ಕೇರಿದೆ.

ಮೇಘಾಲಯದ ವಿದ್ಯಾರ್ಥಿ ನಮೀಬ್ ಮಾಂತೆ ಮೃತ ವಿದ್ಯಾರ್ಥಿ. ಗಂಭೀರ ಸ್ಥಿತಿಯಲ್ಲಿದ್ದ ವಿದ್ಯಾರ್ಥಿಯನ್ನು ಮೈಸೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆಗೆ ಸ್ಪಂದಿಸದೆ ನಮೀಬ್ ಮಾಂತೆ ಸಾವಿಗೀಡಾಗಿದ್ದಾನೆ. ಅಸ್ವಸ್ಥಗೊಂಡಿದ್ದ ವಸತಿ ಶಾಲೆಯ ೪೬ ವಿದ್ಯಾರ್ಥಿಗಳು ಚೇತರಿಸಿಕೊಳ್ಳುತ್ತಿದ್ದಾರೆ. ಈ ಮೊದಲು ಊಟ ಸೇವಿಸಿ ಅಸ್ವಸ್ಥಗೊಂಡಿದ್ದ ಮೇಘಾಲಯದ ಕರ್ಲಾಂಗ್ ಎಂಬ ವಿದ್ಯಾರ್ಥಿ ಸಾವನ್ನಪ್ಪಿದ್ದನು.

ವಿಶೇಷ ತನಿಖಾ ತಂಡ ರಚನೆ:

ಕಲುಷಿತ ಆಹಾರ ಸೇವನೆ ಪ್ರಕರಣ ಕುರಿತಂತೆ ತನಿಖೆ ನಡೆಸಲು ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ಅವರು ಮಳವಳ್ಳಿ ಡಿವೈಎಸ್ಪಿ ವಿ.ಕೃಷ್ಣಪ್ಪ ನೇತೃತ್ವದಲ್ಲಿ ಸಿಪಿಐಗಳಾದ ಬಿ.ಎಸ್.ಶ್ರೀಧರ್, ಬಿ.ಜಿ.ಮಹೇಶ್, ಎಂ.ರವಿಕುಮಾರ್ ಅವರನ್ನೊಳಗೊಂಡ ತಂಡವೊಂದನ್ನು ರಚಿಸಿದ್ದಾರೆ.

ಹೋಳಿ ಹಬ್ಬಕ್ಕೆ ತಯಾರಿಸಲಾದ ಆಹಾರ ಹೋಟೆಲ್‌ನಲ್ಲೇ ಕಲುಷಿತವಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಆಕಸ್ಮಿಕವಾಗಿ ಆಹಾರ ಪದಾರ್ಥಗಳಿಂದಲೇ ವಿಷಾಹಾರವಾಗಿ ಪರಿವರ್ತನೆಯಾಗಿದೆಯೋ ಅಥವಾ ಉದ್ದೇಶ ಪೂರ್ವಕವಾಗಿ ಯಾರೋ ಊಟವನ್ನು ಕಲುಷಿತ ಮಾಡಿದ್ದಾರೋ ಎಂಬುದೂ ಸೇರಿದಂತೆ ವಿವಿಧ ಆಯಾಮಗಳಲ್ಲಿ ಖಾಕಿಪಡೆ ತನಿಖೆ ನಡೆಸಲಿದೆ ಎನ್ನಲಾಗಿದೆ.

ಆಹಾರ ತಯಾರಿಸಿದ್ದು ನಾನೇ: ಸಿದ್ದರಾಜು

ನಾನು ಕಳೆದ ಹದಿನಾರು ವರ್ಷದಿಂದ ಹೋಟೆಲ್ ನಡೆಸಿಕೊಂಡು ಬಂದಿದ್ದೇನೆ. ಯಾವುದೇ ಸರ್ಕಾರಿ ಕಾರ್ಯಕ್ರಮಗಳಿದ್ದರೂ ನಮ್ಮ ಹೋಟೆಲ್‌ನಿಂದಲೇ ಊಟ ತಯಾರಿಸಿ ಕಳುಹಿಸಲಾಗುತ್ತಿದೆ. ಈವರೆಗೆ ಇಂತಹ ಯಾವುದೇ ಅನಾಹುತ ನಡೆದಿಲ್ಲ. ಶುಕ್ರವಾರ ಬೆಳಗ್ಗೆ ಬಾತು, ಚಟ್ನಿ, ಮೊಸರು ಬಜ್ಜಿ ತೆಗೆದುಕೊಂಡು ಹೋಗಿದ್ದರು. ಮೊದಲೇ ಊಟಕ್ಕೆ ಆರ್ಡರ್ ಕೊಟ್ಟಿದ್ದರಿಂದ ನಾನೇ ಅಡುಗೆ ಮಾಡಿದ್ದೆ. ಆ ಊಟವನ್ನು ಮಕ್ಕಳಿಗೆ ಏಕೆ ಪೂರೈಸಿದರು ಎನ್ನುವುದು ಗೊತ್ತಿಲ್ಲ ಎಂದು ಶ್ರೀ ಲಕ್ಷ್ಮೀನರಸಿಂಹಸ್ವಾಮಿ( ಶ್ರೀ ಸಿದ್ಧಪ್ಪಾಜಿ ಹೋಟೆಲ್ ) ಹೋಟೆಲ್ ಮಾಲೀಕ ಸಿದ್ದರಾಜು ಹೇಳಿದ್ದಾರೆ.

ನನ್ನ ಕೈ ಹಸಿದು ಹೋಟೆಲ್‌ಗೆ ಬಂದವರಿಗೆ ಅನ್ನ ಹಾಕುತ್ತಿದೆ. ನಾನೇ ತಯಾರಿಸಿದ ಆಹಾರದಿಂದ ದುರಂತ ನಡೆದಿರೋದು ತೀವ್ರ ನೋವುಂಟುಮಾಡಿದೆ. ನಾನು ಅಂದು ತೇಜು ಮಸಾಲೆ ಹಾಗೂ ಮನೆಯ ಮಸಾಲೆಯನ್ನು ಬಳಸಿ ಆಹಾರ ತಯಾರಿಸಿದ್ದೆ. ಊಟಕ್ಕೆ ಆರ್ಡರ್ ಕೊಟ್ಟವರು ೧೫೦ ಜನರಿಗೆ ಅಡುಗೆ ಮಾಡುವಂತೆ ಹೇಳಿದ್ದರು. ಅದರಂತೆ ಮಾಡಿಕೊಟ್ಟಿದ್ದೆ. ನಮ್ಮ ಹೋಟೆಲ್‌ನಲ್ಲಿ ೧೨೦ ಗ್ರಾಹಕರಿಗೂ ಅಡುಗೆ ಮಾಡಿದ್ದೆ. ಎಲ್ಲರಿಗೂ ಒಂದೇ ಪಾತ್ರೆಯಲ್ಲಿ ಅಡುಗೆ ಮಾಡಿದ್ದು, ಅವರಿಗೆ ಯಾವುದೇ ಆರೋಗ್ಯ ಸಮಸ್ಯೆ ಎದುರಾಗಿಲ್ಲ. ಆದರೆ, ಆಹಾರ ಸೇವಿಸಿದ ಇಬ್ಬರು ಮಕ್ಕಳು ಸಾವನ್ನಪ್ಪಿರುವುದು, ಇತರೆ ಮಕ್ಕಳು ಅಸ್ವಸ್ಥಗೊಂಡಿರುವುದು ನೋವು ತಂದಿದ್ದು, ಈ ಬಗ್ಗೆ ಸಮಗ್ರವಾಗಿ ತನಿಖೆ ನಡೆಯಲಿ. ಅದಕ್ಕೆ ನಾನು ಸಿದ್ಧನಿದ್ದೇನೆ ಎಂದಿದ್ದಾರೆ.

ಮೇಘಾಲಯದ ಮುಖ್ಯ ಕಾರ್ಯದರ್ಶಿ ಭೇಟಿ:

ವಿಷಾಹಾರ ಸೇವಿಸಿ ಅಸ್ವಸ್ಥಗೊಂಡಿರುವ ವಿದ್ಯಾರ್ಥಿಗಳನ್ನು ಮೇಘಾಲಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಮಂಗಳವಾರ ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ಪ್ರಕರಣ ಕುರಿತಂತೆ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ವೈದ್ಯಾಧಿಕಾರಿಗಳಿಂದ ಮಕ್ಕಳ ಆರೋಗ್ಯ ಸ್ಥಿತಿಯ ಬಗ್ಗೆ ತಿಳಿದುಕೊಂಡರು.

ಜಿಲ್ಲಾಧಿಕಾರಿ ಡಾ.ಕುಮಾರ, ಮಿಮ್ಸ್ ನಿರ್ದೇಶಕ ಪಿ.ನರಸಿಂಹಮೂರ್ತಿ, ಮಕ್ಕಳ ತಜ್ಞ ಡಾ.ಕೀರ್ತಿ ಇತರರಿದ್ದರು.

---------------------------------------------

ಗೋಕುಲ ವಿದ್ಯಾಸಂಸ್ಥೆ ವಸತಿ ಶಾಲೆಯಲ್ಲ

ಗೋಕುಲ ವಿದ್ಯಾಸಂಸ್ಥೆ ವಸತಿ ಶಾಲೆಯಲ್ಲ. ಅದೊಂದು ಶಾಲೆ. ಮೇಘಾಲಯದ ೨೪ ವಿದ್ಯಾರ್ಥಿಗಳಿಗೆ ಮಾತ್ರ ಅಲ್ಲಿ ವಸತಿ ವ್ಯವಸ್ಥೆ ಮಾಡಿಕೊಂಡಿದ್ದವರು. ಉಳಿದವರು ಶಾಲೆ ಮುಗಿಸಿಕೊಂಡು ಮನೆಗಳಿಗೆ ತೆರಳುತ್ತಿದ್ದರು. ಹೊರಗಿನ ಊಟವನ್ನು ಮಕ್ಕಳಿಗೆ ಕೊಡುವಂತಿಲ್ಲ. ಶಾಲೆಯಲ್ಲಿ ತಯಾರಿಸಿದ ಆಹಾರವನ್ನು ನೀಡದೆ ಸಂಸ್ಥೆಯವರು ತಪ್ಪು ಮಾಡಿದ್ದಾರೆ. ಹಾಗಾಗಿ ಅವರ ವಿರುದ್ಧ ಕ್ರಮಕ್ಕೆ ಪೊಲೀಸರಿಗೆ ದೂರು ನೀಡಲಾಗಿದೆ.

- ಶಿವರಾಮೇಗೌಡ, ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ

Share this article