ಕಕ್ಕುಲಾತಿಯ ಸಿಹಿ ಹೂರಣ ಅವ್ವನ ಬುತ್ತಿ

KannadaprabhaNewsNetwork | Published : Mar 19, 2025 12:34 AM

ಸಾರಾಂಶ

ಅವ್ವನ ತ್ಯಾಗ ಪದಗಳಲ್ಲಿ ಹಿಡಿದಿಡಲು ಸಾಧ್ಯವಿಲ್ಲ. ಅವ್ವನ ಬುತ್ತಿಯಲ್ಲಿ ತ್ಯಾಗ, ಪ್ರೀತಿ, ಕಕ್ಕುಲಾತಿ ಹಾಗೂ ನಿಸ್ವಾರ್ಥವಿದೆ. ಅವ್ವನ ಬುತ್ತಿಯ ರುಚಿ ಜಗತ್ತಿನ ಯಾವ ಪಂಚತಾರಾ ಹೋಟೆಲ್‌ಗಳಲ್ಲಿಯೂ ಇರಲು ಸಾಧ್ಯವಿಲ್ಲ. ತಾಯಿಯಿಂದ ತ್ಯಾಗ, ತಂದೆಯಿಂದ ಧೀಮಂತಿಕೆ ಕಲಿಯಬೇಕು.

ಕೊಪ್ಪಳ:

ಅವ್ವನ ಬುತ್ತಿಯಲ್ಲಿ ತ್ಯಾಗ, ಪ್ರೀತಿ, ಕಕ್ಕುಲಾತಿ, ನಿಸ್ವಾರ್ಥವಿದೆ ಎಂದು ಸಹಾಯಕ ಪ್ರಾಧ್ಯಾಪಕ ಶರಣಬಸಪ್ಪ ಬಿಳಿಎಲೆ ಹೇಳಿದರು.

ನಗರದ ಸರ್ಕಾರಿ ನೌಕರರ ಭವನದಲ್ಲಿ ಲೀಲಾವತಿ ಕನ್ನಡ ಪ್ರಕಾಶನ, ವಿಶಾಲ ಪ್ರಕಾಶನ ಮಾದಿನೂರ, ಶ್ರೀನಿಮಿಷಾಂಬ ಪ್ರಕಾಶನ, ಸುಮಸಿರಿ ಕನ್ನಡ ಪ್ರಕಾಶನ ಹಾಗೂ ಸಿರಿಗನ್ನಡ ವೇದಿಕೆ ತಾಲೂಕು ಹಾಗೂ ಜಿಲ್ಲಾ ಘಟಕದ ಆಶ್ರಯದಲ್ಲಿ ಜರುಗಿದ ಸಾಹಿತಿ ರಂಗನಾಥ ಯ. ಅಕ್ಕಸಾಲಿಗರ ಕುದರಿಮೋತಿರವರ ಮೊದಲ ಕೃತಿ ಅವ್ವನ ಬುತ್ತಿ ಕವನ ಸಂಕಲನ ಲೋಕಾರ್ಪಣೆ ಹಾಗೂ ರನ್ನದೀವಿಗೆ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪುಸ್ತಕ ಪರಿಚಯಿಸಿ ಮಾತನಾಡಿದರು.

ಅವ್ವನ ತ್ಯಾಗ ಪದಗಳಲ್ಲಿ ಹಿಡಿದಿಡಲು ಸಾಧ್ಯವಿಲ್ಲ. ಅವ್ವನ ಬುತ್ತಿಯಲ್ಲಿ ತ್ಯಾಗ, ಪ್ರೀತಿ, ಕಕ್ಕುಲಾತಿ ಹಾಗೂ ನಿಸ್ವಾರ್ಥವಿದೆ. ಅವ್ವನ ಬುತ್ತಿಯ ರುಚಿ ಜಗತ್ತಿನ ಯಾವ ಪಂಚತಾರಾ ಹೋಟೆಲ್‌ಗಳಲ್ಲಿಯೂ ಇರಲು ಸಾಧ್ಯವಿಲ್ಲ. ತಾಯಿಯಿಂದ ತ್ಯಾಗ, ತಂದೆಯಿಂದ ಧೀಮಂತಿಕೆ ಕಲಿಯಬೇಕು. ಕವಿ ರಂಗನಾಥ ಅತ್ಯಂತ ಸರಳವಾದ ಪದಗಳಲ್ಲಿ ಮನಮುಟ್ಟುವ, ಅರ್ಥಪೂರ್ಣ ಕವನ ರಚಿಸಿದ್ದಾರೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ವಿಜಯನಗರ ಜಿಲ್ಲೆಯ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್‌ ಅಧ್ಯಕ್ಷ ಹಾಲ್ಯಾ ನಾಯಕ, ಸಾಹಿತಿಗಳಿಗೆ ಪ್ರೋತ್ಸಾಹ ಮುಖ್ಯ. ಸಾಹಿತಿ ಆದರ್ಶ ಬದುಕನ್ನು ಕುರಿತು ಬರೆಯಲಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಜಿ.ಎಸ್. ಗೋನಾಳ, ಸಾಹಿತಿ ಸಮಾಜದ ಓರೆಕೋರೆ ತಿದ್ದಿ ಸಾಧಕರ ಸಾಲಿನಲ್ಲಿ ನಿಲ್ಲುತ್ತಾನೆ ಎಂದರು.

ಹಿರಿಯ ನ್ಯಾಯವಾದಿ ಐ.ವಿ. ಪತ್ತಾರ ಮಾತನಾಡಿ, ಲೀಲಾವತಿ ಕನ್ನಡ ಪ್ರಕಾಶನದ ಲಾಂಛನ ಬಿಡುಗಡೆಗೊಳಿಸಿ, ಹೆಚ್ಚಿನ ವೈವಿಧ್ಯಮಯ ಕೃತಿಗಳು ಪ್ರಕಾಶನದಿಂದ ಪ್ರಕಟವಾಗಲಿ ಎಂದು ಆರೈಸಿದರು.

ಡಿ.ಎಂ. ಬಡಿಗೇರ ಹಾಗೂ ಕಸಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೇಖರಗೌಡ ಪೊಲೀಸ್‌ಪಾಟೀಲ್ ಮಾತನಾಡಿದರು. ಸಾರ್ಥಕ ಶಿಕ್ಷಕತ್ವ ಮೆರೆದ ಶೈಲಜಾ ಕುಲಕರ್ಣಿ, ಸೋಮಶೇಖರ ಹರ್ತಿ, ದೇವರಡ್ಡಿ ಬಿ, ರವಿ ಪತ್ತಾರ, ಮಹಿಮುದಾ ಬೇಗಂ, ಮಂಗಳೇಶಪ್ಪ ಗಾಣಿಗೇರ, ಶೇಖರಗೌಡ ಪೊಲೀಸ್‌ಪಾಟೀಲ್, ಸುವರ್ಣಾ ಚಿಗರಿ, ಶೋಭಾ ಜೆ, ರೇಣುಕಾ ಮಣ್ಣೂರ, ಕೃಷ್ಣಮೂರ್ತಿ ಭಟ್, ಬಸವರಾಜ ಸಾರಂಗಮಠ, ರವಿ ಮಾಳಗಿ ಮುಂತಾದವರಿಗೆ ರನ್ನ ದೀವಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ನ್ಯಾಷನಲ್ ಶಾಲೆಯ ಗುರುರಾಜ ಅಗಳಿ, ಸಾಹಿತಿ ಶಾರದಾ ಶ್ರಾವಣಸಿಂಗ್ ರಜಪೂತ, ಸಂಶೋಧಕ ಸಿದ್ಲಿಂಗಪ್ಪ ಕೊಟ್ನೆಕಲ್, ಶಿಶು ಸಾಹಿತಿ ಶ್ರೀನಿವಾಸ ಚಿತ್ರಗಾರ, ಮುಖ್ಯಶಿಕ್ಷಕ ಕಲ್ಪನಾ ವಿಜಯಕುಮಾರ, ಮಹೇಶ ಬಳ್ಳಾರಿ, ಸುನಿತಾ ವಾದಿರಾಜ ಪಾಟೀಲ, ಹನುಮವ್ವ ಪೊಲೀಸ್‌ಪಾಟೀಲ್, ಪರಸಪ್ಪ ನಡುಲರ, ಗಣೇಶ ಚಿತ್ರಗಾರ, ಶ್ವೇತಾ ರಂಜಪಲ್ಲಿ ಅವ್ವನ ಬುತ್ತಿ ಸಂಕಲನದ ಆಯ್ದ ಕವನ ವಾಚಿಸಿದರು.

Share this article