ಕನ್ನಡಪ್ರಭ ವಾರ್ತೆ ಬೆಳಗಾವಿ
ಸಂಕೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ರಾಷ್ಟ್ರೀಯ ಹೆದ್ದಾರಿಯಲ್ಲಿ ಈಚೆಗೆ ನಡೆದ ಚಿನ್ನದ ವ್ಯಾಪಾರಿಯ ರಾಬರಿ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. ಈ ಪ್ರಕರಣದ ಶಂಕಿತ ವ್ಯಕ್ತಿಗಳೇ ಬೇರೆಯಾಗಿದ್ದು, ಈ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷಾಧಿಕಾರಿ ಡಾ.ಭೀಮಾಶಂಕರ ಗುಳೇದ ತಿಳಿಸಿದ್ದಾರೆ.ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಜಿಲ್ಲೆಯ ನವನೀತಕುಮಾರ ಶಹಾಜಿ (35) ಮತ್ತು ಸೂರಜ್ ಯಶವಂತ ಸಸ್ತೆ ( 25) ಬಂಧಿತರು. ಅವರಿಂದ ₹1.17 ಕೋಟಿ ಹಣ ಜಪ್ತಿ ಮಾಡಲಾಗಿದೆ. ಈ ಇಬ್ಬರೂ ಆರೋಪಿಗಳು ಹಣ ತೆಗೆದುಕೊಂಡು ಪರಾರಿಯಾಗಿದ್ದರು. ಸಾಂಗ್ಲಿಯಲ್ಲಿ ₹14 ಲಕ್ಷ ಹಣವನ್ನು ಗೋದಾಮಿನಲ್ಲಿ ಇಟ್ಟು ಹೋಗಿದ್ದಾರೆ ಎಂದು ಮಾಹಿತಿ ನೀಡಿದರು.
ಕಾರಿನಲ್ಲಿ ಹಣ ಸಿಕ್ಕಿದ್ದರಿಂದ ಮೊದಲು ಆರೀಫ್, ಸೂರಜ್ ಮತ್ತು ಅಜಯ ಎಂಬುವವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು. ವಿಚಾರಣೆ ವೇಳೆ ಇವರಿಗೂ ಪ್ರಕರಣಕ್ಕೂ ಸಂಬಂಧ ಇಲ್ಲೆ ಎಂಬುದು ಖಾತ್ರಿಯಾಗಿದ್ದು, ಬೇರೆ ತಂಡ ಮಾಡಿರುವುದು ಬೆಳಕಿಗೆ ಬಂದಿದೆ.ಪ್ರಕರಣದ ಹಿನ್ನೆಲೆ?
ನ.17ರಂದು ಕೇರಳ ಮೂಲದ ಚಿನ್ನದ ವ್ಯಾಪಾರಿ ಕೊಲ್ಲಾಪುರ ಪರಿಚಯದ ವ್ಯಕ್ತಿಯೊಬ್ಬರಿಗೆ ಚಿನ್ನ ಕೊಟ್ಟು ₹75 ಲಕ್ಷ ಹಣದೊಂದಿಗೆ ರಾಷ್ಟ್ರೀಯ ಹೆದ್ದಾರಿ-4ರ ಮೂಲಕ ಕೇರಳಕ್ಕೆ ಮರಳುತ್ತಿದ್ದಾಗ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹರಗಾಪುರ ಬಳಿ ಮುಖಕ್ಕೆ ಬಟ್ಟೆ ಧರಿಸಿದ್ದ ವ್ಯಕ್ತಿಗಳು ಗನ್ ತೋರಿಸಿ ₹75 ಲಕ್ಷ ದೋಚಿಕೊಂಡು ಪರಾರಿಯಾಗಿದ್ದರು ಎಂದು ಸುದ್ದಿಯಾಗಿತ್ತು. ವ್ಯಾಪಾರಿಯ ಕಾರು ಕಮತನೂರು ನೇರ್ಲಿ ಬಳಿ ಸಿಕ್ಕಿದ್ದು, ಈ ವಾಹನದಲ್ಲಿ ₹1 ಕೋಟಿ ಹಣ ಸಿಕ್ಕಿದ್ದರಿಂದ ಆರೀಫ್, ಸೂರಜ್ ಮತ್ತು ಅಜಯ ಎಂಬುವವರನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ಇದರಲ್ಲಿ ವ್ಯಾಪಾರಿ ಇರಲಿಲ್ಲ ಅವನ ಸ್ನೇಹಿತರು ಹಣ ತೆಗೆದುಕೊಂಡು ಹೋಗುತ್ತಿದ್ದರು. ದರೋಡೆ ಮಾಡಲಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿ ಹಣ ದೋಚಿದ್ದರು ಎಂದು ಅವರನ್ನು ಬಂಧಿಸಿದ್ದ ಪೊಲೀಸರು ತಿಳಿಸಿದ್ದರು.ಆದರೆ ಅವರ ವಿಚಾರಣೆ ಬಳಿಕ ಪ್ರಕರಣಕ್ಕೆ ಮತ್ತೊಂದು ತಿರುವು ಪಡೆದಿದ್ದು, ದರೋಡೆ ಪ್ರಕರಣಕ್ಕೂ ವಶಕ್ಕೆ ಪಡೆದ ಈ ಮೂವರಿಗೂ ಸಂಬಂಧ ಇಲ್ಲ ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ. ಮತ್ತೆ ಪೊಲೀಸರು ತನಿಖೆಗೆ ಇಳಿದಾಗ ಈ ಮಾರ್ಗದಲ್ಲಿಯೇ ಮತ್ತೊಂದು ಎರ್ಟಿಗಾ ಕಾರು ಹೋಗಿರುವುದು ಪತ್ತೆಯಾಗಿದೆ. ಪ್ರಕರಣದ ತನಿಖೆಗೆ ರಚಿಸಿದ್ದ ತಂಡ ಎಟ್ರಿಗಾ ಜಾಡು ಹಿಡಿದು ಮಹಾರಾಷ್ಟ್ರಕ್ಕೆ ಹೋಗಿ ವಾಹನ ಪತ್ತೆ ಹಚ್ಚಿದೆ. ಎರ್ಟಿಗಾ ಕಾರಿನ ನಂಬರ್ ಕೂಡ ನಕಲಿಯಾಗಿತ್ತು. ಆದರೆ, ಕಾರಿನ ಕಲರ್ ಮತ್ತು ನಂಬರ್ ಆಧಾರಿಸಿ ಪತ್ತೆ ಮಾಡಿ ಇಬ್ಬರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.