ರಾಜ್ಯದಲ್ಲಿ ಅಕಾಲಿಕ ಮಳೆಗೆ ಮತ್ತೊಂದು ಬಲಿ-9 ಜಿಲ್ಲೆಗಳ ವ್ಯಾಪ್ತಿಯಲ್ಲಿ ಮಳೆ

KannadaprabhaNewsNetwork |  
Published : Mar 26, 2026, 02:00 AM IST
Rain

ಸಾರಾಂಶ

  ಅಕಾಲಿಕ ಮಳೆಯ ಅಬ್ಬರ ಮುಂದುವರಿದಿದ್ದು, ಬುಧವಾರ 9 ಜಿಲ್ಲೆಗಳ ವ್ಯಾಪ್ತಿಯಲ್ಲಿ ಮಳೆಯಾಗಿದೆ. ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಶಾದಿಪುರ ಗ್ರಾಮ ಸಮೀಪದ ಧನಸಿಂಗ್ ನಾಯಕ ತಾಂಡಾದಲ್ಲಿ ಸಿಡಿಲು ಬಡಿದು ಮಹೇಶ ಕಿಶನ್ ಚವ್ಹಾಣ ಮೃತಪಟ್ಟಿದ್ದಾರೆ. ಹೊಲದಲ್ಲಿ ಕೆಲಸ ಮಾಡುವ ವೇಳೆ ಸಿಡಿಲು ಬಡಿಯಿತು

  ಬೆಂಗಳೂರು :  ರಾಜ್ಯದಲ್ಲಿ ಅಕಾಲಿಕ ಮಳೆಯ ಅಬ್ಬರ ಮುಂದುವರಿದಿದ್ದು, ಬುಧವಾರ 9 ಜಿಲ್ಲೆಗಳ ವ್ಯಾಪ್ತಿಯಲ್ಲಿ ಮಳೆಯಾಗಿದೆ.

ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಶಾದಿಪುರ ಗ್ರಾಮ ಸಮೀಪದ ಧನಸಿಂಗ್ ನಾಯಕ ತಾಂಡಾದಲ್ಲಿ ಸಿಡಿಲು ಬಡಿದು ಮಹೇಶ ಕಿಶನ್ ಚವ್ಹಾಣ (22) ಮೃತಪಟ್ಟಿದ್ದಾರೆ. ಹೊಲದಲ್ಲಿ ಕೆಲಸ ಮಾಡುವ ವೇಳೆ ಸಿಡಿಲು ಬಡಿಯಿತು.ಚಿಂಚೋಳಿ ತಾಲೂಕಿನ ಹಲವೆಡೆ ಗುಡುಗು, ಮಿಂಚು, ಸಿಡಿಲು ಸಹಿತ ಆಲಿಕಲ್ಲು ಮಳೆಯಾಗಿದೆ. ಧಾರವಾಡದಲ್ಲಿ ಸಂಜೆ 6ರ ಸುಮಾರಿಗೆ ವಿಪರೀತ ಗಾಳಿಯೊಂದಿಗೆ ಮಳೆ ಸುರಿದಿದ್ದು, ನೂರಾರು ಮರಗಳು ಧರೆಗುರುಳಿವೆ. ನಗರದ ಉಪ ನಗರ ಪೊಲೀಸ್‌ ಠಾಣೆ ಎದುರು, ಅರಣ್ಯ ಇಲಾಖೆ ಆವರಣದಲ್ಲಿ, ಸಾಧನಕೇರಿಯಲ್ಲಿ ಮರಗಳು ಬಿದ್ದು ಕಾರುಗಳು ಜಖಂ ಆಗಿವೆ. ನಾರಾಯಣಪುರ-ಜಿಮಖಾನ್‌ ಎದುರಿನ ರಸ್ತೆ ಕೆಲ ಕಾಲ ಬಂದ್‌ ಆಗಿತ್ತು.

ಭಾರಿ ಮಳೆ

ಗದಗ ಜಿಲ್ಲೆಯ ನರಗುಂದ, ಡಂಬಳ, ಮುಳಗುಂದ, ಮುಂಡರಗಿ ತಾಲೂಕಿನಲ್ಲಿ ಭಾರಿ ಮಳೆಯಾಗಿದ್ದು, ಮುಂಡರಗಿ ತಾಲೂಕಿನ ದಿಂಡೂರ ತಾಂಡಾದಲ್ಲಿ ಸುರಿದ ಭಾರಿ ಮಳೆ-ಗಾಳಿಗೆ ಮೂರು ಮನೆಗಳ ಛಾವಣಿಗಳು ಹಾರಿ ಹೋಗಿವೆ.

ಶಿವಮೊಗ್ಗ ಜಿಲ್ಲೆ ರಿಪ್ಪನ್ ಪೇಟೆ ಸಮೀಪದ ಬಾಳೂರಿನಲ್ಲಿ ಚಲಿಸುತ್ತಿದ್ದ ಬೈಕ್ ಮೇಲೆ ಏಕಾಏಕಿ ಮರ ಉರುಳಿದ ಪರಿಣಾಮ ಸವಾರ ನೇರಲಮನೆ ಗ್ರಾಮದ ಚಂದ್ರಶೇಖರ್ (53) ಎಂಬುವರು ಗಾಯಗೊಂಡಿದ್ದಾರೆ. ಪಟ್ಟಣದಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಭಾರೀ ಮಳೆಯಾಗಿದ್ದು, ಹಲವು ಕಡೆ ಮರಗಳು ಉರುಳಿ, ವಿದ್ಯುತ್ ವ್ಯತ್ಯಯ ಉಂಟಾಗಿತ್ತು.

ಬಿರುಗಾಳಿ ಸಹಿತ ಆಲಿಕಲ್ಲು ಮಳೆ

ವಿಜಯಪುರ ಜಿಲ್ಲೆಯ ತಿಕೋಟಾದಲ್ಲಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಾಗಿದ್ದು, ಲಕ್ಷಾಂತರ ರು. ಮೌಲ್ಯದ ದ್ರಾಕ್ಷಿ ಹಾಳಾಗಿದೆ. ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಮಾಸಣಗಿ ಗ್ರಾಮದ ಸುತ್ತಮುತ್ತ ದೊಡ್ಡಗಾತ್ರದ ಮಂಜಿನ ಗಡ್ಡೆಗಳು ಕೃಷಿಭೂಮಿಗಳಲ್ಲಿ ಬಿದ್ದಿದ್ದು, ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ. ಅಲ್ಲಲ್ಲಿ ವಿದ್ಯುತ್ ಕಂಬಗಳು ಧರೆಗುರುಳಿದ್ದು, ಜನ ಕತ್ತಲಲ್ಲಿ ಬದುಕುವಂತಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ನೀಟ್ ರದ್ದಾಗಿದ್ದಕ್ಕೆ ಜೀವ ಕಳಕೊಂಡ ವಿದ್ಯಾರ್ಥಿನಿ ಪಿಯುಸಿಯಲ್ಲೇ ಫೇಲ್ !
ಹೆಣ ಹುಡುಕಿಕೊಂಡು ಹೋದ ಖಾಕಿಗೆ ಸಿಕ್ಕಿದ್ದು ಸತ್ತ ಹೆಗ್ಗಣ!