ಹೂವಿನಹಡಗಲಿ: ತುಂಗಭದ್ರಾ ನದಿಯ ತುಂಬೆಲ್ಲ ಅಂತರ ಗಂಗೆ ಎಂಬ ಸಸ್ಯ ನದಿಯನ್ನು ಸಂಪೂರ್ಣ ಆವರಿಸಿದೆ. ಇದರಿಂದ ಮೀನುಗಾರರಿಗೆ ಅಡ್ಡಿಯಾಗಿ ಅಪಾರ ನಷ್ಟ ಅನುಭವಿಸುವಂತಾಗಿದೆ.
ತಾಲೂಕಿನಲ್ಲಿ 600ಕ್ಕೂ ಹೆಚ್ಚು ಮೀನುಗಾರರಿದ್ದಾರೆ. ನಿತ್ಯ ಮೀನು ಬೇಟೆಯಾಡಿ ಜೀವನ ಸಾಗಿಸುತ್ತಿದ್ದಾರೆ. ಆದರೆ ಕಳೆದೊಂದು ವಾರದಿಂದ ನದಿಯಲ್ಲಿ ಅಂತರ ಗಂಗೆ ಆವರಿಸಿದ್ದರಿಂದ, ನಿತ್ಯ 10 ಕ್ವಿಂಟಲ್ ಮೀನು ನಷ್ಟವಾಗುತ್ತಿದೆ. ಅಂತರ ಗಂಗೆ ಸಸ್ಯ ಮೀನುಗಾರರ ಬದುಕು ನುಂಗಿ ಹಾಕಿದೆ. ಜೀವನ ಸಾಗಿಸುವುದೇ ಕಷ್ಟಕರವಾಗಿದೆ ಎನ್ನುತ್ತಾರೆ ಮಾಗಳದ ಆರ್.ಪಿ.ನಾಗರಾಜ.
ನದಿಯಲ್ಲಿ ಅಂತರ ಗಂಗೆ ಇರುವ ಕಾರಣ ನದಿಯಲ್ಲಿನ ನೀರು ಕಲುಷಿತವಾಗುತ್ತಿದೆ. ಜನ ನದಿಯಲ್ಲಿ ಸ್ನಾನ ಮಾಡಿದರೆ ಮೈ ತುಂಬ ತುರಿಕೆ ಹಾಗೂ ಚರ್ಮ ಕಾಯಿಲೆಗಳು ಬರುತ್ತಿವೆ. ಜತೆಗೆ ನೀರು ಕೂಡ ಸಾಕಷ್ಟು ಕಲುಷಿತವಾಗುತ್ತಿದೆ. ತಾಲೂಕಿನ ಕೆಲ ಬಹುಗ್ರಾಮ ಕುಡಿವ ನೀರಿನ ಯೋಜನೆಗಳ ಜಾಕ್‌ವೆಲ್‌ಗಳನ್ನು ಅಂತರಗಂಗೆ ಸುತ್ತುವರಿದಿದೆ. ಕಲುಷಿತ ನೀರೇ ಪೂರೈಕೆಯಾಗುತ್ತಿದೆ. ಜಾಕ್‌ವೆಲ್ ಬಳಿಯಲ್ಲಿನ ಅಂತರಗಂಗೆ ತೆರವು ಮಾಡಬೇಕೆಂದು ಮಾಗಳ ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.