)
ಸೋಮರಡ್ಡಿ ಅಳವಂಡಿ ಕೊಪ್ಪಳ
ರಸಗೊಬ್ಬರ ತಯಾರಿಕೆಗೆ ಅದರಲ್ಲೂ ಯುರಿಯಾ ಮತ್ತು ಡಿಎಪಿ ತಯಾರಿಕೆಗೆ ಕಚ್ಚಾ ಸಾಮಗ್ರಿ ವಿದೇಶದಿಂದಲೇ ಆಮದು ಮಾಡಿಕೊಳ್ಳುತ್ತಿರುವುದರಿಂದ ಈಗಿನಿಂದಲೇ ಮುಂಗಾರು ಹಂಗಾಮಿಗೆ ರಸಗೊಬ್ಬರ ಪೂರೈಕೆ ನಿಭಾಯಿಸಲು ರಾಜ್ಯ ಸರ್ಕಾರ ಮಾರ್ಗಸೂಚಿ ಹೊರಡಿಸಿ, ವಿಶೇಷ ನಿಗಾ ವಹಿಸುವಂತೆ ಜಿಲ್ಲಾಧಿಕಾರಿ, ಕೃಷಿ ಅಧಿಕಾರಿಗಳಿಗೆ ಕೃಷಿ ಇಲಾಖೆಯ ಸರ್ಕಾರದ ಪ್ರಧಾನಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ ಪತ್ರ ಬರೆದಿದ್ದಾರೆ.
ಪತ್ರದಲ್ಲೇನಿದೆ?ಪ್ರಸಕ್ತ ಇರಾನ್ ಸೇರಿದಂತೆ ನಾನಾ ದೇಶಗಳಲ್ಲಿ ಯುದ್ಧ ನಡೆಯುತ್ತಿರುವುದರಿಂದ ರಸಗೊಬ್ಬರಗಳ ಉತ್ಪಾದನೆಗೆ ಬಳಕೆ ಮಾಡುವ ಕಚ್ಚಾ ಸಾಮಗ್ರಿಯ ಆಮದಿನಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ಹೀಗಾಗಿ, ತುರ್ತಾಗಿ ಈಗಿನಿಂದಲೇ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.
ಹಂಗಾಮಿನಲ್ಲಿ ತೀವ್ರ ಬೇಡಿಕೆ ಈಡೇರಿಸುವುದಕ್ಕಾಗಿ ಈಗಾಗಲೇ ಪೂರೈಕೆಯಾಗಿರುವುದನ್ನು ಶೇ.25ರಷ್ಟು ಕಾಪು ದಾಸ್ತಾನು ಮಾಡಿಕೊಳ್ಳಬೇಕು ಮತ್ತು ತಯಾರಿಕಾ ಸಂಸ್ಥೆಗಳ ಜತೆ ಸಭೆ ನಡೆಸಬೇಕು. ಯುರಿಯಾ ರಸಗೊಬ್ಬರಕ್ಕೆ ಅತೀ ಹೆಚ್ಚಿನ ಸಬ್ಸಿಡಿ ನೀಡುತ್ತದೆ. ಇದರ ದುರುಪಯೋಗವಾಗುವುದನ್ನು ತಡೆಯಲು ಟಾಪ್ ಬಳಕೆದಾರರು ಮತ್ತು ಮಾರಾಟಗಾರರ ಮೇಲೆ ನಿಗಾ ಇರಿಸಲು ಸೂಚಿಸಲಾಗಿದೆ.
ಯುದ್ಧದಿಂದ ಯುರಿಯಾ ಮತ್ತು ಡಿಎಪಿ ಸೇರಿದಂತೆ ರಸಗೊಬ್ಬರ ಅಭಾವ ಆಗುವ ಸಾಧ್ಯತೆ ಇದೆ. ಈಗಿನಿಂದಲೇ ಇದರ ಮೇಲೆ ನಿಗಾ ಇರಿಸಿ ಮುಂದೆ ಆಗುವ ತೊಂದರೆಗೆ ಈಗಿನಿಂದಲೇ ಪರಿಹಾರ ಕಂಡುಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ.
ನ್ಯಾನೋಬಳಕೆಗೆ ಜಾಗೃತಿ: ದೇಶಿಯವಾಗಿಯೇ ಉತ್ಪಾದನೆಯಾಗುವ ನ್ಯಾನೋ ಡಿಎಪಿ ಮತ್ತು ಯುರಿಯಾ ರಸೊಬ್ಬರ ಬಳಕೆ ಮಾಡುವಂತೆ ರೈತರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಕೃಷಿ ಇಲಾಖೆಯ ಅಧಿಕಾರಿಗಳು ಈ ದಿಸೆಯಲ್ಲಿ ಸಭೆ ನಡೆಸುತ್ತಿದ್ದಾರೆ.ಮುಂದೆ ಆಗಬಹುದಾದ ಸಮಸ್ಯೆ ಮುನ್ನೆಚ್ಚರಿಕೆಯಿಂದ ಈಗಿನಿಂದಲೇ ನಿಗಾವಹಿಸುವ ದಿಸೆಯಲ್ಲಿ ಸಭೆ ಮಾಡಲಾಗುತ್ತಿದೆ. ದ್ರವರೂಪದ ಯುರಿಯಾ ಮತ್ತು ಡಿಎಪಿ ಬಳಕೆಗೆ ಹೆಚ್ಚಿನ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಕೊಪ್ಪಳ ಕೃಷಿ ಇಲಾಖೆ ಜೆಡಿ ಕೃಷ್ಣಮೂರ್ತಿ ಜಿ.ಡಿ ತಿಳಿಸಿದ್ದಾರೆ.