ಸಿಂಗಟಾಲೂರು ಬ್ಯಾರೇಜ್‌ ಹಿನ್ನೀರು ಆವರಿಸಿದ ಅಂತರಗಂಗೆ

KannadaprabhaNewsNetwork |  
Published : Apr 18, 2026, 02:30 AM IST
ಹೂವಿನಹಡಗಲಿ ತಾಲೂಕಿನ ಸಿಂಗಟಾಲೂರು ಏತ ನೀರಾವರಿ ಬ್ಯಾರೇಜ್‌ ಹಿನ್ನೀರಿನ ತುಂಬೆಲ್ಲಾ ಅಂತರಗಂಗೆ ಆವರಿಸಿರುವುದು. | Kannada Prabha

ಸಾರಾಂಶ

ಅಂತರಗಂಗೆ ಎಂಬ ರಕ್ತಬೀಜಾಸುರ ಸಸ್ಯವು ಸಿಂಗಟಾಲೂರು ಬ್ಯಾರೇಜ್‌ ಹಿನ್ನೀರಿನಲ್ಲಿ ಎಲ್ಲಿ ನೋಡಿದರೂ ನೀರು ಕಾಣದಷ್ಟು ಆವರಿಸಿಕೊಂಡಿದೆ.

ಚಂದ್ರು ಕೊಂಚಿಗೇರಿ

ಹೂವಿನಹಡಗಲಿ: ಅಂತರಗಂಗೆ ಎಂಬ ರಕ್ತಬೀಜಾಸುರ ಸಸ್ಯವು ಸಿಂಗಟಾಲೂರು ಬ್ಯಾರೇಜ್‌ ಹಿನ್ನೀರಿನಲ್ಲಿ ಎಲ್ಲಿ ನೋಡಿದರೂ ನೀರು ಕಾಣದಷ್ಟು ಆವರಿಸಿಕೊಂಡಿದೆ.

ಇಲ್ಲಿನ ತುಂಗಭದ್ರಾ ನದಿ ನೀರಿನ ತುಂಬೆಲ್ಲ ಈ ನೀರಿನ ಕಳೆ ಸಸ್ಯ ಅಂತರಗಂಗೆ ಆವರಿಸಿದೆ. ಮೊದಲು ಸ್ವಲ್ಪ ಪ್ರಮಾಣದಲ್ಲಿದ್ದ ಈ ಸಸ್ಯ ಒಂದೇ ತಿಂಗಳಲ್ಲಿ ತನ್ನ ವ್ಯಾಪ್ತಿಯನ್ನು ಶೇ. 80ರಿಂದ ಶೇ. 100ರಷ್ಟು ಹೆಚ್ಚಿಸಿಕೊಂಡಿದೆ. ಈ ಕಳೆ ಸಸ್ಯ ಅನುಕೂಲಕ್ಕಿಂತ ಅನನುಕೂಲಗಳೇ ಹೆಚ್ಚು. ಶುದ್ಧ ನೀರನ್ನು ಮಲಿನ ಮಾಡುವ ಈ ಸಸ್ಯ, ನೀಲಿ ಮಿಶ್ರಿತ ಗುಲಾಬಿ ಬಣ್ಣದ ಹೂಗಳನ್ನು ಬಿಡುತ್ತದೆ. ಲಕ್ಷಾಂತರ ಬೀಜಗಳನ್ನು ನದಿಯ ಒಡಲಿಗೆ ಸೇರಿಸುತ್ತದೆ. ಈ ಸಸ್ಯ ನೀರಿನ ಮೇಲೆ ತೇಲುತ್ತಾ, ಸೂರ್ಯನ ಬಿಸಿಲು, ನೀರಿಗೆ ಬೀಳದಂತೆ ತಡೆಯುತ್ತದೆ. ನೀರಿನಲ್ಲಿರುವ ಪಾಚಿ, ಮತ್ತಿತರ ನೀರಿನಲ್ಲಿ ಮುಳುಗಿರುವ ಜಲಚರ ಸಸ್ಯಗಳ ದ್ಯುತಿ ಸಂಶ್ಲೇಷಣ ಕ್ರಿಯೆಗೆ ತೊಡಕಾಗಿದೆ. ನೀರಿನಲ್ಲಿ ಆಮ್ಲಜನಕದ ಅಭಾವದಿಂದ ನೖೆಸರ್ಗಿಕವಾದ ನೀರಿನ ಗುಣಮಟ್ಟ ಕ್ಷೀಣಿಸುತ್ತದೆ.

ಮೀನುಗಳ ಜೀವಕ್ಕೆ ಸಂಚಕಾರ ತರುತ್ತದೆ. ಈ ಹಿನ್ನೀರಿನಲ್ಲಿ ಅಳಿವಿನ ಅಂಚಿನಲ್ಲಿರುವ, ಅಮೂಲ್ಯವಾದ ನೀರುನಾಯಿಗಳ ಜೀವಕ್ಕೆ ಕುತ್ತು ಎದುರಾಗಿದೆ. ಈ ಸಸ್ಯದ ಹಾವಳಿಯಿಂದ ಮೀನುಗಾರರ ತೆಪ್ಪಗಳಿಗೆ ತೊಡಕಾಗಿ, ಅವರ ಉಪ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಹಿನ್ನೀರಿನಲ್ಲಿ ಬೀಡು ಬಿಟ್ಟಿದ್ದ ಜಲಚರ ಪಕ್ಷಿಗಳಾದ ವರಟೆ (ಸ್ಪಾಟೆಡ್ ಬಿಲ್ಡ್ ಡಕ್) ಲೆಸ್ಸರ್ ವೆಸ್ಲಿಂಗ್ ಬಾತುಕೋಳಿಗಳು ಬೇರೆ ಕಡೆ ವಲಸೆ ಹೋಗಿವೆ.

ಈ ಸಸ್ಯ ನೀರಿನ ಮೇಲ್ಭಾಗದಲ್ಲಿ ಎರಡು ಅಡಿಗಳಷ್ಟು ಬೆಳೆಯುತ್ತದೆ. ಸ್ಪಂಜಿನಂತಿರುವ ಒಂದು ಗಡ್ಡೆಯು ನೀರಿನಲ್ಲಿದ್ದು, ಇಡೀ ಗಿಡ ತೇಲುವಂತೆ ಮಾಡುತ್ತದೆ. ನೀರಿನಲ್ಲಿ ಬೇರುಗಳು ಎರಡು ಅಡಿಯಷ್ಟು ಹರಡಿಕೊಂಡಿರುತ್ತದೆ. ಕೋಟಿಗಟ್ಟಲೇ ಸಂಖ್ಯೆಯಲ್ಲಿರುವ ಈ ಸಸ್ಯ ತನ್ನ ಜೀವಿತಾವಧಿ ಮುಗಿದ ನಂತರ ಕೊಳೆತು, ನೀರನ್ನು ಇನ್ನೂ ಮಲಿನ ಮಾಡುತ್ತದೆ. ಕೊಳೆತ ಸಸ್ಯ ನೀರಿನ ತಳಭಾಗದಲ್ಲಿ ಶೇಖರಣೆಗೊಂಡು ಹೂಳಾಗಿ ಪರಿವರ್ತನೆಯಾಗುತ್ತದೆ. ಇದರಿಂದ ಬ್ಯಾರೇಜ್‌ ನೀರು ಶೇಖರಣಾ ಸಾಮರ್ಥ್ಯ ಕುಂಠಿತವಾಗುತ್ತದೆ. ಈ ಹಿನ್ನೀರು ಹೂವಿನಹಡಗಲಿ, ಗದಗ, ಲಕ್ಷ್ಮೇಶ್ವರ, ಶಿರಹಟ್ಟಿ ತಾಲೂಕಿನ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಂದ ನೀರು ಸರಬರಾಜು ಆಗುತ್ತಿದೆ.

ಅಂತರಗಂಗೆಯ ಮೂಲ ದಕ್ಷಿಣ ಅಮೆರಿಕದ ಅಮೆಜಾನ್ ಕಾಡು. ಅಲ್ಲಿಂದ ಅಮೆರಿಕದ ಪ್ಲೋರಿಡಾಗೆ ವ್ಯಾಪಿಸಿ, ಈಗ ವಿಶ್ವವ್ಯಾಪಿ ಭಸ್ಮಾಸುರನಂತೆ ಬೆಳೆದಿದೆ. ಪಶ್ಚಿಮ ಬಂಗಾಳದಲ್ಲಿ ಇದು ಮಾಡಿದ ಆವಾಂತರ ಅಷ್ಟಿಷ್ಟಲ್ಲ. ಇದನ್ನು ದಿ ಟೆರರ್ ಆಫ್‌ ಬೆಂಗಾಲ್ ಎಂದು ಕರೆಯುತ್ತಾರೆ.

ತುಂಗಭದ್ರಾ ನದಿಯಲ್ಲಿ ಅಳವಿನಂಚಿನಲ್ಲಿರುವ ನೀರುನಾಯಿಗಳಿವೆ. ವಿದೇಶದಿಂದ ಸಂತಾನೋತ್ಪತ್ತಿಗೆಂದು ಬರುವ ಹಕ್ಕಿಗಳ ವಾಸಸ್ಥಾನವಾಗಿದೆ. ಈ ಬ್ಯಾರೇಜ್‌ ಹಿನ್ನೀರಿನಲ್ಲಿ ಅಂತರಗಂಗೆ ಸಸ್ಯ ಸಾಕಷ್ಟು ಸಮಸ್ಯೆಗಳನ್ನು ಸೃಷ್ಟಿಸಿದೆ. ಸ್ವಚ್ಛತೆಗೆ ಗಮನ ಹರಿಸಬೇಕಿದೆ ಎನ್ನುತ್ತಾರೆ ಅಲ್ಲಿಪುರದ ಪಕ್ಷಿತಜ್ಞ ಸೋಮೇಶಪ್ಪ.

ನದಿ ನೀರಿನಲ್ಲಿ ಆವರಿಸಿಕೊಂಡ ಈ ಅಂತರಗಂಗೆ ಸಸ್ಯದಿಂದ ಕುಡಿಯುವ ನೀರು ಕಲುಷಿತಗೊಳ್ಳುವ ಜತೆಗೆ ದುರ್ನಾತ ಬೀರುತ್ತದೆ. ಇಂತಹ ನೀರನ್ನು ಜನ-ಜಾನುವಾರುಗಳು ಕುಡಿಯುತ್ತವೆ. ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಮೊದಲೇ ಸ್ವಚ್ಛತೆಗೆ ಕ್ರಮ ಕೈಗೊಳ್ಳಲಿ ಎನ್ನುತ್ತಾರೆ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಶಿವರಾಜ ಹೊಳಗುಂದಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಮ್ಮೆಮಾಡು ಮಖಾಂ ಉರೂಸ್‌ಗೆ ಚಾಲನೆ
ಕಾರು-ಬೈಕ್‌ ಡಿಕ್ಕಿ: ಸವಾರ ಸಾವು