ಸಂಗೀತ, ನಾಟಕ, ಸಾಹಿತ್ಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಕಲಾವಿದರ ಅಗತ್ಯವಿದೆ.
ಹೊಸಪೇಟೆ: ಸಮಾಜದಲ್ಲಿ ಕಲೆಯನ್ನು ರಕ್ಷಿಸುವ ಪ್ರಜ್ಞೆ ಬೆಳೆಯಬೇಕು ಎಂದು ಹಿರಿಯ ಕಲಾವಿದರು ಹಾಗೂ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಬಿ. ಮಾರುತಿ ಹೇಳಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯ, ಹಂಪಿಯ ದೃಶ್ಯಕಲಾ ವಿಭಾಗದ ವತಿಯಿಂದ ವಿಶ್ವಕಲಾ ದಿನಾಚರಣೆ ಪ್ರಯುಕ್ತ ಸೃಜನೋತ್ಸವ-2026ರ ಅಂಗವಾಗಿ ಚಿತ್ರಕಲಾ ಪ್ರದರ್ಶನ ಹಾಗೂ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂಗೀತ, ನಾಟಕ, ಸಾಹಿತ್ಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಕಲಾವಿದರ ಅಗತ್ಯವಿದೆ. ಕಲಾ ಕ್ಷೇತ್ರದಲ್ಲಿ ಭಾಷೆ, ಜಾತಿ, ಧರ್ಮ ಅಥವಾ ವರ್ಣಭೇದಕ್ಕೆ ಯಾವುದೇ ಸ್ಥಾನವಿಲ್ಲ. ಆದರೆ ಹಲವಾರು ಕಲಾವಿದರಲ್ಲಿ ಇನ್ನೂ ಸಂಕುಚಿತ ಮನೋಭಾವವಿದ್ದು, ಅದರಿಂದ ಹೊರಬರಬೇಕಾಗಿದೆ ಎಂದು ಅವರು ಸಲಹೆ ನೀಡಿದರು.
ವಿದೇಶದಲ್ಲಿ ಕಲಾವಿದರನ್ನು ಗುರುತಿಸುವ ರೀತಿ ನಮ್ಮಲ್ಲಿ ಕಲಾವಿದರನ್ನು ಗುರುತಿಸುತ್ತಿಲ್ಲ. ಮಹಾನ್ ವ್ಯಕ್ತಿಗಳ ಶಿಲ್ಪಗಳನ್ನು ಮಾಡಿಸಿ ಜಾತಿಗೆ ಸೀಮಿತವಾಗಿಸುವ ಸಂಕುಚಿತ ಮನೋಭಾವ ಬೆಳೆಯುತ್ತಿದೆ. ವಿದೇಶಗಳಲ್ಲಿ ಕಲೆ ಹಾಗೂ ಪರಿಸರಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ ಎಂದು ಅವರು ಹೇಳಿದರು.
ಪ್ರತಿಯೊಬ್ಬರು ತಮ್ಮೊಳಗಿನ ಶಕ್ತಿ ಮತ್ತು ಸಾಮರ್ಥ್ಯವನ್ನು ಮೊದಲು ಅರಿತುಕೊಳ್ಳಬೇಕು. ಕಲಾ ಕ್ಷೇತ್ರದಲ್ಲಿ ಅಪಾರ ಅವಕಾಶಗಳಿದ್ದು, ಅವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ಸಮಾಜ ಭಾವನೆ ರಹಿತ ಜೀವನದತ್ತ ಸಾಗುತ್ತಿದೆ. ಆದರೆ ಒಬ್ಬ ಕಲಾವಿದನು ತನ್ನ ಕಲಾಕೃತಿಗಳ ಮೂಲಕ ವ್ಯಕ್ತಿಯ ಮನಸ್ಸಿನಲ್ಲಿ ಮನುಷ್ಯತ್ವ, ಭಾವನೆ ಮತ್ತು ಸಂಬಂಧಗಳ ಅರಿವು ಮೂಡಿಸಬಲ್ಲನು. ಮನುಷ್ಯನನ್ನು ನಿಜವಾದ ಮನುಷ್ಯನನ್ನಾಗಿ ರೂಪಿಸುವುದೇ ನಿಜವಾದ ಕಲೆ ಎಂದು ಅವರು ಹೇಳಿದರು.
ಸೃಜನಶೀಲತೆ ಎನ್ನುವುದು ವೃತ್ತಿ ಬದುಕಿನಲ್ಲಿ ಅಳವಡಿಸಿ ಕೊಂಡರೆ ಕಲಾವಿದನಿಂದ ಹೊರಹೊಮ್ಮುವ ಕಲೆ ಹೊಸತನದಿಂದ ಕೂಡಿರುತ್ತದೆ ಎಂದು ಹೇಳಿದರು.
ಹಿಂದಿನ ಕಾಲದಲ್ಲಿ ಚಿತ್ರಕಲೆ ಸೀಮಿತ ಬಣ್ಣಗಳಲ್ಲಿ ಮೂಡಿಬರುತ್ತಿದ್ದರೆ, ಇಂದಿನ ದಿನಗಳಲ್ಲಿ ಬಣ್ಣಗಳು ಅಪಾರ ಪ್ರಮಾಣದಲ್ಲಿವೆ. ಅವು ಗೊಂದಲವನ್ನುಂಟು ಮಾಡುವ ಮಟ್ಟಿಗೆ ಇವೆ. ನಿಜವಾದ ಕಲಾವಿದನು ಅಮೂರ್ತ ಕಲೆಯಲ್ಲಿ ಪರಿಣತಿ ಸಾಧಿಸಿ, ತನ್ನ ಭಾವನೆಗಳನ್ನು ರೇಖೆ ಮತ್ತು ಬಣ್ಣಗಳ ಮೂಲಕ ಪರಿಣಾಮಕಾರಿಯಾಗಿ ವ್ಯಕ್ತಪಡಿಸಬೇಕು. ಅಮೂರ್ತ ಕಲೆ ವ್ಯಕ್ತಿಯ ಮನಸ್ಸಿನಲ್ಲಿ ಭಾವನೆಗಳನ್ನು ಹುಟ್ಟಿಸುವುದು ಅವನು ಹೊಂದಿರುವ ಸಂಸ್ಕಾರ ಮತ್ತು ಅನುಭವಗಳ ಆಧಾರದ ಮೇಲೆ ನಡೆಯುತ್ತದೆ ಎಂದು ವಿವರಿಸಿದರು.
ಕಲಾವಿದರು ತಮ್ಮದೇ ಚಿತ್ರಕಲೆಯ ಮೊದಲ ವಿಮರ್ಶಕರಾಗಿರಬೇಕು. ಕಲಾವಿದನೊಳಗೆ ಕಲಾ ವಿಮರ್ಶಕನೂ ಬೆಳೆದು ಬರಬೇಕು ಎಂದು ಅವರು ಸಲಹೆ ನೀಡಿದರು.
ದೃಶ್ಯಕಲಾ ವಿಭಾಗದ ಮುಖ್ಯಸ್ಥ ಡಾ.ಮೋಹನ್ ರಾವ್ ಬಿ. ಪಂಚಾಳ ಸ್ವಾಗತ ಮತ್ತು ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಲಸಚಿವ ಡಾ. ವಿರೂಪಾಕ್ಷಿ ಪೂಜಾರಹಳ್ಳಿ, ಕಲಾವಿದ ಚಿಕ್ಕಮಠ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಮಮ್ತಾಜ್. ಪಿ. ರಾಟಿ ನಿರೂಪಿಸಿದರು, ಭೀಮಣ್ಣ ಜಿಂಕೆ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.