ಕಂಪ್ಲಿಯಲ್ಲಿ 24.1 ಮಿ.ಮೀ. ಮಳೆ; ಅಪಾರ ಪ್ರಮಾಣದ ಭತ್ತ, ಬಾಳೆ ಬೆಳೆಗೆ ಹಾನಿ

KannadaprabhaNewsNetwork |  
Published : Apr 18, 2026, 02:30 AM IST
ಕಂಪ್ಲಿ ತಾಲೂಕಿನ ನಂ. 2 ಮುದ್ದಾಪುರ ಗ್ರಾಮದ ತೋಟದಲ್ಲಿ ಮಳೆಗೆ ಹಾನಿಗೊಳಗಾಗಿರುವ ಬಾಳೆ ಬೆಳೆ. | Kannada Prabha

ಸಾರಾಂಶ

ಕಂಪ್ಲಿ ತಾಲೂಕಿನ ಹಲವೆಡೆ ಗುರುವಾರ ರಾತ್ರಿ ಸುರಿದ ಭಾರೀ ಗಾಳಿ-ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.

ಕಂಪ್ಲಿ: ಪಟ್ಟಣ ಸೇರಿದಂತೆ ತಾಲೂಕಿನ ಹಲವೆಡೆ ಗುರುವಾರ ರಾತ್ರಿ ಸುರಿದ ಭಾರೀ ಗಾಳಿ-ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ರೈತರ ಬೆಳೆಗಳಿಗೆ ವ್ಯಾಪಕ ಹಾನಿ ಉಂಟಾಗಿದೆ. ಸುಮಾರು 24.1 ಮಿ.ಮೀ. ಮಳೆ ದಾಖಲಾಗಿದ್ದು, ವಿಶೇಷವಾಗಿ ಭತ್ತ ಮತ್ತು ಬಾಳೆ ಬೆಳೆಗಳಿಗೆ ತೀವ್ರ ಹಾನಿ ಉಂಟಾಗಿರುವುದು ವರದಿಯಾಗಿದೆ.

ತಾಲೂಕಿನ ನಂ.2 ಮುದ್ದಾಪುರ, ಶಂಕರಸಿಂಗ್ ಕ್ಯಾಂಪ್, ಬೊಜ್ಜಯ್ಯ ಕ್ಯಾಂಪ್, ಕೊಂಡಯ್ಯ ಕ್ಯಾಂಪ್, ರಾಮಸಾಗರ ಸೇರಿದಂತೆ ಹಲವೆಡೆ ಗಾಳಿ-ಮಳೆಯಿಂದ ಜಿ-9 ಹಾಗೂ ಯಾಲಕ್ಕಿ ತಳಿಯ ಬಾಳೆ ಗಿಡಗಳು ನೆಲಕ್ಕುರುಳಿವೆ. ಕೆಲವು ರೈತರ ತೋಟಗಳಲ್ಲಿ ಬಹುಪಾಲು ಬಾಳೆ ಬೆಳೆ ಸಂಪೂರ್ಣವಾಗಿ ಹಾನಿಗೊಳಗಾಗಿರುವುದರಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಬೆಳೆ ಹಾನಿಯಿಂದ ಲಕ್ಷಾಂತರ ರುಪಾಯಿ ನಷ್ಟ ಸಂಭವಿಸಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಗಾಳಿ-ಮಳೆಯ ಅಬ್ಬರಕ್ಕೆ ವಿದ್ಯುತ್ ವ್ಯವಸ್ಥೆಯ ಮೇಲೂ ಪರಿಣಾಮ ಬೀರಿದೆ. ದೇವಸಮುದ್ರದಲ್ಲಿ 4 ಹಾಗೂ ಸೋಮಲಾಪುರದಲ್ಲಿ ಮಿಂಚು ಬಡಿದು ಒಂದು ವಿದ್ಯುತ್ ಪರಿವರ್ತಕ ಹಾನಿಗೊಳಗಾಗಿದೆ. ಮರಗಳು ಬಿದ್ದು 2 ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಕಂಪ್ಲಿ ನಗರ ವ್ಯಾಪ್ತಿಯ ಬೆಳಗೋಡ್‌ಹಾಳ್ ಭಾಗದಲ್ಲಿ ನಾಲ್ಕು ಕಂಬಗಳು ಬಿದ್ದಿವೆ. ಒಟ್ಟಾರೆ ಮಿಂಚು ಮತ್ತು ಗಾಳಿಯ ಪರಿಣಾಮವಾಗಿ 6 ವಿದ್ಯುತ್ ಪರಿವರ್ತಕಗಳು ಹಾನಿಗೊಂಡಿದ್ದು, ಕಂಪ್ಲಿ ಗ್ರಾಮೀಣ ಹಾಗೂ ಮೆಟ್ರಿ ಭಾಗಗಳಲ್ಲಿ 21ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಬಿದ್ದಿವೆ.

ಘಟನೆಯ ನಂತರ ಜೆಸ್ಕಾಂ ಅಧಿಕಾರಿಗಳು ತಕ್ಷಣ ಕಾರ್ಯ ಪ್ರವೃತ್ತರಾಗಿ, ಮುರಿದು ಬಿದ್ದ ಕಂಬಗಳನ್ನು ತೆರವುಗೊಳಿಸಿ ಹೊಸ ಕಂಬಗಳನ್ನು ಅಳವಡಿಸುವ ಕಾರ್ಯವನ್ನು ಗುರುವಾರ ರಾತ್ರಿ ಆರಂಭಿಸಿದ್ದಾರೆ. ಈ ಕಾಮಗಾರಿ ಶುಕ್ರವಾರ ಸಂಜೆ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಜೆಸ್ಕಾಂ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಕೆ.ಶ್ರೀನಿವಾಸ ಪ್ರಸಾದ್ ತಿಳಿಸಿದ್ದಾರೆ.

ಈ ಬಗ್ಗೆ ಶಾಸಕ ಜೆ.ಎನ್. ಗಣೇಶ್ ಪ್ರತಿಕ್ರಿಯಿಸಿ, ಗಾಳಿ-ಮಳೆಯಿಂದ ಹಾನಿಗೊಳಗಾದ ಭತ್ತ ಮತ್ತು ಬಾಳೆ ಬೆಳೆ ಪ್ರದೇಶಗಳಿಗೆ ಸಂಬಂಧಿಸಿದಂತೆ ಜಂಟಿ ಸಮೀಕ್ಷೆ ನಡೆಸುವಂತೆ ಕಂದಾಯ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ರೈತರಿಗೆ ಸರ್ಕಾರದ ನಿಯಮಾನುಸಾರ ಸೂಕ್ತ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಮ್ಮೆಮಾಡು ಮಖಾಂ ಉರೂಸ್‌ಗೆ ಚಾಲನೆ
ಕಾರು-ಬೈಕ್‌ ಡಿಕ್ಕಿ: ಸವಾರ ಸಾವು