ರಾಜ್ಯದಲ್ಲಿರುವುದು ಅಭಿವೃದ್ಧಿ ವಿರೋಧಿ ಸರ್ಕಾರ

KannadaprabhaNewsNetwork |  
Published : Oct 16, 2025, 02:00 AM IST
544 | Kannada Prabha

ಸಾರಾಂಶ

ರಾಜ್ಯದಲ್ಲಿ ವಾಡಿಕೆಗಿಂತ ಹೆಚ್ಚಾಗಿ ಸುರಿದ ಮಳೆಯಿಂದಾಗಿ ಮುಂಗಾರು ಬೆಳೆ ಸಂಪೂರ್ಣ ಹಾಳಾಗಿ ರೈತರು ಕಂಗಾಲಾಗಿದ್ದಾರೆ. ಆದರೂ ಸರ್ಕಾರ ಈ ವರೆಗೆ ನಯಾಪೈಸೆ ಪರಿಹಾರ ನೀಡಿಲ್ಲ.

ಹುಬ್ಬಳ್ಳಿ:

ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಮೇಲೆ ಅಭಿವೃದ್ಧಿ ಮರೀಚಿಕೆಯಾಗಿದೆ. ರಾಜ್ಯಾದ್ಯಂತ ಅತಿವೃಷ್ಟಿ ಉಂಟಾಗಿ ರೈತರು ಸಂಕಷ್ಟ ಅನುಭವಿಸುತ್ತಿದ್ದರೂ ಸರ್ಕಾರ ಮಾತ್ರ ಕಣ್ಣೆತ್ತಿ ನೋಡುತ್ತಿಲ್ಲ. ಇದೊಂದು ಅಭಿವೃದ್ಧಿ ವಿರೋಧಿ ಸರ್ಕಾರವಾಗಿದೆ ಎಂದು ವಿಧಾನ ಪರಿಷತ್‌ನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್‌. ರವಿಕುಮಾರ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ವಾಡಿಕೆಗಿಂತ ಹೆಚ್ಚಾಗಿ ಸುರಿದ ಮಳೆಯಿಂದಾಗಿ ಮುಂಗಾರು ಬೆಳೆ ಸಂಪೂರ್ಣ ಹಾಳಾಗಿ ರೈತರು ಕಂಗಾಲಾಗಿದ್ದಾರೆ. ಆದರೂ ಸರ್ಕಾರ ಈ ವರೆಗೆ ನಯಾಪೈಸೆ ಪರಿಹಾರ ನೀಡಿಲ್ಲ. ಮುಖ್ಯಮಂತ್ರಿಗಳು ಇನ್ನಾದರೂ ರೈತರು, ರೈತ ಮುಖಂಡರನ್ನು ಒಳಗೊಂಡಂತೆ ಸರ್ವಪಕ್ಷ ಸಭೆ ಕರೆದು ಹಾನಿಗೊಳಗಾದ ರೈತರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ರಾಜ್ಯದಲ್ಲಿ ಉದ್ಯಮ, ಉದ್ಯಮಿಗಳಿಗೆ ಸಮರ್ಪಕ ಮೂಲಭೂತ ಸೌಕರ್ಯ ಒದಗಿಸದ ಕಾರಣ ಹಲವು ಬೃಹತ್‌ ಉದ್ಯಮಿಗಳು ರಾಜ್ಯದಿಂದ ಕಾಲ್ಕಿಳುತ್ತಿದ್ದಾರೆ. ಐಟಿ, ಬಿಟಿ ಸೇರಿದಂತೆ ಹಲವು ಉದ್ಯಮಗಳಿಗೆ ಬೇಕಾದ ವ್ಯವಸ್ಥೆ ಮತ್ತು ಸಹಕಾರ ರಾಜ್ಯ ಸರ್ಕಾರದಿಂದ ದೊರೆಯುತ್ತಿಲ್ಲ. ಇದೇ ಕಾರಣಕ್ಕೆ ಬಯೋಕಾನ್ ಸಂಸ್ಥೆಯ ಮುಖ್ಯಸ್ಥೆ ಕಿರಣ್ ಮುಜುಮದಾರ್ ಹಾಗೂ ಗಣ್ಯ ಉದ್ಯಮಿ ಮೋಹನದಾಸ್ ಪೈ ಅವರು ನೇರವಾಗಿ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೇಜವಾಬ್ದಾರಿತನದಿಂದಲೇ ಇಲ್ಲಿನ ಉದ್ಯಮಗಳು ಬೇರೆ ಬೇರೆ ರಾಜ್ಯಗಳಿಗೆ ಸ್ಥಳಾಂತರವಾಗುತ್ತಿವೆ ಎಂದು ಆರೋಪಿಸಿದರು.

ತೆಗ್ಗು-ಗುಂಡಿಗಳ ನಗರ:

ಈ ಮೊದಲು ಐಟಿ-ಬಿಟಿ ನಗರವಾಗಿದ್ದ ಬೆಂಗಳೂರು, ಇಂದು ತಗ್ಗು-ಗುಂಡಿಗಳ ನಗರವಾಗಿ ಮಾರ್ಪಟ್ಟಿದೆ. ಅಭಿವೃದ್ಧಿ ಮಾಡಬೇಕು ಎಂದಾದರೆ ಅನುದಾನ ಬೇಕು. ಆದರೆ, ಮುಖ್ಯಮಂತ್ರಿಗಳು ಸಮರ್ಪಕ ಅನುದಾನ ನೀಡುತ್ತಿಲ್ಲ. ಈ ಹಿಂದೆ ಅವರೇ ಹೇಳಿದಂತೆ ಕಾಂಗ್ರೆಸ್ ಶಾಸಕರಿಗೆ ₹50 ಕೋಟಿ ಹಾಗೂ ಬಿಜೆಪಿ, ಜೆಡಿಎಸ್ ಶಾಸಕರಿಗೆ ₹25 ಕೋಟಿ ವಿಶೇಷ ಅನುದಾನ ನೀಡಬೇಕಿತ್ತು. ಆದರೆ, ಬಿಜೆಪಿ ಮತ್ತು ಜೆಡಿಎಸ್‌ ಶಾಸಕರಿಗೆ ಕೇವಲ ₹10 ಕೋಟಿ ಅನುದಾನ ನೀಡಿದ್ದಾರೆ. ಅದೂ ಎಲ್ಲ ಶಾಸಕರಿಗೂ ನೀಡಿಲ್ಲ. ಇನ್ನು ಮಂದೆಯಾದರೂ ಕ್ಷೇತ್ರಗಳಿಗೆ ಅನುದಾನವನ್ನು ಶೀಘ್ರದಲ್ಲಿ ಬಿಡುಗಡೆ ಮಾಡಲಿ ಎಂದು ಆಗ್ರಹಿಸಿದರು.

ಅರಿತು ಮಾತನಾಡಲಿ:

ಆರ್‌ಎಸ್‌ಎಸ್ ತನ್ನ ಕಾರ್ಯ ಚಟುವಟಿಕೆ ಮೂಲಕ ದೇಶ, ವಿದೇಶಗಳಲ್ಲೂ ಹೆಸರು ಪಡೆದಿದೆ. ಅದು, ನಿಸ್ವಾರ್ಥವಾಗಿ ಜನಸೇವೆ ಮಾಡುವ ಸಂಘಟನೆ. ದೇಶಭಕ್ತಿಯನ್ನು ನಿರ್ಮಾಣ ಮಾಡುವ ಸಾಮಾಜಿಕ ಸಂಘಟನೆ. ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಸ್ವತಃ ನೆಹರೂ, ಇಂದಿರಾ ಗಾಂಧಿ ಅವರೇ ಪ್ರಶಂಸೆ ವ್ಯಕ್ತಪಡಿಸಿದ್ದರು. ಇದರ ಅರಿವಿಲ್ಲದೇ, ಇಲ್ಲ ಸಲ್ಲದ ಹೇಳಿಕೆ ನೀಡುತ್ತಿರುವ ಸಚಿವ ಪ್ರಿಯಾಂಕ ಖರ್ಗೆ ಅರಿತು ಮಾತನಾಡಬೇಕು ಎಂದರು.

ಕಳೆದ ಮೂರು ತಿಂಗಳಿನಿಂದ ಸಂಬಳವಾಗಿಲ್ಲ ಎಂಬ ಕಾರಣಕ್ಕೆ ಪ್ರಿಯಾಂಕ ಖರ್ಗೆ ಅವರ ಕ್ಷೇತ್ರದಲ್ಲಿ ಮಳಖೇಡದ ಗ್ರಂಥಪಾಲಕಿ ಭಾಗ್ಯವತಿ ಅಗ್ಗಿಮಠ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದನ್ನು ಗಮನಿಸುವುದನ್ನು ಬಿಟ್ಟು ಬೇರೆ ಬೇರೆ ವಿಷಯಗಳ ಬಗ್ಗೆ ಟೀಕೆ ಮಾಡುವುದು ಸರಿಯಲ್ಲ. ಸಚಿವರು ತಕ್ಷಣ ಆತ್ಮಹತ್ಯೆ ಮಾಡಿಕೊಂಡವರ ಮನೆಗೆ ತೆರಳಿ ಸಾಂತ್ವನ ಹೇಳಬೇಕು ಮತ್ತು ಅವರ ಕುಟುಂಬಸ್ಥರಿಗೆ ಸರ್ಕಾರಿ ನೌಕರಿ ಕೊಡಿಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ಒತ್ತಡ ಹೇರಲಿ ಎಂದು ರವಿಕುಮಾರ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ಎಂ.ಆರ್. ಪಾಟೀಲ, ವಿಪ ಸದಸ್ಯ ಎಸ್.ವಿ. ಸಂಕನೂರ, ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ, ನಗರ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಮಾಜಿ ಶಾಸಕಿ ಸೀಮಾ ಮಸೂತಿ, ಗುರು ಪಾಟೀಲ ಸೇರಿದಂತೆ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿಕೆಶಿ ಸಿಎಂ ಆದರೆ ನನಗೆ ಸಚಿವ ಸ್ಥಾನವೇ ಬೇಡ : ರಾಜಣ್ಣ
ದರ್ಶನ್‌ ಜೈಲಿಂದ ಹೊರಬರಲು ನಿತ್ಯ ಪ್ರಾರ್ಥಿನೆ: ನಟ ಜೈದ್‌