- ಜಾತಿ ಸಮೀಕ್ಷೆ ಅವಧಿ ಕೇವಲ 15 ದಿನಗಳ ಬದಲು ಕಾಲಮಿತಿಯನ್ನು ಇನ್ನಷ್ಟು ಹೆಚ್ಚಿಸಬೇಕು
- ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದಲೂ ಒಂದಿಲ್ಲೊಂದು ವಿವಾದ ಸೃಷ್ಟಿ: ಆರೋಪ - - -
ಕನ್ನಡಪ್ರಭ ವಾರ್ತೆ ದಾವಣಗೆರೆಹಿಂದೂಗಳ ಭಾವನೆಗೆ ಧಕ್ಕೆ ತರುವುದೇ ದುರುದ್ದೇಶವಾಗಿರುವ ಎಡಪಂಥೀಯರ ತಾಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೈಜೋಡಿಸಿದ್ದು, ಕಾಂಗ್ರೆಸ್ ಸರ್ಕಾರ ತನ್ನ ವೈಫಲ್ಯಗಳನ್ನು ಮರೆಮಾಚಲು ಕ್ಷಣಕ್ಕೊಂದು ವಿವಾದಗಳನ್ನು ಸೃಷ್ಟಿಸುತ್ತಲೇ ಇದೆ ಎಂದು ಉತ್ತರ ಕನ್ನಡ ಕ್ಷೇತ್ರದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆರೋಪಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದಲೂ ಒಂದಿಲ್ಲೊಂದು ವಿವಾದ ಸೃಷ್ಟಿಸುತ್ತಲೇ ಇದೆ. ಶಬರಿಮಲೈ ವಿವಾದ ಸೃಷ್ಟಿಸಿದಂತೆ ಈಗ ಚಾಮುಂಡಿ ಬೆಟ್ಟ, ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಸೃಷ್ಟಿಸಿ ಹಿಂದೂಗಳ ಭಾವನೆಗೆ ಧಕ್ಕೆ ತರಲಾಗುತ್ತಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಲ್ಲಿದ್ದಾರಷ್ಟೇ. ಹಿಂದೆ ಅಧಿಕಾರ ನಡೆಸುತ್ತಿರುವವರು ಎಡಪಂಥೀಯರೇ ಆಗಿದ್ದಾರೆ. ಸಿಎಂ ಸಿದ್ದರಾಮಯ್ಯ ಅಧಿಕಾರ ಉಳಿಸಿಕೊಳ್ಳಲು ಕುರ್ಚಿ ಬಿಗಿಯಾಗಿ ಹಿಡಿದಿದ್ದಾರೆ. ಆದರೆ, ಆಡಳಿತದಲ್ಲಿ ನಿರಾಸಕ್ತಿ ಹೊಂದಿದ್ದಾರೆ ಎಂದರು.
ಅನ್ಯ ಧರ್ಮಕ್ಕೆ ಮತಾಂತರ ಆಗುವವರು ಮೂಲಧರ್ಮ ಮತ್ತು ಜಾತಿ ಹೆಸರನ್ನು ಬಿಟ್ಟು, ಆ ಧರ್ಮದ ಹೆಸರನ್ನಷ್ಟೇ ಉಲ್ಲೇಖಿಸಬೇಕು. ಜಾತಿ ಸಮೀಕ್ಷೆಯನ್ನು ಕೇವಲ 15 ದಿನಗಳಲ್ಲಿ ನಡೆಸುವುದಾಗಿ ಹೇಳಿರುವ ಮುಖ್ಯಮಂತ್ರಿ ಅದರ ಕಾಲಮಿತಿ ಹೆಚ್ಚಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ ನಾಗಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಧನಂಜಯ ಕಡ್ಲೇಬಾಳು, ಅನಿಲಕುಮಾರ ನಾಯ್ಕ, ಎಲ್.ಎನ್.ಕಲ್ಲೇಶ ಇತರರು ಇದ್ದರು.
(ಕೋಟ್) ರಾಜ್ಯ, ರಾಷ್ಟ್ರದಲ್ಲಿ ಮತಗಳ್ಳತನ ಬಾಂಬ್ ಸಿಡಿಸುವುದಾಗಿ ಹೇಳಿದ್ದ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಇದೀಗ ‘ಹೈಡ್ರೋಜನ್ ಬಾಂಬ್’ ಸಿಡಿಸುವುದಾಗಿ ಹೇಳಿಕೆ ನೀಡಿದ್ದಾರೆ. ಇದು ರಾಹುಲ್ ಗಾಂಧಿಯ ಅಪ್ರಬುದ್ಧ, ಬಾಲಿಶತನ ಹೇಳಿಕೆ. ರಾಹುಲ್ ಗಾಂಧಿ ತಮ್ಮ ಯಾವುದೇ ದೂರುಗಳಿದ್ದರೂ ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು.
- - -
ದಾವಣಗೆರೆಯಲ್ಲಿ ಬುಧವಾರ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.