ಕನ್ನಡಪ್ರಭ ವಾರ್ತೆ ದಾವಣಗೆರೆ
ಬಸವಣ್ಣನವರು ಮಹಾಮಾನವತಾವಾದಿ ಮತ್ತು ಶ್ರೇಷ್ಠ ಚಿಂತಕರಾಗಿದ್ದರು. 12ನೇ ಶತಮಾನದಲ್ಲಿ ಅವರು ಆರಂಭಿಸಿದ ಅನುಭವ ಮಂಟಪವನ್ನು ವಿಶ್ವದ ಮೊದಲ ಸಂಸತ್ತಿನ ಪರಿಕಲ್ಪನೆ ಎಂದು ಕರೆಯಲಾಗುತ್ತದೆ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್.ಅರುಣಕುಮಾರ್ ತಿಳಿಸಿದರು.ನಗರದ ಸಮೀಪದ ಆವರಗೆರೆಯಲ್ಲಿ ಕಾಯಕಯೋಗಿ ಬಸವ ಪರಿಸರ ಸಂರಕ್ಷಣಾ ವೇದಿಕೆ, ವಿನಾಯಕ ಭಜನಾ ಮಂಡಳಿ ಆಶ್ರಯದಲ್ಲಿ ಹಮ್ಮಿಕೊಂಡ ಬಸವ ಜಯಂತಿ ಕಾರ್ಯಕ್ರಮದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಮಾತನಾಡಿ, ಬಸವಣ್ಣನವರ ಚಿಂತನೆ ಮತ್ತು ವಚನಗಳು ಮಾನವ ಕಲ್ಯಾಣ ಬಯಸುವ ಅನೇಕರಿಗೆ ಸ್ಫೂರ್ತಿಯಾಗಿವೆ. ಬಸವಣ್ಣನವರ ಆದರ್ಶಗಳ ತಳಹದಿಯಲ್ಲಿ ಬಸವ ಪರಿಸರ ವೇದಿಕೆಯು ಸಮಾಜಮುಖಿ ಮತ್ತು ಗ್ರಾಮಮುಖಿ ಕಾರ್ಯ ಮಾಡುತ್ತಿದ್ದು, ಗ್ರಾಮೀಣ ಸೊಗಡಿನ ಆಚರಣೆಗಳು ಪರಿಸರ ಸಂರಕ್ಷಣೆ ಈ ಗ್ರಾಮದಲ್ಲಿ ಸತತವಾಗಿ ನಡೆಯುತ್ತಿರುವುದು ಹರ್ಷದಾಯಕವಾಗಿದೆ ಮತ್ತು ಮಾದರಿಯಾಗಿದೆ. ಯುವ ಜನಾಂಗ ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಹಿರಿಯರ ಸಹಾಯದೊಂದಿಗೆ ಮಾಡುತ್ತಿರುವುದು ಅತ್ಯಂತ ಸಂತೋಷದಾಯಕವಾಗಿದೆ ಎಂದರು.
ವೇದಿಕೆ ಬಾನಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಬಸವ ಪರಿಸರ ವೇದಿಕೆ ಇಡೀ ಗ್ರಾಮವನ್ನು ಹಸಿರು ತಾಣವನ್ನಾಗಿ ಮಾಡಿದ್ದು, ವೇದಿಕೆಯ ಕಾರ್ಯಕರ್ತರು ತಮ್ಮ ಬಿಡುವಿನ ವೇಳೆಯಲ್ಲಿ ಗ್ರಾಮೀಣ ಬದುಕಿನ ರೈತರು ಉಪಯೋಗಿಸುತ್ತಿದ್ದ ವಸ್ತುಗಳನ್ನೇ ಕಲಾತ್ಮಕವಾಗಿ ಗ್ರಾಮಗಳಲ್ಲಿ ಸ್ಥಾಪಿಸುವ ಮೂಲಕ ಗ್ರಾಮೀಣ ಭಾರತ ಪರಿಚಯಿಸಿದ್ದಾರೆ ಎಂದು ಹೇಳಿದರು.ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಕಾರ್ಯದರ್ಶಿ, ಶಿಕ್ಷಕ ಎಂ.ಗುರುಸಿದ್ಧಸ್ವಾಮಿ ಮಾತನಾಡಿ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಅಲ್ಲದೇ ವಿಜ್ಞಾನ ಮತ್ತು ಪರಿಸರ ಸಂಯೋಗವಾದಾಗ ಮಾನವನ ಜನ್ಮ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.
ಪರಿಸರ ಸಂರಕ್ಷಣಾ ವೇದಿಕೆ ಅಧ್ಯಕ್ಷ ಎನ್.ಟಿ.ರುದ್ರಪ್ಪ ಮಾತನಾಡಿ, ಯುವ ಸಮೂಹ ಮೊಬೈಲನ್ನು ಬದಿಗೊತ್ತಿ ಗಿಡ ಮರಗಳನ್ನು ಬೆಳೆಸುವ ನಿಟ್ಟಿನಲ್ಲಿ ಸಾಗಬೇಕೆಂದು ಕರೆ ನೀಡಿದರು.ಶಾಮಿಯಾನ ವೀರೇಶ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಿ.ಪಿ.ಮಲ್ಲಿಕಾರ್ಜುನ, ತಿಪ್ಪೇಶ, ಹಾಲೇಶ, ಕರಿಬಸಪ್ಪ, ಸಿ.ಎಂ.ಅರುಣ, ರಾಜು, ಮಹಾಂತೇಶ, ಗೋಪನಾಥ, ರಂಗಣ್ಣ, ಗ್ರಾಮದ ಮುಖಂಡರು, ಇತರರು ಇದ್ದರು.
ಈ ಸಂದರ್ಭದಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್. ಅರುಣ್‌ಕುಮಾರ, ಆವರಗೆರೆ ಗ್ರಾಮದ ಹಿರಿಯರಾದ ಶಾಮಿಯಾನ ವೀರೇಶ್ ಅವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮಕ್ಕೂ ಮೊದಲು ಬಸವ ಜಯಂತಿಯನ್ನು ಗ್ರಾಮೀಣ ಸೊಗಡಿನ ಎತ್ತಿನಗಾಡಿಯಲ್ಲಿ ಬಸವಣ್ಣನವರ ಭಾವಚಿತ್ರವನ್ನು ಭಜನೆ ಮೂಲಕ ಗ್ರಾಮದ ಮೆರವಣಿಗೆ ಮಾಡಲಾಯಿತು.