ಅನ್ವರ್‌ ಕೊಲೆ: ಸಿಓಡಿ ತನಿಖಾ ತಂಡ ಚಿಕ್ಕಮಗಳೂರಿಗೆ ಭೇಟಿ

KannadaprabhaNewsNetwork | Updated : Oct 27 2024, 02:07 AM IST

ಸಾರಾಂಶ

ಚಿಕ್ಕಮಗಳೂರು, ಕಳೆದ ಆರು ವರ್ಷದ ಹಿಂದೆ ನಗರದ ಗೌರಿ ಕಾಲುವೆ ಬಡಾವಣೆಯಲ್ಲಿ ನಡೆದಿದ್ದ ಅನ್ವರ್‌ ಕೊಲೆ ಪ್ರಕರಣದ ತನಿಖೆಯನ್ನು ಕೈಗೊಂಡಿರುವ ಸಿಓಡಿ ತಂಡ ಶನಿವಾರ ನಗರಕ್ಕೆ ಆಗಮಿಸಿತ್ತು.

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಕಳೆದ ಆರು ವರ್ಷದ ಹಿಂದೆ ನಗರದ ಗೌರಿ ಕಾಲುವೆ ಬಡಾವಣೆಯಲ್ಲಿ ನಡೆದಿದ್ದ ಅನ್ವರ್‌ ಕೊಲೆ ಪ್ರಕರಣದ ತನಿಖೆಯನ್ನು ಕೈಗೊಂಡಿರುವ ಸಿಓಡಿ ತಂಡ ಶನಿವಾರ ನಗರಕ್ಕೆ ಆಗಮಿಸಿತ್ತು.

ಚಿಕ್ಕಮಗಳೂರು ಜಿಲ್ಲಾ ರಕ್ಷಣಾಧಿಕಾರಿಯಾಗಿದ್ದ ಬಿ.ಕೆ. ಸಿಂಗ್‌ ಅವರು ಇದೀಗ ಸಿಓಡಿ ಎಡಿಜಿಪಿಯಾಗಿದ್ದು, ಅವರ ನೇತೃತ್ವದ ತಂಡ ತನಿಖೆ ಕೈಗೊಂಡಿದ್ದು, ಕೆಲವು ಸ್ಥಳಗಳಿಗೆ ಭೇಟಿ ನೀಡಿ ಮಾಹಿತಿಯನ್ನು ಕಲೆ ಹಾಕಿತು.

2018ರ ಜೂನ್‌ 22 ರಂದು ರಾತ್ರಿ ವೇಳೆಯಲ್ಲಿ ನಗರದ ಗೌರಿ ಕಾಲುವೆ ಗುಡ್‌ ಮಾರ್ನಿಂಗ್‌ ಶಾಪ್‌ ಬಳಿ ಅನ್ವರ್ ಅವರನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಈ ಘಟನೆ ಇಡೀ ಚಿಕ್ಕಮಗಳೂರನ್ನು ಬೆಚ್ಚಿ ಬೀಳಿಸುವಂತೆ ಮಾಡಿತ್ತು. ಜಿಲ್ಲಾ ಪೊಲೀಸ್‌ ಇಲಾಖೆ ಹಲವು ಆಯಾಮಗಳಲ್ಲಿ ತನಿಖೆ ನಡೆಸಿತ್ತು. ಆದರೆ, ಯಾವುದೇ ಸುಳಿವು ಸಿಕ್ಕಿರಲಿಲ್ಲ. ಅನ್ವರ್‌ ಅವರು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿದ್ದರು. 2019ರಲ್ಲಿ ಬಿಜೆಪಿ ಸರ್ಕಾರ ಈ ಕೊಲೆ ಪ್ರಕರಣದ ತನಿಖೆಯನ್ನು ಸಿಓಡಿಗೆ ವಹಿಸಿತ್ತು.

ಕೊಲೆ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಬೇಕೆಂದು ಅನ್ವರ್ ಕುಟುಂಬದವರು ಚಿಕ್ಕಮಗಳೂರು ನಗರದಲ್ಲಿ ಹಲವು ಬಾರಿ ಪ್ರತಿಭಟನೆ ನಡೆಸಿ ಸರ್ಕಾರವನ್ನು ಆಗ್ರಹಿಸಿದ್ದರು. ಜತೆಗೆ ಕೊಲೆ ಆರೋಪಿಗಳನ್ನು ಶೀಘ್ರವೇ ಬಂಧಿಸಿ ಇಲ್ಲವೇ ದಯಾಮರಣಕ್ಕೆ ಅನುಮತಿ ನೀಡುವಂತೆ ಪ್ರಧಾನ ಮಂತ್ರಿಗಳಿಗೆ ಪತ್ರವನ್ನು ಸಹ ಬರೆದಿದ್ದರು.

ಕುಟುಂಬಸ್ಥರು, ಪೊಲೀಸ್ ಇಲಾಖೆ, ರಾಜ್ಯ ಸರ್ಕಾರದ ಮೇಲೆ ಎಷ್ಟೇ ಒತ್ತಡ ತಂದರೂ ಕೊಲೆ ಆರೋಪಿಗಳ ಸುಳಿವು ಸಿಕ್ಕಿರಲಿಲ್ಲ. ಪ್ರಕರಣ ನಡೆದು ಆರು ವರ್ಷಗಳು ಕಳೆದಿದ್ದು, ನ್ಯಾಯಕ್ಕಾಗಿ ಮೊರೆ ಇಟ್ಟಿದ್ದ ಕುಟುಂಬ ಕೈಚೆಲ್ಲಿ ಕುಳಿತಿದೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸಿಓಡಿ ಎಡಿಜಿಪಿ ಬಿ.ಕೆ.ಸಿಂಗ್ ಅವರು ಖುದ್ದು ತನಿಖೆಗೆ ಇಳಿದಿದ್ದಾರೆ. ಶನಿವಾರ ನಗರಕ್ಕೆ ಆಗಮಿಸಿದ ಅವರು, ಅನ್ವರ್ ಕೊಲೆ ನಡೆದ ಸ್ಥಳ, ಅಲ್ಲಿನ ಮಾರ್ಗಗಳು‌ ಸೇರಿದಂತೆ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ಪಡೆದಿದ್ದಾರೆ. ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಂ ಅಮಟೆ ಸೇರಿದಂತೆ ಇತರೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು. 26 ಕೆಸಿಕೆಎಂ 4ಅನ್ವರ್‌ ಕೊಲೆಯಾದ ಸ್ಥಳಕ್ಕೆ ಸಿಓಡಿ ಎಡಿಜಿಪಿ ಬಿ.ಕೆ.ಸಿಂಗ್ ಅವರು ಶನಿವಾರ ಭೇಟಿ ನೀಡಿದ್ದರು. ಎಸ್ಪಿ ಡಾ.ವಿಕ್ರಂ ಅಮಟೆ ಹಾಗೂ ಸಿಬ್ಬಂದಿಗಳು ಇದ್ದರು.---ಪೋಟೋ ಫೈಲ್‌ ನೇಮ್‌ 26 ಕೆಸಿಕೆಎಂ 5ಅನ್ವರ್‌

Share this article