-ಎಂ.ಅಫ್ರೋಜ್ ಖಾನ್
ಹುಬ್ಬಳ್ಳಿಯಲ್ಲಿ ಬಿಹಾರ ಮೂಲದ ವ್ಯಕ್ತಿಯ ಪೈಶಾಚಿಕ ಕೃತ್ಯಕ್ಕೆ 5 ವರ್ಷದ ಬಾಲಕಿ ಬಲಿಯಾದ ಘಟನೆ ಸಂಭವಿಸುತ್ತಿದ್ದಂತೆ ಜಿಲ್ಲೆಯ ಬಿಡದಿ ಹಾಗೂ ಹಾರೋಹಳ್ಳಿ ಭಾಗದ ನಾಗರಿಕರಲ್ಲೂ ಆತಂಕ ಸೃಷ್ಟಿಸಿದೆ.
ಹೌದು, ಇದಕ್ಕೆ ಕಾರಣ ಬಿಡದಿ ಹಾಗೂ ಹಾರೋಹಳ್ಳಿ ಕೈಗಾರಿಕಾ ಪ್ರದೇಶಗಳು. ಈ ಪ್ರದೇಶಗಳಲ್ಲಿ ಸ್ಥಳೀಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕೈಗಾರಿಕೆಗಳಿವೆ. ಇಲ್ಲಿ ಸ್ಥಳೀಯರಿಗಿಂತ ಹೊರ ರಾಜ್ಯಗಳ ಕಾರ್ಮಿಕರ ಸಂಖ್ಯೆಯೇ ಹೆಚ್ಚಾಗಿದೆ. ಆ ಕಾರ್ಮಿಕರೆಲ್ಲರು ಮನೆಗಳನ್ನು ಬಾಡಿಗೆ ಪಡೆದಿರುವುದು ಸ್ಥಳೀಯ ನಾಗರಿಕರು ಮಾತ್ರವಲ್ಲದೆ ಮನೆ ಮಾಲೀಕರನ್ನೂ ಚಿಂತೆಗೀಡು ಮಾಡಿದೆ.ಹುಬ್ಬಳ್ಳಿಯಲ್ಲಿ ಮನೆ ಮುಂದೆ ಆಟವಾಡುತ್ತಿದ್ದ 5 ವರ್ಷದ ಬಾಲಕಿಯನ್ನು ಬಿಹಾರದ ರಿತೇಶ್ ಎಂಬಾತ ಕರೆದೊಯ್ದು ಕೊಲೆ ಮಾಡಿದ್ದನು. ತರುವಾಯ ಆತ ಪೊಲೀಸರ ಎನ್ ಕೌಂಟರ್‌ಗೆ ಬಲಿಯಾಗಿದ್ದನು. ಅಷ್ಟಕ್ಕೂ ಈ ಆರೋಪಿ ಬಿಹಾರದಿಂದ ಹುಬ್ಬಳ್ಳಿಗೆ ಬಂದು ಕೂಲಿ ಕೆಲಸ ಮಾಡುತ್ತಿದ್ದನು ಎನ್ನಲಾಗಿದೆ.
ಹೊರ ಕಾರ್ಮಿಕರ ಆಶ್ರಯ ತಾಣ:
ಕೆಲವು ಕಾರ್ಖಾನೆಗಳು ಒಟ್ಟಿಗೆ ಜನರನ್ನು ತಂದು ಬಾಡಿಗೆ ಮನೆಗಳಲ್ಲಿ ನೆಲೆಸಿರುತ್ತಾರೆ. ಹೆಚ್ಚಿನವರು ಯುವಕರಾಗಿದ್ದು, ಬಿಡದಿ ಸುತ್ತಮುತ್ತ 24 ಗಂಟೆಗಳು ಸುತ್ತುತ್ತಿರುತ್ತಾರೆ. 3 ಪಾಳಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವುದರಿಂದ, ಒಂದು ತಂಡ ಮನೆಯಲ್ಲಿ, ಇನ್ನೊಂದು ತಂಡ ಕೆಲಸದಲ್ಲಿ ಮತ್ತೊಂದು ತಂಡ ನಗರ ಪ್ರದಕ್ಷಣೆಯಲ್ಲಿ ಇರುತ್ತದೆ. ಬಿಡದಿ ಸುತ್ತ-ಮುತ್ತಲಿನ ಗ್ರಾಮಗಳಲ್ಲಿ ಎಲ್ಲಾ ವೇಳೆಯಲ್ಲೂ (24 ಗಂಟೆ) ಬೀದಿಯಲ್ಲಿ ಜನ ಸಂಚಾರವಿರುತ್ತದೆ. ಇವರು ಯಾರು, ಎಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬ ಸಣ್ಣ ಮಾಹಿತಿಯೂ ಇಲ್ಲ. ಪ್ರತೀ ವ್ಯಕ್ತಿಗೆ ತಲೆಗೆ ಇಷ್ಟರಂತೆ (1000 ರು. ಮನೆಗೆ ಬಾಡಿಗೆ) ಒಂದೇ ಮನೆಯಲ್ಲಿ ಕನಿಷ್ಠ 10 ರಿಂದ 30 ಕಾರ್ಮಿಕರು ನೆಲೆಸಿ, ಕೆಲಸಕ್ಕೆ ಹೋಗಿ ಬರುತ್ತಿದ್ದಾರೆ. ಇನ್ನು ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ 450ಕ್ಕೂ ಹೆಚ್ಚು ಕಾರ್ಖಾನೆಗಳಿದ್ದು, ಸುಮಾರು 15ಸಾವಿರಕ್ಕೂ ಹೆಚ್ಚಿನ ಕಾರ್ಮಿಕರು ಇದ್ದಾರೆ.
ಬಿಡದಿ ಮತ್ತು ಹಾರೋಹಳ್ಳಿ ಭಾಗದ ಜನರು ಹೊರ ರಾಜ್ಯಗಳ ಕಾರ್ಮಿಕರ ಜೊತೆಯಲ್ಲಿ ಒಂದೇ ಗ್ರಾಮದಲ್ಲಿ ಒಟ್ಟಿಗೆ ನೆಲೆಸಿರುವುದರಿಂದ ಕಳೆದ 3 ದಿನಗಳ ಹಿಂದೆ ಹುಬ್ಬಳ್ಳಿಯಲ್ಲಿ ನಡೆದ ಘೋರ ಕೃತ್ಯ ಇಲ್ಲಿನ ನಾಗರೀಕರಲ್ಲಿ - ಪೋಷಕರಲ್ಲಿ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಆತಂಕ- ಭಯ ಶುರುವಾಗಿದೆ. ಬೇಸಿಗೆ ರಜೆ ಇರುವುದರಿಂದ ಮಕ್ಕಳು ಶಾಲೆಗೆ ಹೋಗದೇ ಮನೆಯಲ್ಲಿ ಇರುವುದರಿಂದ ಮಕ್ಕಳನ್ನು ಹೇಗೇ ನೋಡಿಕೊಳ್ಳಬೇಕು ಎಂಬುವುದರ ಬಗ್ಗೆ ಚಿಂತೆ ಕಾಡುತ್ತಿದೆ.
ಬಿಡದಿ ಹಾಗೂ ಹಾರೋಹಳ್ಳಿ ಕೈಗಾರಿಕಾ ಪ್ರದೇಶಗಳಲ್ಲಿನ ಕಾರ್ಖಾನೆಯ ಮಾಲೀಕರು ಹೊರಗುತ್ತಿಗೆ ನೌಕರರು ಹಾಗೂ ಬಾಡಿಗೆ ನೀಡಿರುವ ಮಾಲೀಕರನ್ನು ಕರೆದು ಸೂಕ್ತ ಕಾನೂನಿನ ತಿಳಿವಳಿಕೆ ಹಾಗೂ ಕಾನೂನು ಕ್ರಮದ ಬಗ್ಗೆ ಎಚ್ಚರಿಕೆ ನೀಡಬೇಕಾಗಿದೆ. ಪ್ರತಿಯೊಬ್ಬ ಕಾರ್ಮಿಕನ ಐಡಿ ಕಾರ್ಡ್ ಮತ್ತು ಆತನ ಮನೆ ವಿಳಾಸದ ವಿವರ ಪಡೆದುಕೊಳ್ಳಬೇಕು. ಪೊಲೀಸ್ ಇಲಾಖೆ ಬೀಟ್ ವ್ಯವಸ್ಥೆಯನ್ನು ಹೆಚ್ಚಿಸಿ ವಾರಕ್ಕೆ ಎರಡು ದಿನ ಬಾಡಿಗೆ ಮನೆಗಳ ಹತ್ತಿರ ಹೋಗಿ ಬರುವಂತೆ ಕ್ರಮ ವಹಿಸಬೇಕಿದೆ. ಆ ಮೂಲಕ ಬಿಡದಿ - ಹಾರೋಹಳ್ಳಿ ವ್ಯಾಪ್ತಿಯ ಪೋಷಕರ ಆತಂಕ ದೂರ ಮಾಡಬೇಕಾಗಿದೆ.
ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ