ಬೇಡಿಕೆ ಈಡೇರಿಸಲು ಮಸಣ ಕಾರ್ಮಿಕರ ಆಗ್ರಹ

KannadaprabhaNewsNetwork | Published : Apr 17, 2025 12:01 AM

ಸಾರಾಂಶ

ಸ್ಮಶಾನಗಳಲ್ಲಿ ಮೃತರ ಶವ ಸಂಸ್ಕಾರ ಮಾಡಲು ಪ್ರತಿ ಗ್ರಾಮದಲ್ಲೂ ಮಸಣ ಕಾರ್ಮಿಕರಿದ್ದಾರೆ. ಆದರೆ ಅವರು ಒಂದು ಸೇವೆಯಾಗಿ ಕೆಲಸ ಮಾಡುತ್ತಿದ್ದು, ಸರಕಾರದಿಂದ ಯಾವುದೇ ಸೌಲಭ್ಯಗಳು ದೊರೆಯುತ್ತಿಲ್ಲ. ಹಾಗಾಗಿ ನಿವೇಶನ, ವಸತಿ ರಹಿತ ಕಾರ್ಮಿಕರನ್ನು ಗುರುತಿಸಿ ಸೌಲಭ್ಯಗಳನ್ನು ಒದಗಿಸಬೇಕು. ಈ ಬಗ್ಗೆ ಮನವಿ ಸಲ್ಲಿಸಿದ್ದರೂ ಕ್ರಮ ಕೈಗೊಂಡಿಲ್ಲ.

ಕನ್ನಡಪ್ರಭ ವಾರ್ತೆ ಗುಡಿಬಂಡೆ

ಹಬ್ಬ ಹರಿದಿನಗಳೆನ್ನದೇ ಕೆಲಸ ಮಾಡುವಂತಹ ಮಸಣ ಕಾರ್ಮಿಕರ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸುವಲ್ಲಿ ಅಧಿಕಾರಿಗಳು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ಮಸಣ ಕಾರ್ಮಿಕರ ಹಾಗೂ ತಮಟೆ ಕಲಾವಿದರ ಸಂಘದ ಜಿಲ್ಲಾ ಸಂಚಾಲಕ ಮುನಿಯಪ್ಪ ಆರೋಪಿಸಿದರು.

ತಾಲೂಕಿನ ಹಂಪಸಂದ್ರ ಹಾಗೂ ದಪ್ಪರ್ತಿ ಗ್ರಾಪಂ ಕಚೇರಿಗಳ ಮುಂದೆ ಕರ್ನಾಟಕ ರಾಜ್ಯ ಮಸಣ ಕಾರ್ಮಿಕರ ಹಾಗೂ ತಮಟೆ ಕಲಾವಿದರ ಸಂಘದ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಯಾವುದೇ ಸೌಲಭ್ಯ ಕಲ್ಪಿಸಿಲ್ಲ

ಸ್ಮಶಾನಗಳಲ್ಲಿ ಮೃತರ ಶವ ಸಂಸ್ಕಾರ ಮಾಡಲು ಪ್ರತಿ ಗ್ರಾಮದಲ್ಲೂ ಮಸಣ ಕಾರ್ಮಿಕರಿದ್ದಾರೆ. ಆದರೆ ಅವರು ಒಂದು ಸೇವೆಯಾಗಿ ಕೆಲಸ ಮಾಡುತ್ತಿದ್ದು, ಸರಕಾರದಿಂದ ಯಾವುದೇ ಸೌಲಭ್ಯಗಳು ದೊರೆಯುತ್ತಿಲ್ಲ. ಹಾಗಾಗಿ ನಿವೇಶನ, ವಸತಿ ರಹಿತ ಕಾರ್ಮಿಕರನ್ನು ಗುರುತಿಸಿ ಸೌಲಭ್ಯಗಳನ್ನು ಒದಗಿಸಬೇಕು. ಈಗಾಗಲೇ ಹಲವು ಬಾರಿ ಹಲವು ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ನಡೆಸಿದ್ದರೂ ಸಹ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದರು.

ಮಸಣ ಕಾರ್ಮಿಕರ ಬೇಡಿಕೆಗಳು

ಮಸಣ ಕಾರ್ಮಿಕರಿಗೆ ಆರೋಗ್ಯ ಕಾರ್ಡ್ ಹಾಗೂ ವಿಮೆ ಸೌಲಭ್ಯವನ್ನು ಗ್ರಾಪಂನಿಂದ ಕಲ್ಪಿಸುವುದು, ಮಸಣ ಕಾರ್ಮಿಕರಿಗೆ ನಿವೇಶನ ಹಾಗೂ ಮನೆ ನಿರ್ಮಾಣಕ್ಕೆ 10 ಲಕ್ಷ ಹಣ ನೀಡುವುದು, 45 ವರ್ಷ ಮೇಲ್ಪಟ್ಟ ಕಾರ್ಮಿಕರಿಗೆ ಮಾಹೆಯಾನ 4 ಸಾವಿರ ಪಿಂಚಣಿ ನೀಡುವುದು, ಮಸಣ ಕಾರ್ಮಿಕರ ವಿದ್ಯಾವಂತ ಮಕ್ಕಳಿಗೆ ಸರ್ಕಾರಿ ನೌಕರಿ ಇಲ್ಲವೇ ನಿರುದ್ಯೋಗ ಭತ್ಯೆ ನೀಡುವುದು ಸೇರಿದಂತೆ ಇತರ ಬೇಡಿಕೆ ಈಡೇರಿಸುವಂತೆ ಪಿಡಿಒಗಳಿಗೆ ಮನವಿ ಪತ್ರ ಸಲ್ಲಿಸಿದರು.

ಈ ವೇಳೆ ಕರ್ನಾಟಕ ರಾಜ್ಯ ಮಸಣ ಕಾರ್ಮಿಕರ ಹಾಗೂ ತಮಟೆ ಕಲಾವಿದರ ಸಂಘ ಹಂಪಸಂದ್ರ ಗ್ರಾಮ ಪಂಚಾಯಿತಿ ಸಮಿತಿ ಅಧ್ಯಕ್ಷ ಆದಿನಾರಾಯಣಪ್ಪ, ಉಪಾಧ್ಯಕ್ಷರಾದ ರಾಮಾಂಜಿನಪ್ಪ, ಗಂಗಾಧರ, ಶ್ರೀರಾಮಪ್ಪ, ಕಾರ್ಯದರ್ಶಿ ಎಲ್ ಆದಿನಾರಾಯಣಪ್ಪ, ಕೃಷ್ಣಪ್ಪ, ಅಶ್ವತ್ಥಪ್ಪ ಸೇರಿದಂತೆ ಹಲವರು ಇದ್ದರು.

Share this article