- ಮಾರುಕಟ್ಟೆಯಲ್ಲಿ ಕ್ವಿಂಟಾಲ್‌ಗೆ 4,000 । ಬೆಂಬಲ ಬೆಲೆ 3,846 ರು। ಜಿಲ್ಲೆಯಲ್ಲಿ ಈವರೆಗೆ ಶೇ. 20 ರಷ್ಟು ಮಾತ್ರ ನೋಂದಣಿ
ಆರ್. ತಾರಾನಾಥ್ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ಬೆಂಬಲ ಬೆಲೆಯಲ್ಲಿ ರಾಗಿ ಮಾರಾಟಕ್ಕೆ ರೈತರ ನಿರಾಸಕ್ತಿ.- ಇದು, ರಾಜ್ಯ ಸರ್ಕಾರದ ವಿರುದ್ಧ ಜಿಲ್ಲೆಯ ರೈತರು ನಡೆಸುತ್ತಿರುವ ಅಸಹಕಾರ ಚಳುವಳಿ ಅಲ್ಲ,ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಖರೀದಿ ಕೇಂದ್ರಕ್ಕೆ ಬಂದಿರುವ ರೈತ ಸಂಖ್ಯೆ ಕೇವಲ ಶೇ.20 ರಷ್ಟು ಮಾತ್ರ.
ಹಾಗಾದರೆ ಕಳೆದ ಬಾರಿ ನಿರೀಕ್ಷೆಯಷ್ಟು ಮಳೆ ಬಂದಿಲ್ಲ, ಹಾಗಾಗಿ ಬಿತ್ತನೆ ಕಾರ್ಯ ನಡೆದಿಲ್ಲವೇ, ಇದು, ಕೂಡ ಸತ್ಯ. ಆದರೆ, ರಾಗಿ ಬಿಟ್ಟು ಇತರೆ ಬೆಳೆಗಳಿಗೆ ಸಕಾಲದಲ್ಲಿ ಮಳೆ ಇಲ್ಲದೆ ಬೆಳೆ ಕಳೆದುಕೊಳ್ಳುವಂತಾಯಿತು. ರಾಗಿಗೆ ಮಾತ್ರ ಆಗಾಗ ಬಂದ ಮಳೆಯಿಂದ ಅನುಕೂಲವಾಯಿತು. ಅದರಿಂದ ರೈತರು ನಿರೀಕ್ಷೆ ಮಾಡಿದಷ್ಟು ಇಳುವರಿ ಬರದೆ ಹೋದರೂ ಸ್ವಲ್ಪಮಟ್ಟಿಗೆ ಪರವಾಗಿಲ್ಲ ಎನ್ನುವಂತೆ ಇಳುವರಿ ಪ್ರಮಾಣ ಇತ್ತು.ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಂಗಾರಿನಲ್ಲಿ ರಾಗಿ ಬಿತ್ತನೆ 45 ಸಾವಿರ ಹೆಕ್ಟೇರ್, ಕಳೆದ ಸಾಲಿನಲ್ಲಿ 47,940 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿತ್ತು. ವಾಡಿಕೆಯಂತೆ ಒಂದು ಹೆಕ್ಟೇರ್‌ಗೆ 15 ಕ್ವಿಂಟಾಲ್ ರಾಗಿ ಇಳುವರಿ ಬರಬೇಕು. ಆದರೆ, ಈ ಬಾರಿ 9 ರಿಂದ 10 ಕ್ವಿಂಟಾಲ್ ರಾಗಿ ಬಂದಿದೆ.ಉತ್ತಮ ಬೆಲೆ:
ಇಳುವರಿ ಕಡಿಮೆ ಇತ್ತಾದರೂ ಬೆಲೆ ಮಾತ್ರ ಕಡಿಮೆ ಇಲ್ಲ. ಕಳೆದ ವರ್ಷ ಒಂದು ಕ್ವಿಂಟಾಲ್ ರಾಗಿಗೆ ₹ 3,578 ಬೆಂಬಲ ಬೆಲೆ ನೀಡಲಾಗುತ್ತಿತ್ತು. ಆದರೆ, ಈ ವರ್ಷದಲ್ಲಿ ₹ 3,846 ನೀಡಲಾಗುತ್ತಿದೆ. ಅಂದರೆ ಬೆಂಬಲ ಬೆಲೆಯನ್ನು ಹೆಚ್ಚಿಸಲಾಗಿದೆ. ಆದರೂ ಕೂಡ ರೈತರು ಖರೀದಿ ಕೇಂದ್ರಕ್ಕೆ ಬರುತ್ತಿಲ್ಲ. ಇದಕ್ಕೆ ಕಾರಣ, ಬೆಲೆಯಲ್ಲಿನ ವ್ಯತ್ಯಾಸ, ಊಟಕ್ಕೆ ಬಳಸುವ ಹೈಟೆಕ್ ರಾಗಿ ಬೆಲೆ ಮಾರುಕಟ್ಟೆಯಲ್ಲಿ ಕ್ವಿಂಟಾಲ್‌ಗೆ ₹ 4,000 ಇದೆ. ಆದರೆ, ಇದೇ ರಾಗಿಗೆ ಖರೀದಿ ಕೇಂದ್ರ ದಲ್ಲಿ ₹3,846 ರುಪಾಯಿ ನೀಡಲಾಗುತ್ತಿದೆ.ಖರೀದಿ ಕೇಂದ್ರ:ರಾಗಿ ಖರೀದಿಗೆ ಚಿಕ್ಕಮಗಳೂರು, ಕಡೂರು, ಬೀರೂರು, ಅಜ್ಜಂಪುರ, ತರೀಕೆರೆ ಹಾಗೂ ಪಂಚನಹಳ್ಳಿಯಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಮಾರ್ಚ್ 15 ರಿಂದ ರೈತರ ಹೆಸರು ನೋಂದಣಿ ಕಾರ್ಯ ಆರಂಭವಾಗಿದ್ದು, ಈವರೆಗೆ 1,146 ಮಂದಿ ಮಾತ್ರ ಹೆಸರು ನೋಂದಣೆ ಮಾಡಿಸಿಕೊಂಡಿದ್ದಾರೆ. ಆದರೆ, ಕಳೆದ ವರ್ಷ 2,500 ಮಂದಿ ರೈತರು ಹೆಸರು ನೋಂದಣಿ ಮಾಡಿಸಿಕೊಂಡಿದ್ದರು.
ಈ ಬಾರಿ ಈಗಾಗಲೇ ನೋಂದಣಿ ಮಾಡಿರುವ 1,146 ಮಂದಿ ರೈತರಿಂದ 25 ಸಾವಿರ ಕ್ವಿಂಟಾಲ್ ರಾಗಿ ಖರೀದಿ ಮಾಡುವ ಗುರಿಯನ್ನು ಹೊಂದಲಾಗಿತ್ತು. ಆದರೆ, ಈವರೆಗೆ 68 ಮಂದಿ ರೈತರು ಸುಮಾರು ಒಂದು ಸಾವಿರ ಕ್ವಿಂಟಾಲ್ ರಾಗಿಯನ್ನು ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಿದ್ದಾರೆ. ಕಳೆದ ವರ್ಷ 40 ಸಾವಿರ ಕ್ವಿಂಟಾಲ್ ಖರೀದಿ ಮಾಡಲಾಗಿತ್ತು. ಈ ಬಾರಿ ನಿರೀಕ್ಷಿತ ಗುರಿಯನ್ನು ತಲುಪಲು ಸಾಧ್ಯವಿಲ್ಲ. ಕಾರಣ, ರೈತರಿಗೆ ಬೆಂಬಲ ಬೆಲೆಗಿಂತ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತಿದೆ.---- ಬಾಕ್ಸ್----- ಬೆಂಬಲ ಬೆಲೆ ಖರೀದಿ ಕೇಂದ್ರದಲ್ಲಿ ರಾಗಿಯ ಬೆಲೆ ಕ್ವಿಂಟಾಲ್‌ಗೆ ₹3,846.
- ಮಾರುಕಟ್ಟೆಯಲ್ಲಿ ರಾಗಿಯ ಬೆಲೆ ಕ್ವಿಂಟಾಲ್‌ಗೆ ₹ 4,000- ಕಳೆದ ವರ್ಷ 40,000 ಕ್ವಿಂಟಾಲ್ ರಾಗಿ ಖರೀದಿ
- ಈ ಬಾರಿ ಈವರೆಗೆ 1,000 ಕ್ವಿಂಟಾಲ್ ರಾಗಿ ಖರೀದಿ- ಕಳೆದ ವರ್ಷ 2,500 ರೈತರಿಂದ ನೋಂದಣಿ
- ಈ ಬಾರಿ 1,146 ರೈತರಿಂದ ನೋಂದಣಿ