ಅಧಿಕಾರಿಗಳು ದಲ್ಲಾಳಿ ಮತ್ತು ಖಾಸಗಿ ವ್ಯಾಪಾರಸ್ಥರ ಜೊತೆ ಶಾಮೀಲಾಗಿ, ರೈತರು ಕಷ್ಟಪಟ್ಟು ಬೆಳೆದು ತಂದ ರಾಗಿಗಿಂತ ದಲ್ಲಾಳಿಗಳು ತರುವ ಕಲಬೆರಕೆ ಮತ್ತು ಗುಣಮಟ್ಟವಿಲ್ಲದ ರಾಗಿಯನ್ನು ಯಾವುದೇ ಪರಿಶೀಲನೆ ಮಾಡದೇ ಖರೀದಿಸುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಗೌರಿಬಿದನೂರು
ನಗರದ ಎಪಿಎಂಸಿ ಅಧಿಕಾರಿಗಳು ರಾಗಿ ಖರೀದಿಯಲ್ಲಿ ಬಾರಿ ಗೋಲ್ಮಾಲ್ ಮಾಡಿ ರೈತರಿಗೆ ಮೋಸ ಮಾಡುತ್ತಿದ್ದಾರೆ ಎಂದು ರೈತರು ಅಧಿಕಾರಿಗಳ ಮೇಲೆ ಗಂಭೀರ ಆರೋಪ ಮಾಡಿದರು.ಸರ್ಕಾರ ರೈತರು ಬೆಳೆದ ರಾಗಿಗೆ ಬೆಂಬಲ ಬೆಲೆ ಘೋಷಿಸಿದೆ, ಆದರೆ ಇಲ್ಲಿನ ಅಧಿಕಾರಿಗಳು ದಲ್ಲಾಳಿ ಮತ್ತು ಖಾಸಗಿ ವ್ಯಾಪಾರಸ್ಥರ ಜೊತೆ ಶಾಮೀಲಾಗಿ, ರೈತರು ಕಷ್ಟಪಟ್ಟು ಬೆಳೆದು ತಂದ ರಾಗಿಗಿಂತ ದಲ್ಲಾಳಿಗಳು ತರುವ ಕಲಬೆರಕೆ ಮತ್ತು ಗುಣಮಟ್ಟವಿಲ್ಲದ ರಾಗಿಯನ್ನು ಯಾವುದೇ ಪರಿಶೀಲನೆ ಮಾಡದೇ ಖರೀದಿಸುತ್ತಿದ್ದಾರೆ. ಆದರೆ ರೈತರು ಬೆಳೆದ ಉತ್ತಮ ಗುಣಮಟ್ಟದ ರಾಗಿಯನ್ನು ವಿನಾಕಾರಣ ನೆಪವೊಡ್ಡಿ ತಿರಸ್ಕರಿಸುತ್ತಿದ್ದಾರೆ ಎಂದು ರೈತರು ದೂರಿದರು.ರೈತ ವೆಂಕಟರಾಜು ಮಾತನಾಡಿ, ಕಳೆದ 19 ರಂದು 43 ಮೂಟೆ ರಾಗಿಯನ್ನು ಇಲ್ಲಿಗೆ ತರಲಾಗಿತ್ತು. ಇಲ್ಲಿನವರು ಹೊರಗಡೆ ತೂಕ ಹಾಕಿಸಿಕೊಂಡು ಬರುವಂತೆ ತಿಳಿಸಿದರು. ತೂಕ ಹಾಕಿಸಿಕೊಂಡು ಬಂದ ನಂತರ ರಾಗಿ ಇನ್ನು ಒಣಗಿಲ್ಲ ಎಂದು ರಾಗಿ ತಂದಿದ್ದ ವಾಹನವನ್ನು ಪಕ್ಕದಲ್ಲಿ ನಿಲ್ಲಿಸಲು ಹೇಳಿದರು. ಬಳಿಕ ಸಿದ್ದೇಶ್ ಎನ್ನುವ ವ್ಯಕ್ತಿ ಬಂದು, ಆನಂದ್ ಎಂಬುವವರಿಗೆ ನಾಲ್ಕು ಸಾವಿರ ಹಣಾ ನೀಡಲು ಹೇಳಿದರು. ನಾನು ಫೋನ್ ಪೇ ಮೂಲಕ ಮೂರು ಸಾವಿರ ಹಣ ಹಾಕಿದ್ದೇನೆ. ನಿನ್ನೆಯೂ ಸಹ ಒಂದೊಂದು ಟ್ರ್ಯಾಕ್ಟರ್ ರಾಗಿಗೆ ಎರಡು ಸಾವಿರ ರೂಪಾಯಿಗಳನ್ನು ವಸೂಲಿ ಮಾಡುತ್ತಿದ್ದಾರೆ. ಇಲ್ಲಿನ ಅಧಿಕಾರಿಗಳು ರೈತರಿಗೆ ವಂಚನೆ ಮಾಡುವುದರ ಜೊತೆಗೆ ಕಿರುಕುಳ ನೀಡುತ್ತಿದ್ದಾರೆ ಎಂದು ದೂರುಗಳ ಸುರಿಮಳೆಗೈದರು.ಇಲ್ಲಿನ ಅಧಿಕಾರಿಗಳು ರೈತರು ತರುವ ರಾಗಿಯನ್ನು ಗುಣಮಟ್ಟವಿಲ್ಲ, ಒಣಗಿಲ್ಲ, ಧೂಳು ತುಂಬಿದೆ ಎಂದು ತಿರಸ್ಕರಿಸಿ, ಅದೇ ರಾಗಿಯನ್ನು ಖಾಸಗಿ ವ್ಯಕ್ತಿಗಳು ಖರೀದಿ ಮಾಡಿ ತಂದರೆ, ಪ್ರಶ್ನೆ ಮಾಡದೇ ಖರೀದಿ ಮಾಡುತ್ತಿದ್ದಾರೆ. ಜೊತೆಗೆ 52 ಕೆಜಿ ರಾಗಿ ಮೂಟೆಗೆ 50 ಕೆಜಿ ಲೆಕ್ಕ ತೋರಿಸುತ್ತಿದ್ದಾರೆ. ಟ್ರ್ಯಾಕ್ಟರ್‌ನಿಂದ ಕೆಳಗಿಳಿಸಲು ಒಂದು ಮೂಟೆಗೆ 15 ರು. ಕೂಲಿ ತೆಗೆದುಕೊಳ್ಳುತ್ತಿದ್ದಾರೆ. ಅಧಿಕಾರಿಗಳು ಇದೇ ರೀತಿ ಮುಂದುವರೆದರೆ ಕಚೇರಿ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ರೈತ ಗಂಗರಾಜು ಹೇಳಿದರು.ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಅರವಿಂದ್, ಅಧಿಕಾರಿಗಳಿಗೆ ರೈತರ ರಾಗಿಯನ್ನು ಸರಿಯಾಗಿ ಪರಿಶೀಲಿಸಿ ರೈತರಿಗೆ ಅನ್ಯಾಯವಾಗದ ರೀತಿಯಲ್ಲಿ ಬೆಂಬಲ ಬೆಲೆ ನೀಡಬೇಕು. ರೈತರಿಗೆ ಯಾವುದೇ ರೀತಿಯಲ್ಲಿ ಅನ್ಯಾಯವಾಗಿರುವ ದೂರುಗಳು ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.