ಕೊಪ್ಪಳ: ಸಾರ್ಥಕ ಬದುಕಿಗೆ ವಚನಗಳ ಸಾರ ದಾರಿದೀಪವಾಗಿದೆ ಎಂದು ವಿಪ ಸದಸ್ಯೆ ಹೇಮಲತಾ ನಾಯಕ ಹೇಳಿದರು.
ನಗರದ ಸಾಹಿತ್ಯ ಭವನದಲ್ಲಿ ಜರುಗಿದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, 12ನೇ ಶತಮಾನದ ಪ್ರಮುಖ ಶರಣ ಹಡಪದ ಅಪ್ಪಣ್ಣನವರು ರಚಿಸಿದ ವಚನ ಬರಿ ಜಯಂತಿಯ ದಿನಗಳಲ್ಲಿ ನೆನಪಿಸಿಕೊಳ್ಳುವುದಷ್ಟೇ ಅಲ್ಲದೆ, ಅವುಗಳನ್ನು ನಿಜ ಜೀವನದಲ್ಲಿ ಪಾಲಿಸಿದಾಗ ಮಾತ್ರ ನಮ್ಮ ಬದುಕು ಸಾರ್ಥಕಗೊಳ್ಳುತ್ತದೆ. ಶಿವಶರಣ ಹಡಪದ ಅಪ್ಪಣ್ಣನವರು ಜಗಜ್ಯೋತಿ ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿ, ನಂಬಿಕೆಗೆ ಪಾತ್ರರಾಗಿದ್ದ ಕರ್ತವ್ಯನಿಷ್ಠ ಶರಣರಾಗಿದ್ದರು. ಯಾವುದೇ ಲಿಂಗ ತಾರತಮ್ಯ ಅಥವಾ ಜಾತಿ ಭೇದವಿಲ್ಲದೆ ಮಾನವ ಕುಲದ ಉದ್ಧಾರಕ್ಕಾಗಿ ಶ್ರಮಿಸಿದ ಕಾಯಕಜೀವಿ. ಸುಮಾರು 242ಕ್ಕೂ ಹೆಚ್ಚು ವಚನ ರಚಿಸಿ, ಸಮಾಜಕ್ಕೆ ಅದ್ಭುತ ಆದರ್ಶ ಕೊಡುಗೆಯಾಗಿ ನೀಡಿದ್ದಾರೆ. ಅನುಭವ ಮಂಟಪದಲ್ಲಿ ಪ್ರಮುಖ ಸ್ಥಾನ ಪಡೆದಿದ್ದ ಹಡಪದ ಅಪ್ಪಣ್ಣನವರ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಕೊಡುಗೆ ಅಪಾರ ಎಂದರು.ಇಂದಿನ ದಿನಗಳಲ್ಲಿ ಸಮಾಜದ ಶೈಕ್ಷಣಿಕ ಪ್ರಗತಿ ಅತ್ಯಂತ ಅಗತ್ಯವಾಗಿದೆ. ಹೆಣ್ಣುಮಕ್ಕಳು ಹಾಗೂ ಯುವಜನತೆ ಶಿಕ್ಷಣದಲ್ಲಿ ಮುಂಚೂಣಿಗೆ ಬರಬೇಕು. ಪೋಷಕರು ತಮ್ಮ ಮಕ್ಕಳನ್ನು ಎಂಜಿನಿಯರಿಂಗ್, ಮೆಡಿಕಲ್ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧಗೊಳಿಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರಬೇಕು. ಸರ್ಕಾರದ ಸೌಲಭ್ಯ ಸದುಪಯೋಗಪಡಿಸಿಕೊಂಡು ಸಮಾಜ ಕಟ್ಟುವ ಕೆಲಸದಲ್ಲಿ ಎಲ್ಲರೂ ಭಾಗಿಗಳಾಗಬೇಕು ಎಂದು ಹೇಳಿದರು.
ಬಿಸರಳ್ಳಿ ಗವಿಮಠದ ಶಾಖಾಮಠದ ಶ್ರೀಶಿವಶಾಂತವೀರ ಸ್ವಾಮೀಜಿ ಮಾತನಾಡಿ, ಶಿವಶರಣ ಹಡಪದ ಅಪ್ಪಣ್ಣನವರ ವಚನಗಳ ಬೆಳಕು ಎಂದಿಗೂ ಆರದು. ಸಾಮಾನ್ಯರು ಆಚರಿಸುವ ಜನ್ಮದಿನಕ್ಕೂ ಶಿವಶರಣ ಹಡಪದ ಅಪ್ಪಣ್ಣನವರಂತಹ ಮಹಾತ್ಮರ ಜಯಂತಿಗೂ ಅಂತರವಿದೆ. ಹಚ್ಚಿದ ದೀಪ ಆರಿಸಿ ಜನ್ಮದಿನ ಆಚರಿಸುವ ಈ ಕಾಲದಲ್ಲಿ, ಹಡಪದ ಅಪ್ಪಣ್ಣನವರು ಸಮಾಜದ ಮನಸ್ಸಿನಲ್ಲಿಂದಿಗೂ ಆರದ ವಚನಗಳೆಂಬ ಜ್ಯೋತಿ ಬೆಳಗಿದ್ದಾರೆ. ಅಪ್ಪಣ್ಣನವರು ಕೇವಲ ಶರೀರದ ಅನಗತ್ಯ ಕೇಶ (ಕೂದಲು) ಕತ್ತರಿಸುವ ಕಾಯಕ ಮಾಡಲಿಲ್ಲ, ಮಾನವನ ತಲೆಯೊಳಗಿನ ಅಹಂಕಾರ, ಕ್ಲೇಶ ಹಾಗೂ ವಿಕಾರ ಕಳೆಯುವ ಮಹತ್ಕಾರ್ಯ ಮಾಡಿದರು ಎಂದರು.ಶಿವಶರಣ ಹಡಪದ ಅಪ್ಪಣ್ಣನವರ ಕುರಿತು ವಿಶೇಷ ಉಪನ್ಯಾಸ ನೀಡಿದ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಸದಸ್ಯೆ ಸಾವಿತ್ರಿ ಮಂಜುಮದಾರ, 12ನೇ ಶತಮಾನದ ವಚನ ಚಳವಳಿ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರ, ಅನುಭವ ಮಂಟಪದ ಮಹಾನುಭಾವಿ ಹಾಗೂ ಬಸವಣ್ಣನವರ ನಿಕಟವರ್ತಿಯಾಗಿದ್ದವರು ಹಡಪದ ಅಪ್ಪಣ್ಣನವರು. ಕಲ್ಯಾಣದಲ್ಲಿ ಸರ್ವ ಶಿವಶರಣರ ನಿಕಟ ಸಂಪರ್ಕ ಹೊಂದಿದ್ದ ಇವರು, ತಮ್ಮ ಶುದ್ಧ ಮನಸ್ಸಿನ ಬಲದಿಂದಲೇ ಬಸವಣ್ಣನವರಿಗೆ ಬಲಗೈ ಬಂಟನಾಗಿದ್ದರು. ಇವರಿಬ್ಬರ ಸ್ನೇಹ ಬಾಲ್ಯದಿಂದಲೂ ಇದ್ದು, ಅತ್ಯಂತ ಆತ್ಮೀಯತೆ ಹಾಗೂ ನಂಬಿಕೆಯಿಂದ ಕೂಡಿತ್ತು. ಬೆಳಿಗ್ಗೆ ಎದ್ದ ತಕ್ಷಣ ಕ್ಷೌರಿಕನ ಮುಖ ನೋಡಬಾರದು ಎಂಬ ಅಂದಿನ ಕಾಲದ ಕಲ್ಪಿತ ಪದ್ಧತಿ ಹೋಗಲಾಡಿಸುವ ಸಲುವಾಗಿಯೇ ಬಸವಣ್ಣನವರು ತಮ್ಮ ಆಪ್ತ ಕಾರ್ಯದರ್ಶಿಯಾಗಿ ಹಡಪದ ಅಪ್ಪಣ್ಣನವರನ್ನು ಇಟ್ಟುಕೊಂಡಿದ್ದರು. ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ಬಸವಣ್ಣನವರು ಕಪ್ಪಡಿ ಸಂಗಮಕ್ಕೆ ನಿರ್ಗಮಿಸಿದಾಗಲೂ ಅಪ್ಪಣ್ಣನವರು ಅವರೊಂದಿಗೆ ತೆರಳಿದರು ಎಂದು ಸ್ಮರಿಸಿದರು.
ಹಿರಿಯ ಸಾಹಿತಿ ಡಾ.ಮಹಾಂತೇಶ ಮಲ್ಲನಗೌಡ್ರ, ಜಿಲ್ಲಾ ಬಸವ ಸಮಿತಿ ಅಧ್ಯಕ್ಷ ಬಸವರಾಜ ಬಳೊಳ್ಳಿ, ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ವಿ. ಕಣವಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ, ಜಿಲ್ಲಾ ಹಡಪದ ಸಮಾಜದ ಗೌರವ ಅಧ್ಯಕ್ಷ ಮಂಜುನಾಥ ಅಂದ್ರಾಳ, ತಾಲೂಕಾಧ್ಯಕ್ಷ ಮೌನೇಶ ಹಡಪದ, ಸಮಾಜದ ಮುಖಂಡ ಮಲ್ಲಿಕಾರ್ಜುನ್ ಮಿಟಿಕೆರಿ, ವಿ.ಬಿ. ಎಸ್ ವೀರಾಪುರ್, ಮುತ್ತು ಹುಬ್ಬಳ್ಳಿ, ಹನುಮಂತಪ್ಪ ಮುಂದೆ ಮುನಿರಾಬಾದ್, ನಿಂಗಪ್ಪ ಅಂದ್ರಾಳ, ಬಸಪ್ಪ ಹಲಗೇರಿ, ದ್ಯಾಮಣ್ಣ ಮಾದನೂರ್,ಈಶಪ್ಪ ಮುದ್ದಾಬಳ್ಳಿ, ಶರಣಪ್ಪ ಇಟಗಿ, ಸುರೇಖಾ ಅಂದಪ್ಪ ಬೆಟಿಗೇರಿ ಇತರರಿದ್ದರು. ಬಿ.ಎನ್.ಹೊರಪೇಟಿ ನಿರೂಪಿಸಿದರು. ಅನ್ನಪೂರ್ಣಮ್ಮ ಮನ್ನಾಪುರ ಹಾಗೂ ತಂಡದವರು ನಾಡಗೀತೆ, ವಚನ ಮತ್ತು ಸಂಗೀತ ಗಾಯನ ಮಾಡಿದರು.
ಮೆರವಣಿಗೆ:
ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಪ್ರಯುಕ್ತ ಹಡಪದ ಅಪ್ಪಣ್ಣನವರ ಭಾವಚಿತ್ರದ ಮೆರವಣಿಗೆಗೆ ದೋಟಿಹಾಳ, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಸನ್ನ ವಿ. ಗಡಾದ ಚಾಲನೆ ನೀಡಿದರು. ಮೆರವಣಿಗೆಯೂ ನಗರದ ಗದಗ ರಸ್ತೆಯ ಬನ್ನಿಕಟ್ಟಿ ಏರಿಯಾದ ಬಸವಪ್ರೀಯ ಹಡಪದ ಅಪ್ಪಣ್ಣ ಸಮುದಾಯದ ಭವನದಿಂದ ಆರಂಭಗೊಂಡು ಸಾಹಿತ್ಯ ಭವನದವರೆಗೆ ಜರುಗಿತು.