ಎಪಿಎಂಸಿಯಲ್ಲಿ ರೈತರಿಂದ ಕಮಿಷನ್ ವಸೂಲಿ ಮಾಡುವಂತಿಲ್ಲ

KannadaprabhaNewsNetwork |  
Published : Nov 24, 2026, 12:30 AM IST
23ಎಚ್ಎಸ್ಎನ್3 : ಈ ಸಂದರ್ಭದಲ್ಲಿ ಎಪಿಎಂಸಿ ಮುಂದೆ ಘೋಷಣೆಯನ್ನು ರೈತರು ಕೂಗಿದರು.  | Kannada Prabha

ಸಾರಾಂಶ

ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಅನುಕೂಲವಾಗುವಂತೆ ಕಟ್ಟೆ ವ್ಯವಸ್ಥೆ ಕಲ್ಪಿಸುವುದು, ಉತ್ಪನ್ನಗಳ ತೂಕದಲ್ಲಿ ವ್ಯತ್ಯಾಸವಾಗದಂತೆ ಪರಿಶೀಲಿಸಲು ತೂಕದ ಯಂತ್ರ ಅಳವಡಿಸುವುದು ಹಾಗೂ ರೈತರಿಗೆ ನೇರ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಯಾವುದೇ ವರ್ತಕರು ರೈತರಿಂದ ಕಮಿಷನ್ ಕೇಳಿದರೆ ಅಥವಾ ಅನಗತ್ಯ ತೊಂದರೆ ನೀಡಿದರೆ ದೂರು ಸಲ್ಲಿಸಲು ಕಾಲ್ ಸೆಂಟರ್‌ ಮತ್ತು ಸಹಾಯವಾಣಿ ವ್ಯವಸ್ಥೆ ಕಲ್ಪಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ. ರೈತರಿಗೆ ತೊಂದರೆಯಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲು ಅವಕಾಶ ಕಲ್ಪಿಸಲಾಗುವುದು. ನಿಯಮ ಉಲ್ಲಂಘಿಸಿ ಕಮಿಷನ್ ವಸೂಲಿ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ರೈತ ಸಂಘ ಒತ್ತಾಯಿಸಿದೆ.

ಕನ್ನಡಪ್ರಭ ವಾರ್ತೆ ಹಾಸನ

ಇನ್ನು ಮುಂದೆ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ಸಮಿತಿಯಲ್ಲಿ ರೈತರಿಂದ ಯಾವುದೇ ರೀತಿಯ ಕಮಿಷನ್ ವಸೂಲಿ ಮಾಡಬಾರದು ಹಾಗೂ ರೈತರಿಗೆ ಮಾರುಕಟ್ಟೆಯಲ್ಲಿ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು ಎಂಬ ಹಾಸನ ರೈತ ಸಂಘದ ನಿರಂತರ ಒತ್ತಾಯಕ್ಕೆ ಸ್ಪಂದಿಸಿರುವ ಎಪಿಎಂಸಿ ಅಧಿಕಾರಿಗಳು, ಈ ಸಂಬಂಧ ಹಲವು ಮಹತ್ವದ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದ್ದಾರೆ.

ಎಪಿಎಂಸಿ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ವರ್ತಕರು ಹಾಗೂ ರೈತರೊಂದಿಗೆ ಸೋಮವಾರ ನಡೆದ ಸಭೆಯಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು. ಈ ಸಂದರ್ಭದಲ್ಲಿ ಎಪಿಎಂಸಿ ಮುಂದೆ ಘೋಷಣೆಯನ್ನು ರೈತರು ಕೂಗಿದರು. ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ತಂದಾಗ ಯಾವುದೇ ರೀತಿಯ ಕಮಿಷನ್ ನೀಡುವ ಅಗತ್ಯವಿಲ್ಲ ಎಂಬುದನ್ನು ಸ್ಪಷ್ಟಪಡಿಸಲಾಯಿತು. ಕಮಿಷನ್ ವಸೂಲಿ ಮಾಡದಂತೆ ಮಾರುಕಟ್ಟೆಯಲ್ಲಿ ಸೂಚನಾ ಫಲಕಗಳನ್ನು ಅಳವಡಿಸುವುದಕ್ಕೂ ತೀರ್ಮಾನಿಸಲಾಯಿತು. ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಅನುಕೂಲವಾಗುವಂತೆ ಕಟ್ಟೆ ವ್ಯವಸ್ಥೆ ಕಲ್ಪಿಸುವುದು, ಉತ್ಪನ್ನಗಳ ತೂಕದಲ್ಲಿ ವ್ಯತ್ಯಾಸವಾಗದಂತೆ ಪರಿಶೀಲಿಸಲು ತೂಕದ ಯಂತ್ರ ಅಳವಡಿಸುವುದು ಹಾಗೂ ರೈತರಿಗೆ ನೇರ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಯಾವುದೇ ವರ್ತಕರು ರೈತರಿಂದ ಕಮಿಷನ್ ಕೇಳಿದರೆ ಅಥವಾ ಅನಗತ್ಯ ತೊಂದರೆ ನೀಡಿದರೆ ದೂರು ಸಲ್ಲಿಸಲು ಕಾಲ್ ಸೆಂಟರ್‌ ಮತ್ತು ಸಹಾಯವಾಣಿ ವ್ಯವಸ್ಥೆ ಕಲ್ಪಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ. ರೈತರಿಗೆ ತೊಂದರೆಯಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲು ಅವಕಾಶ ಕಲ್ಪಿಸಲಾಗುವುದು. ನಿಯಮ ಉಲ್ಲಂಘಿಸಿ ಕಮಿಷನ್ ವಸೂಲಿ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ರೈತ ಸಂಘ ಒತ್ತಾಯಿಸಿದೆ.ಇದೇ ವೇಳೆ ಜೋಳ ಸೇರಿದಂತೆ ಕೃಷಿ ಉತ್ಪನ್ನಗಳ ಮಾರಾಟ ಸಂದರ್ಭದಲ್ಲಿ ರೈತರಿಂದ ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತವಾಯಿತು. ೬೦ ಕೆ.ಜಿ. ಉತ್ಪನ್ನಕ್ಕೆ ೩೦೦ ಗ್ರಾಂ ಕಡಿತ ಮಾಡುವ ಪದ್ಧತಿ ಹಾಗೂ ಅದಕ್ಕೆ ಸಂಬಂಧಿಸಿದ ನಿಯಮಗಳ ಕುರಿತು ಚರ್ಚೆ ನಡೆಸಿ, ರೈತರಿಗೆ ಅನ್ಯಾಯವಾಗದಂತೆ ಕ್ರಮ ವಹಿಸುವಂತೆ ಮನವಿ ಮಾಡಲಾಯಿತು. ಈ ರೀತಿಯ ಸಮಸ್ಯೆಗಳು ಕಂಡುಬಂದಲ್ಲಿ ರೈತರು ಚೀಟಿಯೊಂದಿಗೆ ರೈತ ಸಂಘ ಅಥವಾ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ತಿಳಿಸಲಾಯಿತು. ರೈತರು ಬೆಳೆದ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ದೊರೆಯಬೇಕು. ಮಧ್ಯವರ್ತಿಗಳ ಹಾವಳಿ ಹಾಗೂ ಅನಗತ್ಯ ಕಮಿಷನ್ ಪದ್ಧತಿಯಿಂದ ರೈತರು ಮುಕ್ತರಾಗಬೇಕು. ರೈತರು ನೇರವಾಗಿ ಮಾರುಕಟ್ಟೆಯಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಅನುಕೂಲವಾಗುವ ವ್ಯವಸ್ಥೆ ರೂಪಿಸಬೇಕು ಎಂಬುದು ರೈತ ಸಂಘದ ಪ್ರಮುಖ ಬೇಡಿಕೆಯಾಗಿದೆ. ಸಭೆಯಲ್ಲಿ ಅಧಿಕಾರಿಗಳು ನೀಡಿರುವ ಭರವಸೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು. ಮುಂದಿನ ದಿನಗಳಲ್ಲಿ ರೈತರಿಗೆ ಯಾವುದೇ ರೀತಿಯ ಅನ್ಯಾಯ ಅಥವಾ ಕಮಿಷನ್ ವಸೂಲಿ ನಡೆದರೆ ರೈತ ಸಂಘದ ವತಿಯಿಂದ ಮತ್ತೆ ಹೋರಾಟ ನಡೆಸಬೇಕಾಗುತ್ತದೆ ಎಂದು ಸಂಘದ ಮುಖಂಡರು ಎಚ್ಚರಿಸಿದರು. ರೈತರ ಹಿತದೃಷ್ಟಿಯಿಂದ ನಡೆದ ಈ ಚರ್ಚೆಯ ಫಲವಾಗಿ ಹಲವು ಸಮಸ್ಯೆಗಳಿಗೆ ಪರಿಹಾರ ದೊರೆಯುವ ನಿರೀಕ್ಷೆ ವ್ಯಕ್ತವಾಗಿದೆ.ಸಭೆಯಲ್ಲಿ ರೈತ ಸಂಘದ ವರಿಷ್ಠರು ಕಣಗಾಲ್ ಮೂರ್ತಿ, ಬಿಟ್ಟಗೌಡನಹಳ್ಳಿ ಮಂಜು ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡಕ್ಕೆ ನುಡಿದಂತೆ ಬರೆಯುವ, ಬರೆದಂತೆ ನುಡಿವ ಅದ್ಭುತ ಶಕ್ತಿ
ಆಶಾ ಕಾರ್ಯಕರ್ತೆಯರ ನೋವಿಗೆ ಸರ್ಕಾರ ಸ್ಪಂದಿಸಲಿ: ಈಶ್ವರಪ್ಪ