The remarkable power in Kannada to write exactly as one speaks, and to speak exactly as one writes.

ಭದ್ರಾವತಿ: ಮಾತೃಭಾಷೆ ಉತ್ತುಂಗಕ್ಕೆ ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗರ ಕರ್ತವ್ಯವಾಗಿದೆ. ಕನ್ನಡ ಭಾಷೆ ನುಡಿದಂತೆ ಬರೆಯಬಹುದು, ಬರೆದಂತೆ ನುಡಿಯಬಹುದು. ಇಂತಹ ಅದ್ಭುತ ಶಕ್ತಿ ಕನ್ನಡ ಭಾಷೆಯಲ್ಲಿ ಮಾತ್ರ ಅಡಗಿದೆ ಎಂದು ನಗರದ ಮಹಾತ್ಮಗಾಂಧಿ ರಸ್ತೆ(ಟಿ.ಕೆ ರಸ್ತೆ) ಸರ್ಕಾರಿ ತಮಿಳು ಆಂಗ್ಲ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಎನ್. ಜ್ಯೋತಿ ಹೇಳಿದರು.

ಅವರು ಹಳೇನಗರದ ಶ್ರೀ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ತಾಲೂಕು ವೀರಶೈವ ಲಿಂಗಾಯತ ಮಹಿಳಾ ಸಮಾಜದಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಮಾತೃಭಾಷೆ ಬೆಳವಣಿಗೆಗೆ ಕೈಜೋಡಿಸುವ ಜೊತೆಗೆ ಮಕ್ಕಳಿಗೆ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ನೀಡಿ ಸತ್ಪ್ರಜೆಗಳನ್ನಾಗಿ ಮಾಡುವುದು ಪ್ರತಿಯೊಬ್ಬ ಪೋಷಕರ ಕರ್ತವ್ಯವಾಗಿದೆ ಎಂದರು

ಮಕ್ಕಳ ದಿನಾಚರಣೆ ಪ್ರಯುಕ್ತ ವಿಶೇಷವಾಗಿ ೧೦ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರಾದ ಶ್ರೀಯಾ ಎ ಸಜ್ಜನ್ ಮತ್ತು ಧನ್ಯ ಇವರನ್ನು ಮುಖ್ಯ ಅತಿಥಿಗಳಾಗಿ ಆಹ್ವಾನಿಸಲಾಗಿತ್ತು. ಸಮಾಜದ ಹಿರಿಯ ನಾಗರಿಕರಾದ ಗೀತಾ ಬೆಂಗಳೂರು, ಗೌರಮ್ಮ ಶಂಕರಯ್ಯ ಮತ್ತು ಜಯಮ್ಮ ಜನ್ನಾಪುರ ಅವರನ್ನು ಸನ್ಮಾನಿಸಲಾಯಿತು.

ಮಕ್ಕಳ ದಿನಾಚರಣೆಯ ಪ್ರಯುಕ್ತ ಮಕ್ಕಳಿಗೆ ಕ್ರೀಡಾಕೂಟ ಏರ್ಪಡಿಸಲಾಗಿತ್ತು. ಬಹುಮಾನ ವಿತರಣಾ ಕಾರ್ಯಕ್ರಮ ಸಮಾಜದ ನಿರ್ದೇಶಕಿ ವಾಣಿಶ್ರೀ ನಾಗರಾಜ್ ನಡೆಸಿಕೊಟ್ಟರು. ಗೌರವಾಧ್ಯಕ್ಷೆ ಆರ್.ಎಸ್ ಶೋಭಾ, ಉಪಾಧ್ಯಕ್ಷರಾದ ಯಶೋಧ ವೀರಭದ್ರಪ್ಪ, ನಾಗರತ್ನ ಮಲ್ಲಿಕಾರ್ಜುನ್, ನಿರ್ದೇಶಕಿ ಜ್ಯೋತಿ ಆರಾಧ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸಮಾಜದ ಅಧ್ಯಕ್ಷೆ ನಾಗರತ್ನ ವಾಗೀಶ್ ಕೋಠಿ ಅಧ್ಯಕ್ಷತೆ ವಹಿಸಿದ್ದರು. ಶಶಿಕಲಾ ಉದಯಕುಮಾರ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಕುಸುಮ ತೀರ್ಥಯ್ಯ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪರಿಮಳ ರೋಹಿತ್ ಕಾರ್ಯಕ್ರಮ ನಿರೂಪಿಸಿದರು.ಡಿ೨೩-ಬಿಡಿವಿಟಿ

ಭದ್ರಾವತಿ ಹಳೇನಗರದ ಶ್ರೀ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ತಾಲೂಕು ವೀರಶೈವ ಲಿಂಗಾಯತ ಮಹಿಳಾ ಸಮಾಜದಿಂದ ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆ ಆಯೋಜಿಸಲಾಗಿತ್ತು.