ಮಾಫಿಸಾಕ್ಷಿ: ಮೇಲ್ಮನವಿಗೆ ದರ್ಶನ್‌ಗೆ 1 ವಾರ ಟೈಂ

KannadaprabhaNewsNetwork |  
Published : Aug 12, 2026, 02:15 AM IST
ದರ್ಶನ್‌ | Kannada Prabha

ಸಾರಾಂಶ

ಮಾಫಿಸಾಕ್ಷಿಗೆ ಸಂಬಂಧಿಸಿ ಮೇಲ್ಮನವಿ ಸಲ್ಲಿಸಲು ದರ್ಶನ್‌ಗೆ ನ್ಯಾಯಾಲಯ 1 ವಾರ ಟೈಂ ನೀಡಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿ ಪರಿಗಣಿಸಲು ಕೋರಿ 14ನೇ ಆರೋಪಿ ಪ್ರದೋಷ್ ಸಲ್ಲಿಸಿರುವ ಅರ್ಜಿಗೆ ಆಕ್ಷೇಪಿಸಿ ವಾದ ಮಂಡಿಸಲು ಸಹ ಆರೋಪಿಗಳಿಗೆ ಹಕ್ಕಿಲ್ಲವೆಂದು ಸ್ಪಷ್ಟಪಡಿಸಿ ಸೋಮವಾರ ಹೊರಡಿಸಿರುವ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ದರ್ಶನ್‌ ಹಾಗೂ ಇತರೆ ಆರೋಪಿಗಳಿಗೆ ನಗರದ 59ನೇ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ ಒಂದು ವಾರ ಕಾಲಾವಕಾಶ ನೀಡಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯನ್ನು ಮಂಗಳವಾರವೂ ಮುಂದುವರಿಸಿದ ನ್ಯಾಯಾಧೀಶರಾದ ಸುಜಾತಾ ಎಂ.ಸಾಂಬ್ರಾಣಿ ಅವರು ಈ ಆದೇಶ ಮಾಡಿದರು. ಅಲ್ಲದೆ, ಪ್ರಕರಣದ 19ನೇ ಪ್ರಾಸಿಕ್ಯೂಷನ್‌ ಸಾಕ್ಷಿಯ ಪಾಟಿ ಸವಾಲು ಪ್ರಕ್ರಿಯೆ ವೇಳೆ ದರ್ಶನ್‌ ಖುದ್ದು ಹಾಜರಾಗಲು ಅನುಮತಿಸಬೇಕು ಎಂದು ಕೋರಿರುವ ಅರ್ಜಿಯ ವಿಚಾರಣೆಯನ್ನು ಆ.12ರಂದು ನಡೆಸಲಾಗುವುದು ಎಂದು ತಿಳಿಸಿದರು.

ಪ್ರದೂಷ್‌ ತನ್ನನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸಲು ಕೋರಿರುವ ಹಿನ್ನಲೆಯಲ್ಲಿ ಸುರಕ್ಷತೆ ದೃಷ್ಟಿಯಿಂದ ಆತನಿಗೆ ಜೈಲಿನಲ್ಲಿ ಅಗತ್ಯ ಭದ್ರತೆ ಕಲ್ಪಿಸಬೇಕು. ಪ್ರದೂಷ್‌ನನ್ನು ಜೈಲಿನ ಪ್ರತ್ಯೇಕ ಕೋಣೆಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ವಿಚಾರಣೆಗೆ ಹಾಜರುಪಡಿಸಬೇಕು ಎಂದು ಪರಪ್ಪನ ಅಗ್ರಹಾರ ಜೈಲಿನ ಅಧಿಕಾರಿಗಳಿಗೆ ನ್ಯಾಯಾಧೀಶರು ನಿರ್ದೇಶಿಸಿದ್ದಾರೆ.

ಇದಕ್ಕೂ ಮುನ್ನ ಪ್ರದೂಷ್‌ ಪರ ವಕೀಲರು ಹಾಜರಾಗಿ, ಮಾಫಿ ಸಾಕ್ಷಿಯನ್ನಾಗಿಸಲು ಕೋರಿ ಸಲ್ಲಿಸಿರುವ ಅರ್ಜಿಯನ್ನು ಶೀಘ್ರ ಇತ್ಯರ್ಥಪಡಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಆಕ್ಷೇಪಿಸಿದ ದರ್ಶನ್‌ ಪರ ಹಿರಿಯ ವಕೀಲ ಹಸ್ಮತ್‌ ಪಾಷಾ, ಪ್ರದೂಷ್‌ ಅರ್ಜಿಯನ್ನು ಆಕ್ಷೇಪಿಸಿ ವಾದ ಮಂಡಿಸಲು ತಮಗೆ ಹಕ್ಕಿಲ್ಲ ಎಂಬುದಾಗಿ ಆ.10ರಂದು ಈ ನ್ಯಾಯಾಲಯ ಆದೇಶ ಹೊರಡಿಸಿದೆ. ಆ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ನಾವು ಉದ್ದೇಶಿಸಿದ್ದೇವೆ. ಸದ್ಯ ಪ್ರದೋಷ್ ಅರ್ಜಿಯನ್ನು ಪರಿಗಣಿಸಿದರೆ, ಅದು ಸಹ ಆರೋಪಿಗಳ ಹಕ್ಕಿನ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಆ.10ರ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವುದಕ್ಕೆ ಒಂದು ವಾರ ಕಾಲಾವಕಾಶ ನೀಡಬೇಕು. ಅಲ್ಲಿಯವರೆಗೆ ಪ್ರದೋಷ್ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಬಾರದು ಎಂದು ಕೋರಿದರು. ಪ್ರಕರಣದ ಇತರೆ ಆರೋಪಿಗಳು ಸಹ ಇದೇ ರೀತಿ ಮನವಿ ಮಾಡಿದರು.

ಈ ಮನವಿಗೆ ತನಿಖಾಧಿಕಾರಿಗಳ ಪರ ಆಕ್ಷೇಪಿಸಿದ ವಿಶೇಷ ಸರ್ಕಾರಿ ಅಭಿಯೋಜಕ (ಎಸ್‌ಪಿಪಿ) ಪಿ.ಪ್ರಸನ್ನ ಕುಮಾರ್‌, ಮೇಲ್ಮನವಿ ಸಲ್ಲಿಸುವ ಹಕ್ಕಿನ ಆಧಾರದ ಮೇಲೆ ವಿಚಾರಣೆ ಮುಂದೂಡುವಂತೆ ಕೋರಲು ಅವಕಾಶವಿಲ್ಲ. ಹಾಗಾಗಿ, ಪ್ರದೂಷ್‌ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಿ ಇತ್ಯರ್ಥಪಡಿಸಬೇಕು ಎಂದು ಕೋರಿದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು, ಈ ನ್ಯಾಯಾಲಯ ಆ.10ರಂದು ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿ ಆರೋಪಿಗಳು ಮೇಲ್ಮನವಿ ಸಲ್ಲಿಸಲು ಆ.18ರವರೆಗೆ ಕಾಲಾವಕಾಶ ನೀಡಲಾಗುತ್ತಿದೆ. ಆದರೆ, ಪ್ರಕರಣದ ಸಾಕ್ಷಿಗಳ ವಿಚಾರಣೆ ಎಂದಿನಂತೆ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿ ಆದೇಶಿಸಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೈಕ್ಷಣಿಕ ಶ್ರೇಷ್ಠತೆಗೆ ಹೊಸ ಅಧ್ಯಾಯ ಬರೆದ ಎಕ್ಸಲೆಂಟ್
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರೈತಸಂಘ ಆಗ್ರಹ