ಮತದಾರರ ಪಟ್ಟಿಯಲ್ಲಿ ಮೃತಪಟ್ಟವರ ಹೆಸರುಗಳಿರುವುದು, ಒಂದೇ ವ್ಯಕ್ತಿಯ ಹೆಸರು ಹಲವು ಮತಗಟ್ಟೆಗಳಲ್ಲಿ ಕಾಣಿಸಿಕೊಳ್ಳುವುದು ಸೇರಿದಂತೆ ಹಲವು ಅಕ್ರಮಗಳ ಆರೋಪಗಳಿವೆ. ಇವುಗಳನ್ನು ದಾಖಲೆಗಳ ಆಧಾರದಲ್ಲಿ ಪರಿಶೀಲಿಸಿ, ಅರ್ಹರನ್ನು ಉಳಿಸಿಕೊಂಡು ಅನರ್ಹರ ಹೆಸರುಗಳನ್ನು ತೆಗೆದುಹಾಕಬೇಕು.

ಹುಬ್ಬಳ್ಳಿ:

ಮತದಾರರ ಪಟ್ಟಿಯಲ್ಲಿರುವ ಬೋಗಸ್, ಒಂದಕ್ಕಿಂತ ಹೆಚ್ಚು ಕಡೆ ನೋಂದಣಿಯಾಗಿರುವ ಹಾಗೂ ಮೃತಪಟ್ಟವರ ಹೆಸರನ್ನು ಪತ್ತೆ ಹಚ್ಚಿ ತೆಗೆದು ಹಾಕಲು ಎಸ್‌ಐಆರ್ ಅಗತ್ಯವಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತದಾರರ ಪಟ್ಟಿಯಲ್ಲಿ ಮೃತಪಟ್ಟವರ ಹೆಸರುಗಳಿರುವುದು, ಒಂದೇ ವ್ಯಕ್ತಿಯ ಹೆಸರು ಹಲವು ಮತಗಟ್ಟೆಗಳಲ್ಲಿ ಕಾಣಿಸಿಕೊಳ್ಳುವುದು ಸೇರಿದಂತೆ ಹಲವು ಅಕ್ರಮಗಳ ಆರೋಪಗಳಿವೆ. ಇವುಗಳನ್ನು ದಾಖಲೆಗಳ ಆಧಾರದಲ್ಲಿ ಪರಿಶೀಲಿಸಿ, ಅರ್ಹರನ್ನು ಉಳಿಸಿಕೊಂಡು ಅನರ್ಹರ ಹೆಸರುಗಳನ್ನು ತೆಗೆದುಹಾಕಬೇಕು ಎಂದು ಒತ್ತಾಯಿಸಿರುವ ಅವರು, ಚುನಾವಣಾ ಆಯೋಗದ ಎಸ್‌ಐಆರ್ ಕ್ರಮವನ್ನು ಸ್ವಾಗತಿಸಿದ್ದಾರೆ.

ರಾಜ್ಯದಲ್ಲಿ ಬಾಂಗ್ಲಾದೇಶಿ ಹಾಗೂ ರೋಹಿಂಗ್ಯಾಗಳು ಮತದಾರರಾಗಿ ನೋಂದಣಿಯಾಗಿದ್ದಾರೆ ಎಂದು ಆರೋಪಿಸಿದ ಯತ್ನಾಳ, ಬೋಗಸ್ ಮತದಾರರು ಪತ್ತೆಯಾದರೆ ಕಾಂಗ್ರೆಸ್ ಸೇರಿದಂತೆ ಕೆಲವು ಪಕ್ಷಗಳಿಗೆ ಮುಂದಿನ ಚುನಾವಣೆಗಳಲ್ಲಿ ಹಿನ್ನಡೆಯಾಗಲಿದೆ ಎಂಬ ಭಯದಿಂದ ಎಸ್‌ಐಆರ್‌ಗೆ ವಿರೋಧ ವ್ಯಕ್ತಪಡಿಸಲಾಗುತ್ತಿದೆ ಎಂದರು.

ಸಿಎಂ ಗೂಂಡಾಗಿರಿ:

ಮತದಾರರ ಪಟ್ಟಿ ವಿಚಾರದಲ್ಲಿ ಮುಖ್ಯಮಂತ್ರಿಗಳು ಸೋಲುವ ಭೀತಿಯಿಂದ ಚುನಾವಣಾಧಿಕಾರಿಗಳ ಬಳಿ ತೆರಳಿ ಎಫ್‌ಐಆರ್‌ ದಾಖಲಿಸುವಂತೆ ಒತ್ತಡ ಹೇರುತ್ತಿರುವುದು ಸರಿಯಲ್ಲ. ಚುನಾವಣಾ ಆಯೋಗ ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯಬಾರದು ಎಂದು ಯತ್ನಾಳ ಮನವಿ ಮಾಡಿದ್ದಾರೆ.

ಬಿಜೆಪಿ ಮೌನ ಏಕೆ?

ಕೆಪಿಎಸ್‌ಸಿ ನೇಮಕಾತಿ ಅಕ್ರಮದ ಕುರಿತು ಬಿಜೆಪಿ ರಾಜ್ಯ ನಾಯಕತ್ವ ತನ್ನ ನಿಲುವು ಸ್ಪಷ್ಟಪಡಿಸಬೇಕು. ಈ ಪ್ರಕರಣದ ಸಿಬಿಐ ತನಿಖೆಗೆ ನಾವು ಒತ್ತಾಯಿಸಿದ್ದೇವೆ. ಆದರೆ, ಪಕ್ಷದ ಪ್ರಮುಖ ನಾಯಕರು ಈ ಕುರಿತು ವಿಧಾನಸಭೆಯಲ್ಲಾಗಲಿ, ಸಾರ್ವಜನಿಕವಾಗಿಯಾಗಲಿ ಗಂಭೀರವಾಗಿ ಮಾತನಾಡುತ್ತಿಲ್ಲ. ಈ ಹಗರಣದ ವಿರುದ್ಧ ಬಿಜೆಪಿ ನಿಲ್ಲುತ್ತದೆಯೇ ಅಥವಾ ಆರೋಪಿತರ ಪರ ನಿಲ್ಲುತ್ತದೆಯೇ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಒತ್ತಾಯಿಸಿದ್ದಾರೆ.

ಶಿಕ್ಷಕರು ಹಾಗೂ ಪದವೀಧರ ಕ್ಷೇತ್ರದ ಮತದಾರರು ವಿದ್ಯಾವಂತರಾಗಿದ್ದು, ರಾಜ್ಯದ ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಈ ಬಾರಿ ಜಾತಿ ಆಧಾರಿತ ಮತದಾನ ಮಾಡದೆ, ಪಕ್ಷಗಳ ಕಾರ್ಯವೈಖರಿ ಆಧರಿಸಿ ತೀರ್ಪು ನೀಡಬೇಕು ಎಂದ ಅವರು, ಈ ಬಾರಿ ಶಿಕ್ಷಕರು ಮತ್ತು ಪದವೀಧರ ಮತದಾರರು ಜಾತಿ, ವ್ಯಕ್ತಿ ಹಾಗೂ ಪಕ್ಷದ ಪ್ರಭಾವಕ್ಕೆ ಒಳಗಾಗದೆ ಮತ ಚಲಾಯಿಸಬೇಕು. ಈ ಚುನಾವಣೆ ರಾಜಕೀಯ ಪಕ್ಷಗಳಿಗೆ ಎಚ್ಚರಿಕೆ ಗಂಟೆಯಾಗಬೇಕು ಎಂದು ಯತ್ನಾಳ್ ಹೇಳಿದರು.